ಬೀದರ್ | ಹಬ್ಸಿಕೋಟೆ ಅತಿಥಿ ಗೃಹದಲ್ಲಿ ಯುವಕ ಅನುಮಾನಾಸ್ಪದ ಸಾವು : ಪ್ರಕರಣ ದಾಖಲು
ಮೃತ ಯುವಕ
ಬೀದರ್ : ನಗರದ ಹಬ್ಸಿಕೋಟೆ ಅತಿಥಿ ಗೃಹದಲ್ಲಿ ಯುವಕನೊರ್ವ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಇದೊಂದು ಕೊಲೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಭಾಲ್ಕಿ ತಾಲ್ಲೂಕಿನ ಗೋಧಿ ಹಿಪ್ಪರಗಾ ಗ್ರಾಮದ ನಿವಾಸಿ ಪರಮೇಶ್ (30) ಮೃತಪಟ್ಟ ಯುವಕನಗಿದ್ದಾನೆ.
ಈ ಕುರಿತು ಮೃತ ಯುವಕನ ಚಿಕ್ಕಪ್ಪ ಮಾತನಾಡಿ, ಪರಮೇಶ್ 10 ವರ್ಷದಿಂದ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಆತನಿಗೆ ಒರ್ವ ಯುವತಿ ಸಮಸ್ಯೆ ಮಾಡುತ್ತಿದ್ದಳು. ವಿಷಯ ತಿಳಿದು ನಾವು ಆತನನ್ನು ಮನೆಗೆ ಕರೆದುಕೊಂಡು ಬಂದಿದ್ದೇವೆ. ಆದರೆ, ಆ ಯುವತಿ ಪರಮೇಶ್ ನನ್ನು ಪ್ರೀತಿಸಿ ಮದುವೆಯಾಗಿದ್ದೇನೆ ಎಂದು ಬೆಂಗಳೂರಲ್ಲಿ ಪ್ರಕರಣ ದಾಖಲಿಸಿದ್ದಳು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ಜಾಮೀನು ಪಡೆದುಕೊಂಡು ಮನೆಗೆ ಕರೆದುಕೊಂಡು ಬಂದಿದ್ದೇವೆ. ಅದಾದ ನಂತರ ಶುಕ್ರವಾರ (ಆ. 8)ರ ಬೆಳಿಗ್ಗೆ ಸುಮಾರು 10 ಗಂಟೆಗೆ ಆ ಯುವತಿ ಜೊತೆಗೆ ಇನ್ನೊರ್ವ ಮಹಿಳೆ ನಮ್ಮ ಮನೆಗೆ ಬಂದಿದ್ದಾರೆ. ನಾನು ಮಹಿಳಾ ಆಯೋಗದವಳು ಎಂದು ನಮ್ಮನ್ನು ಹೆದರಿಸಿದ್ದಾರೆ. ಆದರೆ ನಾವು ಅದೇನೆ ಇದ್ದರೂ ಕೋರ್ಟ್ ನಲ್ಲಿ ನೋಡೋಣ ಎಂದು ಹೇಳಿ ಕಳುಹಿಸಿದ್ದೇವೆ ಎಂದು ತಿಳಿಸಿದ್ದಾರೆ.
ಅದಾದ ಬಳಿಕ ನನ್ನ ಮಗ ಮತ್ತು ನಮ್ಮ ಸಹೋದರಳಿಯ ಶಿರಡಿಗೆ ಹೋಗುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಆತನನ್ನು ನಗರದ ಗೆಸ್ಟ್ ಹೌಸ್ ಗೆ ಕರೆದುಕೊಂಡು ಹೋಗಿದ್ದಾರೆ. ಅವನ ಜೊತೆಗಿದ್ದ ಯುವಕನನ್ನು ಬೇರೆ ಕಡೆಯಲ್ಲಿಟ್ಟು ಈತನನ್ನು ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಮಾತನಾಡಿ, ನಗರದ ಅತಿಥಿ ಗೃಹ ಒಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಯುವಕನೊರ್ವನ ಮೃತದೇಹವನ್ನು ರಾತ್ರಿ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಬೆಳಿಗ್ಗೆ ಆತನ ಪೋಷಕರು ಬಂದು ಇದು ಕೊಲೆ ಎಂದು ಆರೋಪಿಸಿದ್ದಾರೆ. ಮೃತ ಹುಡುಗನನ್ನು ಕರೆದುಕೊಂಡು ನಗರದ ಅತಿಥಿ ಗೃಹದಲ್ಲಿ ಇರಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಬಂದ ಮಹಿಳೆಗೂ ಮತ್ತು ಮಹಿಳಾ ಆಯೋಗಕ್ಕೂ ಯಾವುದೇ ಸಂಬಂಧವಿಲ್ಲ. ಆಕೆ ತನ್ನದೇಯಾದ ಒಂದು ಚಾರಿಟೇಬಲ್ ಟ್ರಸ್ಟ್ ಮತ್ತು ಎನ್ ಜಿ ಒ ನಡೆಸುತ್ತಿದ್ದಾಳೆ. ಸದ್ಯಕ್ಕೆ ನಾವು ಈ ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.