ಬೀದರ್ | 21ನೇ ಶತಮಾನಕ್ಕೆ ವಚನ ಸಾಹಿತ್ಯ ಮಾರ್ಗದರ್ಶನವಾಗಬೇಕಿದೆ : ಡಾ.ಪುರುಷೋತ್ತಮ ಬಿಳಿಮಲೆ
ಬೀದರ್ : ವಚನ ಸಾಹಿತ್ಯದಲ್ಲಿ ಅದ್ಭುತ ಶಕ್ತಿ ಅಡಗಿದೆ. ಇಂದಿನ 21ನೇ ಶತಮಾನಕ್ಕೆ ವಚನ ಸಾಹಿತ್ಯ ಮಾರ್ಗದರ್ಶನವಾಗಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಅಭಿಪ್ರಾಯಪಟ್ಟರು.
ಇಂದು ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ್ ಗುರುಕುಲದ ಅನುಭವ ಮಂಟಪದಲ್ಲಿ ಅಮೃತ ಮಹೋತ್ಸವ ಸ್ವಾಗತ ಸಮಿತಿ ವತಿಯಿಂದ ಆಯೋಜಿಸಿದ್ದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ನಡೆದು ಬಂದ ದಾರಿ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿಭಾಗದಲ್ಲಿ ವಚನ ಸಾಹಿತ್ಯ ಮತ್ತು ಕನ್ನಡ ಭಾಷೆಯ ಸಂರಕ್ಷಣೆಯಲ್ಲಿ ಹಿರೇಮಠ ಸಂಸ್ಥಾನದ ಕೊಡುಗೆ ಅನನ್ಯವಾಗಿದೆ. ನಿಜಾಂನ ಆಳ್ವಿಕೆಯಲ್ಲಿ ಡಾ.ಚನ್ನಬಸವ ಪಟ್ಟದ್ದೇವರು ಹೊರಗಡೆ ಉರ್ದು ಬೋರ್ಡ ಅಳವಡಿಸಿ ಒಳಗಡೆ ಕನ್ನಡ ಕಲಿಸಿ ಭಾಷೆಯ ಅಭಿಮಾನ ಮೆರೆದು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಸ್ವತಂತ್ರ ಪೂರ್ವ ಮತ್ತು ನಂತರದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಈ ಭಾಗವನ್ನು ಬೆಳಗಿಸುವ ಕೆಲಸ ಮಾಡಿದ್ದಾರೆ. ಡಾ.ಬಸವಲಿಂಗ ಪಟ್ಟದ್ದೇವರು ಕೂಡ ತಮ್ಮ ಹಿರಿಯ ಪೂಜ್ಯರ ದಾರಿಯಲ್ಲಿ ನಡೆದು ಬಡವರು, ದುರ್ಬಲ ವರ್ಗದವರಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ಆದರ್ಶಪ್ರಾಯವಾಗಿದ್ದಾರೆ. ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯ ಮಾಡುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆ ತರಿಸಿದೆ ಎಂದರು.
ಇತ್ತೀಚಿಗೆ ರಾಜ್ಯದಲ್ಲಿ ಅನ್ಯ ಭಾಷೆಗಳ ಹಾವಳಿ ಹೆಚ್ಚಿದ್ದು, ಕನ್ನಡ ಭಾಷೆ ದಯನೀಯ ಸ್ಥಿತಿಗೆ ತಲುಪಿದೆ. ಇದು ಹೀಗೆ ಮುಂದುವರೆದರೇ ಮುಂದಿನ ಎರಡು ಮೂರು ದಶಕಗಳಲ್ಲಿ ಕನ್ನಡ ಕೇವಲ ಮಾತನಾಡುವ ಭಾಷೆಯಾಗಿ ಉಳಿಯಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಇದುವರೆಗೆ 250 ಭಾಷೆಗಳು ಅಸ್ತಿತ್ವ ಕಳೆದು ಕೊಂಡಿವೆ. ಅನ್ಯ ಭಾಷೆಗಳು ವೇಗವಾಗಿ ಬೆಳೆಯುತ್ತಿವೆ. ರಾಜ್ಯದಲ್ಲಿ ಆಂಗ್ಲ ಶಾಲೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದರಿಂದ ಕನ್ನಡ ಭಾಷೆ ಬೆಳವಣಿಗೆ ಕುಸಿಯುತ್ತಿದೆ. ಹಾಗಾಗಿ ಕನ್ನಡ ಭಾಷೆ ಉಳಿಯಬೇಕಾದರೆ ಸರಕಾರ ರಾಜ್ಯ ಶಿಕ್ಷಣ ನೀತಿ ತರುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು ಕೂಡ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲು ಧ್ವನಿ ಎತ್ತಬೇಕು ಎಂದು ತಿಳಿಸಿದರು.
ಪತ್ರಕರ್ತ ಸಿದ್ದಪ್ಪ ಮೂಲಗೆ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಸೂರ್ಯ ಫೌಂಡೇಶನ್ ಅಧ್ಯಕ್ಷ ಅನಂತ ಬಿರಾದಾರ್, ಮಾಣಿಕನಗರ ಮಾಣಿಕಪ್ರಭು ಸಂಸ್ಥಾನದ ಆನಂದ್ ಮಹಾರಾಜರು, ಹಿರಿಯ ಸಾಹಿತಿ ಡಾ.ಕಲ್ಯಾಣರಾವ್ ಪಾಟೀಲ್, ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ಗೀತಾ ಈಶ್ವರ್ ಖಂಡ್ರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿ, ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರೇಷ್ಮಾ ಕೌರ್ ಹಾಗೂ ಹಿರಿಯ ಸಾಹಿತಿ ಜಗನ್ನಾಥ ಹೆಬ್ಬಾಳೆ ಸೇರಿದಂತೆ ಹಲವರು ಇದ್ದರು.