ಬೀದರ್ | ಕೋಮುಗಲಭೆಗೆ ಪ್ರಚೋದಿಸುವ ಆರೆಸೆಸ್ಸ್, ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು : ಬಾಬುರಾವ್ ಹೊನ್ನಾ
ಭಾರತ ಕಮ್ಯೂನಿಸ್ಟ್ ಪಕ್ಷದ 25ನೇ ಜಿಲ್ಲಾ ಸಮ್ಮೇಳನ
ಬೀದರ್ : ಕೋಮುಗಲಭೆಗೆ ಪ್ರಚೋದಿಸುವ ಆರೆಸೆಸ್ಸ್ ಮತ್ತು ಬಿಜೆಪಿ ವಿರುದ್ಧ ಎಡಪಂಥೀಯ, ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ಶಕ್ತಿಗಳು ಒಂದಾಗಿ ಹೋರಾಡಬೇಕು ಎಂದು ಬಾಬುರಾವ್ ಹೊನ್ನಾ ಅವರು ಕರೆ ನೀಡಿದರು.
ನಗರದ ಸ್ಟಾರ್ ಲಾಡ್ಜ್ ಸಭಾಂಗಣದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ಬೀದರ ಜಿಲ್ಲಾ ಮಂಡಳಿಯ 25ನೇ ಜಿಲ್ಲಾ ಸಮ್ಮೇಳನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭಾರತದ ಆರ್ಥಿಕ ನೀತಿ ಸತ್ತಿದೆ ಎನ್ನುವ ಅಮೆರಿಕನ್ ಸಾಮ್ರಾಜ್ಯಶಾಹಿಯನ್ನು ತೀವ್ರವಾಗಿ ಖಂಡಿಸಿದ ಅವರು, ಪ್ರಸ್ತುತ ಭಾರತದ ಆರ್ಥಿಕತೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಬಿ. ಅಮ್ಜದ್ ಅವರು ಮಾತನಾಡಿ, ಅಮೆರಿಕದ ಡೋನಾಲ್ಡ್ ಟ್ರಂಪ್ ಭಾರತಕ್ಕೆ ನೀಡಿದ ಆರ್ಥಿಕ ಬೆದರಿಕೆಗಳನ್ನು ಉಲ್ಲೇಖಿಸಿ, ಬಿಜೆಪಿ ಸರ್ಕಾರ ಇದಕ್ಕೆ ಸಮರ್ಪಕ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಸ್ವಾಮಿನಾಥನ್ ಆಯೋಗ ಶಿಫಾರಸ್ಸಿನಂತೆ ಎಂ.ಎಸ್.ಪಿ ಕಾನೂನು ಜಾರಿಗೆ ಮಾಡಬೇಕು ಎಂದು ಒತ್ತಾಯಿಸಿದರು.
ಅಖಿಲ ಭಾರತ ಕಿಸಾನ್ ಸಭಾ ರಾಜ್ಯಾಧ್ಯಕ್ಷ ಮೌಲಾಮುಲ್ಲಾ ಅವರು ಮಾತನಾಡಿದರು.
ಸಮ್ಮೇಳನದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಜಿಲ್ಲಾ ಮಂಡಳಿಗೆ 21 ಸದಸ್ಯರ ಆಯ್ಕೆ ಮಾಡಲಾಯಿತು. ಜಿಲ್ಲಾ ಕಾರ್ಯದರ್ಶಿಯಾಗಿ ನಝೀರ್ ಅಹ್ಮದ್, ಸಹ ಕಾರ್ಯದರ್ಶಿಗಳಾಗಿ ರಾಮಯ್ಯಾ ಮಠಪತಿ ಮತ್ತು ಎಂ.ಡಿ ಶಫಾಯತ್ ಅಲಿ, ಖಜಾಂಚಿಯಾಗಿ ಜೈಶೀಲ್, ಸದಸ್ಯರಾಗಿ ಬಾಬುರಾವ್ ಹೊನ್ನಾ, ಸಿಂಧು ತಾಯಿ ಮಾನೆ ಹಾಗೂ ಸೂರ್ಯಕಾಂತ್ ಮದಕಟ್ಟಿ ಸೇರಿದಂತೆ ಪ್ರಮುಖ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಲಾಯಿತು.