7ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ : ನಾಳೆ (ನ.19) ಬೀದರ್ ಬಂದ್‌ಗೆ ಕರೆ
ಬೀದರ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಏಳನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದಿಂದ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ನ.19ರಂದು ಬೀದರ್ ಬಂದ್‌ಗೆ ರೈತ ಮುಖಂಡರು ಕರೆ ನೀಡಿದ್ದಾರೆ.
ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಆದ್ದರಿಂದ ಬೀದರ್ ಬಂದ್‌ಗೆ ಕರೆ ನೀಡಿದ್ದೇವೆ. ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ನ. 19ರಂದು ಬೆಳಿಗ್ಗೆ ನಗರದಲ್ಲಿ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗುವುದು. ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಸಾರಿಗೆ ಇಲಾಖೆಗೆ ಸೂಚಿಸಲಾಗಿದ್ದು, ಬಸ್‌ಗಳ ಸಂಚಾರ ಸಂಪೂರ್ಣ ಬಂದ್ ಆಗಲಿದೆ. ಗಾಂಧಿ ಗಂಜ್ ಮಾರುಕಟ್ಟೆಯನ್ನೂ ಸಂಪೂರ್ಣವಾಗಿ ಮುಚ್ಚಲಾಗುವುದು. ಆಸ್ಪತ್ರೆಗಳು ಹಾಗೂ ಮೆಡಿಕಲ್‌ಗಳು ಮಾತ್ರ ತೆರೆದಿರಲಿವೆ ಎಂದು ರೈತರು ತಿಳಿಸಿದ್ದಾರೆ.
ಬೈಕ್ ರ‍್ಯಾಲಿ ಬಳಿಕ ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಂಗಲಗಿ ಟೋಲ್ ಗೇಟ್‌ಗೆ ತೆರಳಿ ರಸ್ತೆ ತಡೆ ನಡೆಸಲಿದ್ದಾರೆ. ಇನ್ನು ಕೆಲ ರೈತರು ನಗರದಲ್ಲಿಯೇ ಪ್ರತಿಭಟನೆ ನಡೆಸಲಿದ್ದಾರೆ. ಜಿಲ್ಲೆಯ ಪ್ರತಿ ಪಟ್ಟಣ ಹಾಗೂ ಹೋಬಳಿಗಳಲ್ಲಿಯೂ ಸ್ಥಳೀಯ ರೈತರು ಬಂದ್‌ಗೆ ಬೆಂಬಲವಾಗಿ ಪ್ರತಿಭಟನೆ ನಡೆಸಲಿದ್ದಾರೆ. ಸರ್ಕಾರ ಬೇಡಿಕೆಗಳನ್ನು ಈಡೇರಿಸಿದರೆ ಬೀದರ್ ಬಂದ್ ಕರೆಯನ್ನು ಹಿಂಪಡೆಯಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.
ರೈತರ ಪ್ರಮುಖ ಬೇಡಿಕೆಗಳಲ್ಲಿ ಪ್ರತಿ ಟನ್ ಕಬ್ಬಿಗೆ 4 ಸಾವಿರ ರೂ. ಮುಂಗಡ ಹಣ ಘೋಷಣೆ ಮಾಡುವುದು, ಪ್ರತಿ ಟನ್ ಕಬ್ಬಿಗೆ ಎಸ್‌ಎಪಿ ಅಡಿಯಲ್ಲಿ 1 ಸಾವಿರ ರೂ. ನಿಗದಿಪಡಿಸುವುದು, ಬಿಎಸ್‌ಎಸ್‌ಕೆ ಕಾರ್ಖಾನೆಯನ್ನು ತಕ್ಷಣ ಲೀಸ್‌ಗೆ ನೀಡುವುದು, ಜಿಲ್ಲೆಯ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು ಸೇರಿವೆ. ಅಲ್ಲದೆ, ಶೇ. 100ರಷ್ಟು ಬೆಳೆ ವಿಮೆ ಹಣ ಪಾವತಿಸಬೇಕು, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಯೋಜನೆಗಳಡಿ ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ಒದಗಿಸಬೇಕು ಹಾಗೂ ಸ್ವಾಮಿನಾಥನ್ ವರದಿಯನ್ನು ಕಾಯ್ದೆಯಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಮಲ್ಲಿಕಾರ್ಜುನ ಸ್ವಾಮಿ, ಬಾಬುರಾವ್ ಹೊನ್ನಾ, ಮಾರುತಿ ಬೌದ್ದೆ, ಗುಂಡು ರೆಡ್ಡಿ, ಚಂದ್ರಶೇಖರ್ ಪಾಟೀಲ್ ಹುಚಕನಳ್ಳಿ, ಶಾಂತಮ್ಮ ಮೂಲಗೆ ಹಾಗೂ ವೀರಾರೆಡ್ಡಿ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.