ಹುಲಸೂರ್‌: ಹುಲಸೂರ್‌ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದು, ರೈತರ ಕೃಷಿ ಸಾಲ ಮನ್ನಾ ಮಾಡುವುದು ಹಾಗೂ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಶನಿವಾರ ನಾಲ್ಕನೇ ದಿನವೂ ಮುಂದುವರಿಯಿತು.

ತಹಸೀಲ್ದಾರ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ರೈತರು ಕಪ್ಪುಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಾಮಖಂಡಿ, ತೋಗಲೂರ್‌, ಹಾಲಹಳ್ಳಿ, ಗಡಿಗೌಡಗಾಂವ್‌, ದೇವನಾಳ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ರೈತರು ಧರಣಿಯಲ್ಲಿ ಭಾಗವಹಿಸಿದರು.

ರೈತ ಮುಖಂಡ ಡಾ. ಶಂಕರಗೌಡ ಮಾತನಾಡಿ, ತಾಲೂಕಿನ ವಾಸ್ತವ ಪರಿಸ್ಥಿತಿಯನ್ನು ಆಧರಿಸಿ ಮತ್ತೊಮ್ಮೆ ವೈಜ್ಞಾನಿಕ ಬೆಳೆ ಸಮೀಕ್ಷೆ ನಡೆಸಿ ಹುಲಸೂರ್‌ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು. ಸರ್ಕಾರ ಈ ಬೇಡಿಕೆ ಈಡೇರಿಸುವವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ತಾಲೂಕು ಕಾರ್ಯದರ್ಶಿ ರಾಜಕುಮಾರ್‌ ನಿಡೋದೆ ಮಾತನಾಡಿ, ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಘೋಷಿಸಬೇಕು. ಕೇವಲ ಸಾಂತ್ವನ ಹೇಳುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.

ಧರಣಿ ವೇಳೆ ರೈತ ರುದ್ರಪ್ಪ ಯರಭಾಗ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ಅವರನ್ನು ತಕ್ಷಣ ಆಂಬುಲೆನ್ಸ್ ಮೂಲಕ ಹುಲಸೂರ್‌ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಸಂಜೆ ಸುಮಾರು ಅರ್ಧ ಗಂಟೆ ಜಿಟಿಜಿಟಿ ಮಳೆ ಸುರಿದರೂ ರೈತರು ಧರಣಿ ಸ್ಥಳ ತೊರೆಯದೆ ಮಳೆಯಲ್ಲೇ ಪ್ರತಿಭಟನೆ ಮುಂದುವರಿಸಿದರು. ಆರಂಭಿಕ ಮಳೆಯ ನಂತರ ಮಳೆ ಕೈಕೊಟ್ಟ ಪರಿಣಾಮ ಮೊದಲ ಹಂತದ ಬೆಳೆ ಹಾನಿಗೊಂಡಿದ್ದು, ಎರಡನೇ ಬಾರಿ ಬಿತ್ತನೆ ಮಾಡಿದ ಬೆಳೆಗಳೂ ತೇವಾಂಶ ಕೊರತೆಯಿಂದ ಒಣಗುತ್ತಿವೆ ಎಂದು ರೈತರು ಅಳಲು ತೋಡಿಕೊಂಡರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್‌ ಸ್ವಾಮಿ, ರಾಜ್ಯ ಸಮಿತಿ ಸದಸ್ಯ ವೀರರೆಡ್ಡಿ ಪಾಟೀಲ್‌, ತಾಲೂಕಾಧ್ಯಕ್ಷ ಬಸವರಾಜ್‌ ಚೌರೆ, ಖಜಾಂಚಿ ಶಿವಕುಮಾರ್‌ ಕನ್ನಾಡೆ, ಉಪಾಧ್ಯಕ್ಷ ಸುನೀಲ್‌ ಭೂಜಂಗೆ, ನವಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ನೂರ್‌ ಅಹ್ಮದ್, ನಾಗನಾಥ್ ತೊಗರಗೆ, ಬಸವರಾಜ್‌ ಆದೇಪ್ಪ, ಅಶೋಕ್‌ ಕಾಡಾದಿ, ಅಶೋಕ್‌ ಗೋಟೆ೯, ಮಚೇಂದ್ರ ಗೋಖಲೆ, ಧನರಜ್‌ ಕಾರಗಿರ್‌, ವೀರಪ್ಪ ಬಾಲಕುಂದೆ, ಅಪ್ಪರಾವ್‌ ಖಂಡಾಳೆ, ರಮೇಶ್ ಭೋಪಳೆ, ಜಗನ್ನಾಥ್ ಬಡದಾಳೆ, ನಾಗನಾಥ್ ಬನಸೂಡೆ, ಶಿವರಾಜ್‌ ಕೌಟೆ, ಸೋಮನಾಥ್ ನಂದಗೆ, ಮಲ್ಲಿಕಾರ್ಜುನ್‌ ಧಬಾಲೆ ಹಾಗೂ ಭರತರಾವ್‌ ಭೂಸಾರೆ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor