×
Ad

ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಮನವಿ

Update: 2026-06-21 17:22 IST

ಬೀದರ್ : ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯಾದ ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್‌) ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಹಾಗೂ ಬೀದರ್‌ ಜಿಲ್ಲಾ ಜನಪರ ಸಂಘಟನೆಗಳು ಮನವಿ ಸಲ್ಲಿಸಿವೆ.

ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಗೆ ಶನಿವಾರ ಸಲ್ಲಿಸಿದ ಮನವಿಯಲ್ಲಿ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ಕಳೆದ 1,500 ದಿನಗಳಿಂದ ನಿರಂತರವಾಗಿ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಅದಕ್ಕೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ತಿಳಿಸಲಾಗಿದೆ.

ಏಮ್ಸ್‌ಗಾಗಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆಗುತ್ತಿರುವ ಪ್ರಾದೇಶಿಕ ಅನ್ಯಾಯದ ವಿರುದ್ಧವಾಗಿದೆ.‌ ಈ ಹಿಂದೆ ರಾಯಚೂರು ಜಿಲ್ಲೆಗೆ ಮಂಜೂರು ಆಗಬೇಕಿದ್ದ ಐಐಟಿ ರಾಜಕೀಯ ಒತ್ತಡದಿಂದ ಧಾರವಾಡಕ್ಕೆ ಸ್ಥಳಾಂತರಗೊಂಡಿದ್ದು, ಇದು ಜಿಲ್ಲೆಯ ಜನರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ. ಯಾವುದೇ ಒತ್ತಡಗಳಿಗೆ ಮಣಿಯದೆ ಕೇಂದ್ರ ಸರ್ಕಾರ ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸಬೇಕು ಎಂದು ಆಗ್ರಹಿಸಲಾಗಿದೆ.

ರಾಯಚೂರು ಜಿಲ್ಲೆ ಏಮ್ಸ್ ಸ್ಥಾಪನೆಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಹೊಂದಿದ್ದು, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸಂಪರ್ಕ, ವಿಮಾನ ನಿಲ್ದಾಣ, ಸಾಕಷ್ಟು ಸರ್ಕಾರಿ ಭೂಮಿ, ನೀರಿನ ಲಭ್ಯತೆ ಇದೆ. ಜಿಲ್ಲೆಯಲ್ಲಿ ಎರಡು ವಿಶ್ವವಿದ್ಯಾಲಯಗಳು, ವೈದ್ಯಕೀಯ ಕಾಲೇಜು, ದಂತ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಉಲ್ಲೇಖಿಸಲಾಗಿದೆ.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಸಂಯೋಜಕ ವಿನಯಕುಮಾರ್ ಮಾಳಗೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ರಾಜ್ಯ ಸಂಯೋಜಕ ಅಂಬೇಡ್ಕರ್‌ ಗೋರನಾಳಕರ್‌, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್‌ ಹೊಚಕನಳ್ಳಿ, ಜಾಗೃತ ಕರ್ನಾಟಕ ಸದಸ್ಯ ಬಾಲಾಜಿ ಕುಂಬಾರ್, ಟೀಮ್ ಯುವಾ ಸಂಸ್ಥೆಯ ಅಧ್ಯಕ್ಷ ತಥಾಗತ್ ಸೂರ್ಯವಂಶಿ, ಪ್ರಗತಿಪರ ದಲಿತ ಯುವ ಪಡೆ ಸಂಸ್ಥಾಪಕ ಶ್ರೀಧರ್‌ ಸೋಮನೋರ್‌ ಹಾಗೂ ರೀಶೈನ್ ಸಂಸ್ಥೆಯ ಅಧ್ಯಕ್ಷ ರೋಹನ್‌ ಕುಮಾರ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News