ಎಸ್‌ಎಂವಿಟಿ ಬೆಂಗಳೂರು-ಬೀದರ್ ವಿಶೇಷ ರೈಲು ಸೇವೆ ಶಾಶ್ವತ
ಬೀದರ್ : ಪ್ರಯಾಣಿಕರ ಬೇಡಿಕೆಯ ಮೇರೆಗೆ ಭಾರತೀಯ ರೈಲ್ವೆ ಎಸ್‌ಎಂವಿಟಿ ಬೆಂಗಳೂರು-ಬೀದರ್ ದ್ವೈವಾರದ ವಿಶೇಷ ರೈಲು ಸೇವೆಯನ್ನು ಶಾಶ್ವತ ರೈಲು ಸೇವೆಯಾಗಿ ಕ್ರಮಬದ್ಧಗೊಳಿಸಿದೆ ಎಂದು ಮಧ್ಯ ರೈಲ್ವೆ ಸೋಲಾಪುರ್ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸೇವೆಯಿಂದ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಪ್ರಮುಖ ನಗರಗಳು, ವಾಣಿಜ್ಯ, ಶೈಕ್ಷಣಿಕ, ತೀರ್ಥಯಾತ್ರೆ ಮತ್ತು ಆರೋಗ್ಯ ಕೇಂದ್ರಗಳಿಗೆ ಸಂಪರ್ಕ ಸುಲಭವಾಗಲಿದ್ದು, ಕಲಬುರಗಿ, ಶಹಾಬಾದ್, ವಾಡಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.
ಅಸ್ತಿತ್ವದಲ್ಲಿದ್ದ ವಿಶೇಷ ರೈಲು ಸಂಖ್ಯೆ 06539 ಅನ್ನು 16559 ಸಂಖ್ಯೆಯ ಎಸ್‌ಎಂವಿಟಿ ಬೆಂಗಳೂರು–ಬೀದರ್ ದ್ವೈವಾರದ ಶಾಶ್ವತ ರೈಲಾಗಿ ಮೇ 15, 2026ರಿಂದ ಕಾರ್ಯಗತಗೊಳಿಸಲಾಗುತ್ತಿದೆ. ಇದೇ ರೀತಿ 06540 ಸಂಖ್ಯೆಯ ಬೀದರ್–ಎಸ್‌ಎಂವಿಟಿ ಬೆಂಗಳೂರು ವಿಶೇಷ ರೈಲನ್ನು 16560 ಸಂಖ್ಯೆಯ ಶಾಶ್ವತ ಸೇವೆಯಾಗಿ ಪರಿವರ್ತಿಸಲಾಗಿದೆ.
ರೈಲು ಸಂಖ್ಯೆ 16559 ಪ್ರತಿ ಶುಕ್ರವಾರ ಮತ್ತು ಭಾನುವಾರ ರಾತ್ರಿ 9.15ಕ್ಕೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಟು ಮರುದಿನ ಮಧ್ಯಾಹ್ನ 12.15ಕ್ಕೆ ಬೀದರ್ ತಲುಪಲಿದೆ.
ರೈಲು ಸಂಖ್ಯೆ 16560 ಪ್ರತಿ ಶನಿವಾರ ಮತ್ತು ಸೋಮವಾರ ಮಧ್ಯಾಹ್ನ 2 ಗಂಟೆಗೆ ಬೀದರ್‌ನಿಂದ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.
ಈ ರೈಲುಗಳು ಹುಮನಾಬಾದ್, ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ಕೃಷ್ಣ, ರಾಯಚೂರು, ಮಂತ್ರಾಲಯ ರಸ್ತೆ, ಅದೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ ಹಾಗೂ ಯಲಹಂಕ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ.
ರೈಲಿನಲ್ಲಿ 1 ಎಸಿ-2 ಟೈರ್, 2 ಎಸಿ-3 ಟೈರ್, 11 ಸ್ಲೀಪರ್, 4 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 2 ಲಗೇಜ್ ಕಮ್ ಬ್ರೇಕ್ ವ್ಯಾನ್ ಸೇರಿ ಒಟ್ಟು 20 ಬೋಗಿಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.
ಈ ರೈಲುಗಳಿಗೆ ಮೀಸಲಾತಿ ಎಲ್ಲಾ ಗಣಕೀಕೃತ ಮೀಸಲಾತಿ ಕೇಂದ್ರಗಳಲ್ಲಿ ಹಾಗೂ IRCTC ಅಧಿಕೃತ ವೆಬ್‌ಸೈಟ್ www.irctc.co.in ನಲ್ಲಿ ಲಭ್ಯವಿರುತ್ತದೆ.
ರೈಲುಗಳ ವೇಳಾಪಟ್ಟಿ ಹಾಗೂ ನಿಲುಗಡೆ ವಿವರಗಳಿಗಾಗಿ www.enquiry.indianrail.gov.in ಅಥವಾ NTES ಮತ್ತು RailOne ಆ್ಯಪ್‌ಗಳನ್ನು ಬಳಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.