ಚಾಮರಾಜನಗರ: ಕೊನೆಗೂ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಗುಂಬಳ್ಳಿ ಗ್ರಾಮಸ್ಥರು
Update: 2026-05-20 10:16 IST
ಚಾಮರಾಜನಗರ: ಚಿರತೆಯ ಹಾವಳಿಯಿಂದ ಕಂಗಾಲಾಗಿದ್ದ ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಕೊನೆಗೂ ಚಿರತೆ ಸೆರೆ ಸಿಕ್ಕಿದೆ.
ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ಗುಂಬಳ್ಳಿ ಗ್ರಾಮಕ್ಕೆ ಕಳೆದ ಕೆಲವು ದಿನಗಳಿಂದ ಚಿರತೆಯೊಂದು ನುಗ್ಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ರಾತ್ರಿ ವೇಳೆ ಚಿರತೆಯ ಸಂಚಾರ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಹೊರ ಸಂಚಾರವನ್ನೇ ನಿಲ್ಲಿಸಿದ್ದರು ಎನ್ನಲಾಗಿದೆ.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸತೀಶ್ ಅವರಿಗೆ ಸೇರಿದ ಜಮೀನಿನಲ್ಲಿ ಚಿರತೆ ಸೆರೆಗೆ ಬೋನನ್ನು ಅಳವಡಿಸಿದ್ದರು. ಮಂಗಳವಾರ ತಡರಾತ್ರಿ ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳ ಕಾರ್ಯಾಚರಣೆಯಿಂದ ಚಿರತೆ ಸೆರೆ ಸಿಕ್ಕಿದ್ದು, ಗ್ರಾಮದಲ್ಲಿ ಉಂಟಾಗಿದ್ದ ಆತಂಕಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.