Chikkaballapur | ಹೆಣ್ಣು ಮಗುವನ್ನು ಸಂಪ್‌ಗೆ ಹಾಕಿ ತಂದೆಯಿಂದಲೇ ಹತ್ಯೆ

Update: 2026-07-23 23:57 IST

ಚಿಕ್ಕಬಳ್ಳಾಪುರ  : ನಗರದ ಶಾಂತಿನಗರ (ನಕ್ಕಲಕುಂಟೆ) ಪ್ರದೇಶದಲ್ಲಿ ಘಟನೆ ನಡೆದಿದ್ದು, 13 ದಿನಗಳ ನವಜಾತ ಹೆಣ್ಣು ಮಗುವನ್ನು ತಂದೆಯೇ ಮನೆಯ ನೀರಿನ ಸಂಪ್‌ಗೆ ಹಾಕಿ ಹತ್ಯೆ ಮಾಡಿರುವುದು ವರದಿಯಾಗಿದೆ.

ಶಾಂತಿನಗರ ನಿವಾಸಿ ಇಮ್ರಾನ್ ಅವರ ಪತ್ನಿ ಮುಸ್ಕಾನ್ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮತ್ತೆ ಹೆಣ್ಣು ಮಗು ಜನಿಸಿದ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಮಗು ಕಾಣಿಸದಿದ್ದಾಗ ತಾಯಿ ಅವರು ಗಾಬರಿಗೊಂಡು ಕೂಗಾಡಿದ್ದು,ಮನೆಯವರು ಎಚ್ಚೆತ್ತು ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಗುವನ್ನು ನೀರಿನ ಸಂಪ್‌ನಲ್ಲಿ ಹುಡುಕಿ ಎಂದು ಮಗುವಿನ ತಂದೆ ಇಮ್ರಾನ್ ಮಾಹಿತಿ ನೀಡಿದ್ದಾನೆ ಎಂದು ಮುಸ್ಕಾನ್ ತಂದೆ ತಿಳಿಸಿದ್ದಾರೆ. ತಕ್ಷಣ ಮಗುವನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಪರಿಶೀಲಿಸಿದಾಗ ಮಗು ಮೃತಪಟ್ಟಿರುವುದು ದೃಢಪಟ್ಟಿದೆ.

ಆರಂಭದಲ್ಲಿ ಮಗು ಆಕಸ್ಮಿಕವಾಗಿ ಮೃತಪಟ್ಟಿದೆ ಎಂದು ತಿಳಿಸಲಾಗಿತ್ತು. ಆದರೆ 13 ದಿನಗಳ ಮಗು ಸ್ವತಃ ತೆವಳುತ್ತಾ ಹೋಗಿ ಸಂಪ್‌ಗೆ ಬೀಳಲು ಸಾಧ್ಯವಿಲ್ಲ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕುಟುಂಬದ ಸದಸ್ಯರನ್ನು ವಿಚಾರಣೆ ನಡೆಸಿದ್ದು, ವಿಚಾರಣೆಯ ವೇಳೆ ಮಗುವಿನ ತಂದೆ ಇಮ್ರಾನ್ ತಪ್ಪೊಪ್ಪಿಕೊಂಡಿದ್ದಾರೆ. ಹೆಣ್ಣುಮಗು ಎಂಬ ಕಾರಣಕ್ಕೆ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ. ತನಿಖೆ ಮುಂದುವರಿದಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News