×
Ad

ತರೀಕೆರೆ: ಯುವಕ ನಾಪತ್ತೆ; ದೂರು ದಾಖಲು

Update: 2026-06-05 11:27 IST

ಚಿಕ್ಕಮಗಳೂರು, ಜೂ.5: ಮನೆಯಿಂದ ಹೊರಟು ಹೋದ ಯುವಕನೊಬ್ಬ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಬಾವಿಕೆರೆ ಗ್ರಾಮದ ನಿವಾಸಿ ರಶೀದಾ ಅವರ ಏಕೈಕ ಪುತ್ರ ಸಾದಿಕ್ (23) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ.

ವಿದ್ಯಾಭ್ಯಾಸ ಮುಗಿಸಿಕೊಂಡು ತಾಯಿಯೊಂದಿಗೆ ವಾಸವಾಗಿದ್ದ ಸಾದಿಕ್ ಜೂನ್ 1ರಂದು ಮನೆಯಿಂದ ಹೊರಟಿದ್ದು, ಬಳಿಕ ಮನೆಗೆ ಮರಳಿಲ್ಲ ಎಂದು ತಿಳಿದುಬಂದಿದೆ. ಅಂದು ಮಧ್ಯಾಹ್ನ ಸಂಬಂಧಿಕರ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದ ತಾಯಿ ರಶೀದಾ ಅವರಿಗೆ ಮನೆಗೆ ಬೀಗ ಹಾಕಿರುವುದು ಕಂಡುಬಂದಿದೆ.

ಬಳಿಕ ಮಗನ ಮೊಬೈಲ್‌ಗೆ ಕರೆ ಮಾಡಿದಾಗ, ಆತನ ಸ್ನೇಹಿತ ಕರೆ ಸ್ವೀಕರಿಸಿದ್ದು, ತಾವು ಇಬ್ಬರೂ ಪರಿಚಿತರೊಬ್ಬರ ಮದುವೆ ಆಮಂತ್ರಣ ಪತ್ರಿಕೆ ಹಂಚಲು ತೆರಳಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಆದರೆ ಕೆಲವೇ ಸಮಯದ ಬಳಿಕ ಸಾದಿಕ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.

ಸಂಜೆಯಾದರೂ ಪುತ್ರ ಮನೆಗೆ ಮರಳದ ಹಿನ್ನೆಲೆಯಲ್ಲಿ ಆತಂಕಗೊಂಡ ತಾಯಿ, ಸಂಬಂಧಿಕರು ಹಾಗೂ ಪರಿಚಯಸ್ಥರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಪುತ್ರನನ್ನು ಪತ್ತೆಹಚ್ಚಿಕೊಡುವಂತೆ ರಶೀದಾ ಅವರು ಲಕ್ಕವಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News