ಟ್ರೋಲಿಂಗ್ ಗೆ ಮಣಿದ ‘ಪೆದ್ದಿ’; ಜಾನ್ವಿ ಕಪೂರ್ ದೃಶ್ಯಗಳನ್ನು ತೆಗೆದು ಹಾಕಿದ ಚಿತ್ರತಂಡ
Photo Credit : X
ಜಾನ್ವಿ ಕಪೂರ್ ಪಾತ್ರವನ್ನು ನಿರೂಪಿಸಿರುವ ರೀತಿಯನ್ನು ಮಹಿಳಾ ಹಕ್ಕುಗಳ ಕಾರ್ಯಕರ್ತರು ಮತ್ತು ವಿಮರ್ಶಕರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ ನಂತರ ಚಿತ್ರತಂಡ ಕ್ರಮ ಕೈಗೊಂಡಿದೆ.
ಜಾನ್ವಿ ಕಪೂರ್ ಅವರು ನಟಿಸಿರುವ ಕೆಲವು ದೃಶ್ಯಗಳು ಅತಿಯಾಗಿ ಲೈಂಗಿಕತೆ ಬಿಂಬಿಸುವಂತಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾದ ನಂತರ ‘ಪೆದ್ದಿ’ ಸಿನಿಮಾದ ಕೆಲವು ದೃಶ್ಯಗಳನ್ನು ತೆಗೆದು ಹಾಕಿರುವುದಾಗಿ ನಿರ್ದೇಶಕ ಬುಚಿ ಬಾಬು ಸನಾ ಹೇಳಿದ್ದಾರೆ. ನಿರ್ದೇಶಕರ ಪ್ರಕಾರ ಜಾನ್ವಿ ಅವರು ನಟಿಸಿರುವ ಕೆಲವು ದೃಶ್ಯಗಳು “ದಾರಿ ತಪ್ಪಿಸುವಂತಿವೆ” ಮತ್ತು ಅವರ ‘ಅಚಿಯಮ್ಮ’ ಪಾತ್ರವನ್ನು ಜನರು ತಪ್ಪರ್ಥ ಮಾಡಿಕೊಂಡಿದ್ದಾರೆ.
ಕೆಲವು ನಿರ್ದಿಷ್ಟ ಪ್ರೇಕ್ಷಕರನ್ನು ಗಮನದಲ್ಲಿಟ್ಟು ‘ಅಚಿಯಮ್ಮ’ ಪಾತ್ರವನ್ನು ಬರೆಯಲಾಗಿದೆ ಎಂದು ವೀಕ್ಷಕರು ಟೀಕಿಸಿದ್ದಾರೆ, ಮಹಿಳಾ ಹಕ್ಕುಗಳ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಣಯ ಸದೃಶ್ಯ ಚಿತ್ರಗಳ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ನಂತರ ಮಹಿಳೆಯರಿಗೆ ಅಗೌರವ ತೋರುವ ದೃಶ್ಯಗಳನ್ನು ತೆಗೆಯುವುದಾಗಿ ಚಿತ್ರ ತಂಡ ಹೇಳಿತ್ತು. ವಿವಾದ ಮತ್ತು ಟೀಕೆ ಹೆಚ್ಚಾಗುತ್ತಿದ್ದಂತೆ ಬುಚಿ ಬಾಬು ಸನಾ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಯಾಚಿಸಿದರು ಮತ್ತು ಚಿತ್ರದ ಕೆಲವು ಸನ್ನಿವೇಶಗಳನ್ನು ತೆಗೆಯುವುದಾಗಿ ಹೇಳಿದ್ದಾರೆ. ಈ ಕುರಿತು ಜಾನ್ವಿ ಅಥವಾ ರಾಮ್ ಚರಣ್ ಅಭಿಪ್ರಾಯ ವ್ಯಕ್ತಪಡಿಸಿಲ್ಲ.
ಉತ್ತಮ ಕತೆಯಿರುವ ಸಿನಿಮಾದಲ್ಲಿ ಜಾನ್ವಿ ಕಪೂರ್ಗೆ ಸಂಬಂಧಿಸಿದ ದೃಶ್ಯಗಳನ್ನು ಬಹಳಷ್ಟು ಮಂದಿ ತಪ್ಪು ಅರ್ಥ ಮಾಡಿಕೊಂಡಿದ್ದಾರೆ. ಜಾನ್ವಿಯ ಪಾತ್ರವನ್ನು ಆಧರಿಸಿ ರಾಮ್ ಚರಣ್ ಪಾತ್ರದಲ್ಲಿ ಪರಿವರ್ತನೆ ತರುವಂತಹ ಕತೆಯನ್ನು ತರುವುದು ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ ಬುಚ್ಚಿ ಬಾಬು ಜಾನ್ವಿ ಪಾತ್ರವನ್ನು ರೂಪಿಸಿರುವ ರೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. “ಸಿನಿಮಾದಲ್ಲಿ ನಾನು ಸ್ವಲ್ಪ ಕ್ರಾಂತಿಯುತವಾಗಿ ದೃಶ್ಯಗಳನ್ನು ನೀಡಿದ್ದೇನೆ. ಪೆಡ್ಡಿ ಗುಡ್ಡಗಾಡು ಪ್ರದೇಶದ ದೂರದ ಊರಿನಿಂದ ಬಂದಿದ್ದಾರೆ. ಆ ಪಾತ್ರದ ಗಡಸುತನವನ್ನು ತೋರಿಸಲು ಮತ್ತು ನಂತರ ಅದನ್ನು ಸರಿಪಡಿಸಲು ಬಯಸಿದ್ದೆ. ಅವರು ಹುಟ್ಟಿ ಬೆಳೆದ ವಾತಾವರಣದಿಂದ ಆ ರೀತಿ ಇದ್ದಾರೆ ಎಂದು ತೋರಿಸಬೇಕಾಗಿತ್ತು. ಅಂತಹ ಪಾತ್ರ ತಾನು ಪ್ರೀತಿಸುವ ಮಹಿಳೆಯನ್ನು ಮದುವೆಯಾಗಬೇಕು ಎಂದು ಯೋಚಿಸುತ್ತಾನೆ ಎನ್ನುವುದನ್ನು ತೋರಿಸಬೇಕಾಗಿತ್ತು. ಆದರೆ ಕೆಲವೆಡೆ ಅದನ್ನು ತೋರಿಸುವಾಗ ತಪ್ಪಾಗಿದೆ” ಎಂದು ಅವರು ಹೇಳಿದ್ದಾರೆ.
“ನಮ್ಮ ಕತೆಯನ್ನು ಮುಂದಿಡುವ ಪ್ರಕ್ರಿಯೆಯಲ್ಲಿ ಕೆಲವು ಶಾಟ್ಗಳು ದಾರಿ ತಪ್ಪಿವೆ. ಅವುಗಳನ್ನು ತೆಗೆದು ಹಾಕಲು ಸರಿಪಡಿಸುವ ಕ್ರಮಗಳನ್ನು ಕೈಗೊಂಡಿದ್ದೇವೆ” ಎಂದು ಅವರು ಹೇಳಿದ್ದಾರೆ.
ಏನಿದು ವಿವಾದ?
‘ಪೆದ್ದಿ’ ಸಿನಿಮಾದಲ್ಲಿ ಜಾನ್ವಿ ಕಪೂರ್ ‘ಅಚಿಯಮ್ಮ’ ಎನ್ನುವ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರವನ್ನು ಪ್ರೀತಿ-ಪ್ರೇಮದ ಉದ್ದೇಶವನ್ನು ಮೀರಿ ನಿರೂಪಿಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜಾನ್ವಿಯನ್ನು ಅಬ್ಜೆಕ್ಟಿಫಿಕೇಶನ್ (ಇಂದ್ರಿಯಗೋಚರವಾಗುವಂತೆ ನಿರೂಪಿಸುವುದು) ಎಂದು ಟೀಕಿಸಲಾದ ದೃಶ್ಯಗಳಲ್ಲಿ ಆಕೆಯ ಪರಿಚಯವನ್ನು ತೋರಿಸುವುದೂ ಸೇರಿದೆ. ಆ ಕ್ಯಾಮರಾ ಕೋನದ ಬಗ್ಗೆ ಬಹಳಷ್ಟು ಟೀಕೆ ವ್ಯಕ್ತವಾಗಿದೆ. ಮಾತ್ರವಲ್ಲದೆ ನಾಯಕ ಆಕೆಯನ್ನು ಮನೆಗೆ ಹಿಂಬಾಲಿಸಿ ಬಲವಂತವಾಗಿ ಚುಂಬಿಸುವ ದೃಶ್ಯವೂ ಬಹಳ ಟೀಕೆಗೆ ಗುರಿಯಾಗಿದೆ. ಕೆಲವು ಸಂಭಾಷಣೆಗಳೂ ಬಹಳ ಕೀಳು ದರ್ಜೆಯಲ್ಲಿವೆ ಎಂದು ಟೀಕಿಸಲಾಗಿದೆ.
ಮಲಯಾಳಂ ನಟಿ ನಿತ್ಯಾ ಮೆನನ್ ಅವರು ಜಾನ್ವಿ ಕಪೂರ್ ಅವರನ್ನು ಸಮರ್ಥಿಸಿಕೊಂಡಿದ್ದರೂ, ಅಬ್ಜೆಕ್ಟಿಫಿಕೇಶನ್ ಜಾಗತಿಕ ಸಿನಿಮಾದ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಉದ್ಯಮದ ಇನ್ನೂ ಅನೇಕ ತಾರೆಯರು ದಕ್ಷಿಣದ ಸಿನಿಮಾಗಳಲ್ಲಿ ಮಹಿಳೆಯರನ್ನು ತೋರಿಸುತ್ತಿರುವ ರೀತಿಯನ್ನು ಪ್ರಶ್ನಿಸಿದ್ದಾರೆ.