ಬಂಧನ ಅವಧಿ ವಿಸ್ತರಣೆ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ CJP ನಾಯಕರು
ಸೌರವ್ ದಾಸ್, ಅಶುತೋಷ್ ರಂಕಾ ನ್ಯಾಯಾಂಗ ಬಂಧನ ಎರಡು ದಿನ ವಿಸ್ತರಣೆ; ತುರ್ತು ವಿಚಾರಣೆಗೆ ಮನವಿ
ಹೊಸದಿಲ್ಲಿ, ಅ.20: ನ್ಯಾಯಾಂಗ ಬಂಧನದ ಅವಧಿಯನ್ನು ಎರಡು ದಿನ ವಿಸ್ತರಿಸಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ನೀಡಿದ ಆದೇಶವನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ವಕೀಲ ಅಭಿಕ್ ಚಿಮ್ನಿ ಮೂಲಕ ಮಂಗಳವಾರ ಮಧ್ಯಾಹ್ನ ಅರ್ಜಿ ಸಲ್ಲಿಸಲಾಗಿದೆ. ಬಂಧನ ಅವಧಿ ವಿಸ್ತರಣೆಯನ್ನು ಪ್ರಶ್ನಿಸಿರುವ ಪಕ್ಷದ ಕಾನೂನು ವ್ಯವಹಾರಗಳ ಮುಖ್ಯಸ್ಥೆ ರತ್ನಾ ಸಿಂಗ್, ತುರ್ತು ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾವು ದೆಹಲಿ ಹೈಕೋರ್ಟ್ ಸಂಪರ್ಕಿಸಿದ್ದು, ರಾತ್ರಿ ವೇಳೆ ತುರ್ತು ವಿಚಾರಣೆ ನಡೆಸುವಂತೆ ಕೋರಿದ್ದೇವೆ. ಸೌರವ್ ಮತ್ತು ಅಶುತೋಷ್ ಜೈಲಿನಲ್ಲಿ ಒಂದೇ ಒಂದು ನಿಮಿಷವನ್ನೂ ಕಳೆಯಬಾರದು. ರಾಜಕೀಯ ಆಟಗಳಿಂದಾಗಿ ಅವರ ಸ್ವಾತಂತ್ರ್ಯ ಮೊಟಕುಗೊಳಿಸಬಾರದು. ನ್ಯಾಯಕ್ಕಾಗಿ ಕಾಯಬಾರದು’ ಎಂದು ಹೇಳಿದ್ದಾರೆ.
ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಮಂಗಳವಾರ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಬ್ಬರನ್ನೂ ತಮ್ಮ ಕುಟುಂಬದ ಸದಸ್ಯರೆಂದು ಕರೆದಿರುವ ಅವರು, ಅವರ ಮೇಲಿನ ಪ್ರೀತಿ ಮತ್ತು ಕಾಳಜಿಯನ್ನು ತಮ್ಮ ಭಾವನೆಗಳು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ. ಹಬ್ಬದ ಸಂದರ್ಭದಲ್ಲಿ ಕುಟುಂಬದೊಂದಿಗೆ ಸಂಭ್ರಮಿಸುತ್ತಿರುವ ಜನರು, ತಮ್ಮ ಪ್ರೀತಿಪಾತ್ರರೊಂದಿಗೆ ಇರಲು ಸಾಧ್ಯವಾಗದ ದಾಸ್ ಮತ್ತು ರಂಕಾ ಅವರನ್ನು ನೆನಪಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ಹೊಸ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್, ಇಬ್ಬರ ನ್ಯಾಯಾಂಗ ಬಂಧನದ ಅವಧಿಯನ್ನು ಎರಡು ದಿನ ವಿಸ್ತರಿಸಿದ್ದರು. ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವಲ್ಲ ಎಂದು ಘೋಷಿಸಿದ ಮರುದಿನವೇ, ಅಲ್ಲಿನ ಭದ್ರತೆಯನ್ನು ಉಲ್ಲಂಘಿಸಿ ಆವರಣ ಪ್ರವೇಶಿಸಿದ ಆರೋಪದ ಮೇಲೆ ಅಕ್ಟೋಬರ್ 13ರಿಂದ ಇಬ್ಬರೂ ಜೈಲಿನಲ್ಲಿದ್ದಾರೆ. ಈ ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣವನ್ನು ಕ್ರೈಮ್ ಬ್ರಾಂಚ್ಗೆ ವರ್ಗಾಯಿಸಲಾಗಿದೆ.
ಬಿಡುಗಡೆ ಮಾಡಿದರೆ ಶಾಂತಿಗೆ ಭಂಗ: ಪೊಲೀಸರ ವಾದ
ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಬಿಡುಗಡೆ ಮಾಡಿದರೆ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗಬಹುದು ಎಂದು ದಿಲ್ಲಿ ಪೊಲೀಸರು ವಾದಿಸಿದ್ದಾರೆ. ಸೋಮವಾರ ಅವರ ಬಂಧನ ಅವಧಿಯನ್ನು ಮತ್ತಷ್ಟು ವಿಸ್ತರಿಸುವಂತೆಯೂ ಕೋರಿದ್ದರು.
ಆದರೆ, ಸಿಜೆಪಿಯ ಕಾನೂನು ತಂಡವು ಪೊಲೀಸರ ಆತಂಕವನ್ನು ತಳ್ಳಿಹಾಕಿದೆ. ಇಬ್ಬರಿಂದ ಯಾವುದೇ ಅಪಾಯವಿದೆ ಅಥವಾ ಅವರು ಬಿಡುಗಡೆಯಾದರೆ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗಬಹುದು ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ವಾದಿಸಿದೆ.
ತಮ್ಮನ್ನು ವಶಕ್ಕೆ ಪಡೆದ ದಿನ ರಂಕಾ ಅವರು ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದ ವಿಡಿಯೊದಲ್ಲಿ, ದಾಸ್, ರಂಕಾ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ ಅವರು ಬೀಗ ಹಾಕಿದ್ದ ಗೇಟ್ಗಳನ್ನು ಹತ್ತಿ ಆವರಣ ಪ್ರವೇಶಿಸುತ್ತಿರುವುದು ಕಂಡುಬಂದಿತ್ತು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ವಶಕ್ಕೆ ಪಡೆದಿದ್ದರು.
‘ಆರೋಪಿಗಳನ್ನು ಬಿಡುಗಡೆ ಮಾಡಿದರೆ ಅವರು ಮತ್ತೆ ಅಪರಾಧ ಎಸಗಬಹುದು ಎಂಬ ಊಹೆಯಿದೆ’ ಎಂದು ಪೊಲೀಸರು ವಾದಿಸಿದ ಬಳಿಕ, ಕಳೆದ ವಾರ ಎಸ್ಇಎಂ ಮೂವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಸೋಮವಾರ ಮಾತನಾಡಿದ್ದ ದೀಪ್ಕೆ, ಪಕ್ಷದ ಸಹ-ಸಂಯೋಜಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು ಜೈಲಿನಲ್ಲಿ ದಿನಗಳನ್ನು ಕಳೆದರೂ ಎದೆಗುಂದಿಲ್ಲ ಎಂದು ಹೇಳಿದ್ದರು. ಇಬ್ಬರೂ ಮುಖದಲ್ಲಿ ನಗು ಮತ್ತು ದೃಢ ಮನೋಭಾವದೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು ಎಂದು ತಿಳಿಸಿದ್ದರು.
‘ಅಶು ಮತ್ತು ಸೌರವ್ ಮಾಡಿದ ಮೊದಲ ಅಪರಾಧ ಜಂತರ್ ಮಂತರ್ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದು. ಎರಡನೇ ಅಪರಾಧ ಹಿಂದೆ ಸರಿಯಲು ನಿರಾಕರಿಸಿದ್ದು. ಐದು ದಿನಗಳ ಕಾಲ ಜೈಲಿನಲ್ಲಿದ್ದರೂ ಅವರು ಮುಖದಲ್ಲಿ ನಗು ಮತ್ತು ಅಚಲ ಮನೋಭಾವದೊಂದಿಗೆ ನ್ಯಾಯಾಲಯಕ್ಕೆ ಬಂದರು’ ಎಂದು ದಿಪ್ಕೆ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದರು.
ಮೋದಿ ವಿರುದ್ಧ ದೀಪ್ಕೆ ಆರೋಪ
ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ದೀಪ್ಕೆ, ಯುವ ಪ್ರತಿಭಟನಾಕಾರರನ್ನು ಬೆದರಿಸಲು ಮತ್ತು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರಿ ಯಂತ್ರವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಂತರ್ ಮಂತರ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ 27 ವರ್ಷದ ಸೌರವ್ ದಾಸ್ ಮತ್ತು 30 ವರ್ಷದ ಅಶುತೋಷ್ ರಂಕಾ ಅವರನ್ನು ಬಂಧನದಲ್ಲಿರಿಸಿರುವ ಸರ್ಕಾರದ ನಿರ್ಧಾರವನ್ನು ಅವರು ಪ್ರಶ್ನಿಸಿದ್ದಾರೆ.
‘26–27 ವರ್ಷದ ಸೌರವ್ ದಾಸ್ ಮತ್ತು 30 ವರ್ಷದ ಅಶುತೋಷ್ ಅವರನ್ನು ಜೈಲಿನಲ್ಲಿ ಇರಿಸುವ ಮೂಲಕ ಮಹಾನ್ ವಿಶ್ವಗುರು ನರೇಂದ್ರ ಮೋದಿ ಅವರು ತಾವು ಬಹಳ ಶಕ್ತಿಶಾಲಿ ಎಂದು ಭಾವಿಸಿರಬೇಕು. ಇದೇನಾ ಶಕ್ತಿ? ಪೊಲೀಸರ ಹಿಂದೆ ಅಡಗಿಕೊಳ್ಳುವುದು, ನ್ಯಾಯಾಲಯಗಳ ಹಿಂದೆ ಅಡಗಿಕೊಳ್ಳುವುದು—ಇದೇನಾ ನರೇಂದ್ರ ಮೋದಿಯವರ ಶಕ್ತಿ?’ ಎಂದು ಪ್ರಶ್ನಿಸಿದ್ದಾರೆ.
ಇಬ್ಬರಿಗೆ ಸಕಾಲದಲ್ಲಿ ವಿಚಾರಣೆ ಎದುರಿಸಲು ಅವಕಾಶ ನೀಡಲಾಗಿಲ್ಲ ಮತ್ತು ವಿಚಾರಣಾ ಪ್ರಕ್ರಿಯೆಗಳನ್ನು ಪದೇ ಪದೇ ಮುಂದೂಡಲಾಗಿದೆ ಎಂದು ದೀಪ್ಕೆ ಆರೋಪಿಸಿದ್ದಾರೆ. ಯುವ ಪ್ರತಿಭಟನಾಕಾರರನ್ನು ಜೈಲಿನಲ್ಲಿರಿಸುವ ಮೂಲಕ ಹಾಗೂ ತಮ್ಮ ಸರ್ಕಾರದ ವಿರುದ್ಧ ಇರುವವರ ವಿರುದ್ಧ ಪೊಲೀಸ್ ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸುವ ಮೂಲಕ ಮೋದಿ ಅವರು ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದ್ದಾರೆ.