CJPಗೆ ಕಾಂಗ್ರೆಸ್ ಸ್ನೇಹಹಸ್ತ; ರಾಹುಲ್ ಗಾಂಧಿಯವರ ಚಹಾ ಕೂಟಕ್ಕೆ ದೀಪ್ಕೆಗೆ ಆಹ್ವಾನ: ವರದಿ
ರಾಹುಲ್ ಗಾಂಧಿ, ಅಭಿಜಿತ್ ದೀಪ್ಕೆ Photo: PTI
ಪ್ರಶಾಂತ್ ಭೂಷಣ್ ಮೂಲಕ ಸಂಪರ್ಕಕ್ಕೆ ಯತ್ನ; CJP ನಾಯಕರ ಬಂಧನ ಖಂಡಿಸಿದ ರಾಹುಲ್
ಹೊಸದಿಲ್ಲಿ, ಅ. 15: ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಬಗ್ಗೆ ಈವರೆಗೆ ಸಂಶಯದ ನಿಲುವು ಹೊಂದಿದ್ದ ಕಾಂಗ್ರೆಸ್, ಇದೀಗ ಆ ಸಂಘಟನೆಯೊಂದಿಗೆ ಕೈಜೋಡಿಸಲು ಮುಂದಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆಯೋಜಿಸಿದ್ದ ಚಹಾ ಕೂಟಕ್ಕೆ CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ಆಹ್ವಾನಿಸಲು ಪ್ರಯತ್ನಿಸಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ ಎಂದು indianexpress.com ವರದಿ ಮಾಡಿದೆ.
‘ಇಂಡಿಯಾ’ ಮೈತ್ರಿಕೂಟದ ನಾಯಕರು, ನಾಗರಿಕ ಸಮಾಜದ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿ ನಾಯಕರಿಗಾಗಿ ರಾಹುಲ್ ಗಾಂಧಿ ಈ ಕೂಟ ಆಯೋಜಿಸಿದ್ದರು. ವಿರೋಧ ಪಕ್ಷಗಳ ಹೋರಾಟಕ್ಕೆ ಹೆಚ್ಚಿನ ಸಂಘಟನೆಗಳನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿ ಕಾಂಗ್ರೆಸ್ ಈ ಹೆಜ್ಜೆ ಇರಿಸಿದೆ ಎನ್ನಲಾಗಿದೆ.
*AAP ಜತೆ ನಂಟಿನ ಅನುಮಾನ
ಮೇ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಗಮನ ಸೆಳೆದಿದ್ದ CJP, ಜೂನ್–ಜುಲೈನಲ್ಲಿ ಜಂತರ್ ಮಂತರ್ ನಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಗಳ ನೇತೃತ್ವ ವಹಿಸಿತ್ತು. ಈ ಪ್ರತಿಭಟನೆಗಳ ಪರಿಣಾಮವಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಯಿತು.
ಆದರೆ, ಕಾಂಗ್ರೆಸ್ ನಾಯಕತ್ವದ ಪ್ರಭಾವಿ ವರ್ಗವೊಂದು CJPಯನ್ನು ಆಮ್ ಆದ್ಮಿ ಪಕ್ಷದ (AAP) ಅಂಗಸಂಸ್ಥೆ ಅಥವಾ ಅದರ ಪರವಾಗಿ ಕಾರ್ಯನಿರ್ವಹಿಸುವ ಸಂಘಟನೆ ಎಂದೇ ಪರಿಗಣಿಸಿತ್ತು. ಹೀಗಾಗಿ, ಸಂಘಟನೆಯೊಂದಿಗೆ ನಿಕಟ ಸಂಪರ್ಕ ಬೆಳೆಸಲು ಕಾಂಗ್ರೆಸ್ ಈವರೆಗೆ ಹಿಂದೇಟು ಹಾಕಿತ್ತು.
ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ CJP ಅಕ್ಟೋಬರ್ 10ರಂದು ದಿಲ್ಲಿಯಲ್ಲಿ ಪ್ರತಿಭಟನೆಗೆ ಕರೆ ನೀಡಿದಾಗಲೂ ಕಾಂಗ್ರೆಸ್ ಅದರ ಚಟುವಟಿಕೆಗಳ ಮೇಲೆ ನಿಗಾ ಇರಿಸಿತ್ತು.
ಭಾರಿ ಭದ್ರತಾ ನಿರ್ಬಂಧಗಳು ಮತ್ತು ಪೊಲೀಸರ ಕಠಿಣ ಕ್ರಮದಿಂದಾಗಿ ಪ್ರತಿಭಟನೆ ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ. ನಗರದಾದ್ಯಂತ ಸುಮಾರು 7,000 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಜೂನ್–ಜುಲೈನಲ್ಲಿ ನಡೆದ ಪ್ರತಿಭಟನೆಗಳಿಗೆ ಹೋಲಿಸಿದರೆ, ಈ ಬಾರಿ ಹೆಚ್ಚಿನ ಜನರನ್ನು ಒಗ್ಗೂಡಿಸುವಲ್ಲಿ CJP ವಿಫಲವಾಗಿದೆ ಎಂಬುದು ಕಾಂಗ್ರೆಸ್ ನ ಅಂದಾಜಾಗಿತ್ತು.
‘ಬ್ಯಾನರ್ ಬೇರೆ, ಹೋರಾಟ ಒಂದೇ’
CJP ಕುರಿತ ಕಾಂಗ್ರೆಸ್ ನ ನಿಲುವಿನಲ್ಲಿ ಬದಲಾವಣೆಯ ಮೊದಲ ಸೂಚನೆ ಸೋಮವಾರ ರಾಹುಲ್ ಗಾಂಧಿ ಅವರ ಹೇಳಿಕೆಯಲ್ಲಿ ವ್ಯಕ್ತವಾಯಿತು.
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನಡೆಯುತ್ತಿರುವ ಎಲ್ಲ ಪ್ರತಿಭಟನೆಗಳೂ ಒಂದೇ ಹೋರಾಟದ ಭಾಗ ಎಂದು ಪ್ರತಿಪಾದಿಸಿದ ಅವರು, ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯಕ್ಕಿಂತ ಸಂವಿಧಾನದ ರಕ್ಷಣೆ ಮುಖ್ಯ ಎಂಬ ಸಂದೇಶ ನೀಡಿದರು.
‘ಇಲ್ಲಿ ಪ್ರತ್ಯೇಕ ಪ್ರತಿಭಟನೆಗಳಿಲ್ಲ. ಇರುವುದು ಒಂದೇ ಹೋರಾಟ. ನೀವು ಯಾರು, ಯಾವ ಸಂಘಟನೆಯಿಂದ ಬಂದಿದ್ದೀರಿ ಎಂಬುದು ನಮಗೆ ಮುಖ್ಯವಲ್ಲ. ನಾವು ಸಂವಿಧಾನವನ್ನು ರಕ್ಷಿಸುತ್ತಿರುವಂತೆಯೇ ನೀವೂ ಅದನ್ನು ರಕ್ಷಿಸುತ್ತಿದ್ದರೆ, ನಾವು ನಿಮ್ಮೊಂದಿಗಿದ್ದೇವೆ. ನಿಮಗೆ ಬೆಂಬಲ ನೀಡುತ್ತೇವೆ, ಸಹಾಯ ಮಾಡುತ್ತೇವೆ ಮತ್ತು ನಿಮ್ಮನ್ನು ರಕ್ಷಿಸುತ್ತೇವೆ. ನಿಮ್ಮಿಂದಲೂ ಇದೇ ರೀತಿಯ ಬೆಂಬಲವನ್ನು ನಿರೀಕ್ಷಿಸುತ್ತೇವೆ. ಇದು ಭಾರತೀಯ ಜನರ ಮೇಲಿನ ನಮ್ಮ ಪ್ರೀತಿಯ ಅಭಿವ್ಯಕ್ತಿ’ ಎಂದು ರಾಹುಲ್ ಹೇಳಿದರು.
ಬಳಿಕ ಅವರು ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿದರು.
ಸೋಮವಾರ ಸುಪ್ರೀಂ ಕೋರ್ಟ್ ಗೆ ‘ಇಂಡಿಯಾ’ ಮೈತ್ರಿಕೂಟ ನಡೆಸಿದ ಮೆರವಣಿಗೆಯಿಂದ CJP ದೂರ ಉಳಿದಿತ್ತು. ಆದರೂ, ಜನರನ್ನು ಒಗ್ಗೂಡಿಸುವಲ್ಲಿ ಆ ಪ್ರತಿಭಟನೆ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ನಾಯಕತ್ವ ಅಭಿಪ್ರಾಯಪಟ್ಟಿತ್ತು.
*ಪ್ರಶಾಂತ್ ಭೂಷಣ್ ಮೂಲಕ ಆಹ್ವಾನ
ಮಂಗಳವಾರ ಬೆಳಿಗ್ಗೆ CJP ನಾಯಕರನ್ನು ರಾಹುಲ್ ಗಾಂಧಿ ಅವರ ಚಹಾ ಕೂಟಕ್ಕೆ ಆಹ್ವಾನಿಸಲು ಕಾಂಗ್ರೆಸ್ ನಿರ್ಧರಿಸಿತು. ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರ ಮೂಲಕ ಅಭಿಜೀತ್ ದೀಪ್ಕೆ ಅವರನ್ನು ಸಂಪರ್ಕಿಸಲು ಪಕ್ಷ ಕೋರಿತ್ತು ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಿಂದ ಇಂತಹ ಕೋರಿಕೆ ಬಂದಿರುವುದನ್ನು ಭೂಷಣ್ ಅವರ ಆಪ್ತ ಮೂಲಗಳು ದೃಢಪಡಿಸಿವೆ.
ಆದರೆ, ದೀಪ್ಕೆ ಮಹಾರಾಷ್ಟ್ರದಲ್ಲಿದ್ದರು. CJPಯ ಹಿರಿಯ ನಾಯಕರಾದ ಅಶುತೋಷ್ ರಂಕಾ, ಸೌರವ್ ದಾಸ್ ಮತ್ತು ಅಜಿಂಕ್ಯ ಶಿಂಧೆ ಅವರು ಜಂತರ್ ಮಂತರ್ನಲ್ಲಿ ಹಠಾತ್ ಪ್ರತಿಭಟನೆ ನಡೆಸಿದ್ದಕ್ಕಾಗಿ ಪೊಲೀಸ್ ವಶದಲ್ಲಿದ್ದರು.
ದೀಪ್ಕೆ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆದಿದ್ದರೂ ಕಾಂಗ್ರೆಸ್ ನ ಆಹ್ವಾನದ ಬಗ್ಗೆ ಅವರು ಹೆಚ್ಚಿನ ಉತ್ಸಾಹ ತೋರಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
*ವಿರೋಧ ಪಕ್ಷಗಳ ಒಗ್ಗಟ್ಟಿಗೆ ಆದ್ಯತೆ
ವಿರೋಧ ಪಕ್ಷಗಳ ರಾಜಕೀಯದಲ್ಲಿ CJPಗೆ ಅವಕಾಶ ನೀಡಬಾರದು ಎಂಬುದು ಕಾಂಗ್ರೆಸ್ ನ ಪ್ರಭಾವಿ ನಾಯಕರ ಒಂದು ವರ್ಗದ ಹಿಂದಿನ ನಿಲುವಾಗಿತ್ತು.
ಆದರೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ರದ್ದತಿ ಮತ್ತು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸುವ ಹೋರಾಟವನ್ನು ‘ಇಂಡಿಯಾ’ ಮೈತ್ರಿಕೂಟವೇ ಮುನ್ನಡೆಸಬೇಕು. ಇದಕ್ಕಾಗಿ ವಿವಿಧ ಸಂಘಟನೆಗಳು ಮತ್ತು ಶಕ್ತಿಗಳನ್ನು ಒಗ್ಗೂಡಿಸಿ ಸಂಯುಕ್ತ ರಂಗ ರೂಪಿಸಬೇಕು ಎಂಬ ಅಭಿಪ್ರಾಯ ಈಗ ಪಕ್ಷದಲ್ಲಿ ವ್ಯಕ್ತವಾಗಿದೆ.
‘ಜಂತರ್ ಮಂತರ್ ಜನರದ್ದು; ಮರಳಿ ಪಡೆಯುತ್ತೇವೆ’
CJP ನಾಯಕರ ಬಂಧನವನ್ನು ಬುಧವಾರ ಖಂಡಿಸಿದ ರಾಹುಲ್ ಗಾಂಧಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಯುವಕರನ್ನು ಜೈಲಿಗೆ ಕಳುಹಿಸಿರುವುದು ಹೇಡಿತನದ ಕ್ರಮ ಎಂದು ಟೀಕಿಸಿದರು.
‘ಜಂತರ್ ಮಂತರ್ ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ತ್ರಿವರ್ಣ ಧ್ವಜ ಹಾರಿಸುವುದು ಅಪರಾಧವಲ್ಲ. ಅದಕ್ಕಾಗಿ ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನದ ಕೆಲಸ. ವಿದ್ಯಾರ್ಥಿಗಳು, ಯುವಕರು, ಪತ್ರಕರ್ತರು ಮತ್ತು ‘ಇಂಡಿಯಾ’ ಮೈತ್ರಿಕೂಟದ ಬ್ಯಾನರ್ ಗಳು ಬೇರೆ ಬೇರೆಯಾಗಿರಬಹುದು. ಆದರೆ, ಉದ್ದೇಶ ಒಂದೇ. ಎಲ್ಲ ಪ್ರತಿಭಟನೆಗಳೂ ಒಂದೇ ಹೋರಾಟದ ಭಾಗ. ನಾಗರಿಕರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕೇಳುತ್ತಿದ್ದಾರೆ. ಜಂತರ್ ಮಂತರ್ ಭಾರತದ ಜನರಿಗೆ ಸೇರಿದ್ದು. ಅದನ್ನು ನಾವು ಮರಳಿ ಪಡೆಯುತ್ತೇವೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ದೀಪ್ಕೆ, ತಮ್ಮ ಸಹಚರರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರ ಅಕ್ರಮ ಬಂಧನದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಸಲ್ಲಿಸಿದರು.
*ಶುಕ್ರವಾರ ‘ತಿರಂಗಾ ಮೆರವಣಿಗೆ’ಗೆ ಕರೆ
ಇದೇ ವೇಳೆ, ಅಕ್ಟೋಬರ್ 16ರ ಶುಕ್ರವಾರ ಸಂಜೆ 5 ಗಂಟೆಗೆ ದಿಲ್ಲಿಯ ಕನ್ನಾಟ್ ಪ್ಲೇಸ್ ನ ಸೆಂಟ್ರಲ್ ಪಾರ್ಕ್ ನಲ್ಲಿ ಸೇರಲು ದೀಪ್ಕೆ ಕರೆ ನೀಡಿದ್ದಾರೆ.
‘ದೇಶಭಕ್ತರು ಮತ್ತು ತ್ರಿವರ್ಣ ಧ್ವಜವನ್ನು ಪ್ರೀತಿಸುವವರು ರಾಷ್ಟ್ರಧ್ವಜದೊಂದಿಗೆ ಬರಬೇಕು’ ಎಂದು ವೀಡಿಯೊ ಸಂದೇಶದಲ್ಲಿ ಮನವಿ ಮಾಡಿರುವ ಅವರು, ಇತರ ನಗರಗಳಲ್ಲಿಯೂ ‘ತಿರಂಗಾ ಮೆರವಣಿಗೆ’ಗಳನ್ನು ಆಯೋಜಿಸುವಂತೆ ಕರೆ ನೀಡಿದ್ದಾರೆ.
ಸೌಜನ್ಯ: indianexpress.com