2019–2024ರ ನಡುವೆ ನೂರಾರು ಕೋಟಿ ಪಡೆದ ಪಕ್ಷಗಳ ನೋಂದಾಯಿತ ವಿಳಾಸಗಳಲ್ಲಿ ಕಂಡದ್ದು ಬೀಗ, ಮನೆ, ಡ್ಯಾನ್ಸ್ ಅಕಾಡೆಮಿ: ವರದಿ
ಕೋಟಿಗಟ್ಟಲೆ ದೇಣಿಗೆ; ಆದರೆ 'ಅಪರಿಚಿತ' ರಾಜಕೀಯ ಪಕ್ಷದ ಕಚೇರಿಗಳೇ ಇಲ್ಲ!
Photo Credit | India Today
ಹೊಸದಿಲ್ಲಿ: 2019ರಿಂದ 2024ರ ನಡುವಿನ ಅವಧಿಯಲ್ಲಿ ಕೋಟಿಗಟ್ಟಲೆ ರೂಪಾಯಿ ದೇಣಿಗೆ ಪಡೆದಿರುವ ಕೆಲವು ಅಪರಿಚಿತ ರಾಜಕೀಯ ಪಕ್ಷಗಳ ನೋಂದಾಯಿತ ವಿಳಾಸಗಳಲ್ಲಿ ರಾಜಕೀಯ ಚಟುವಟಿಕೆಗಳೇ ಕಂಡುಬಂದಿಲ್ಲ ಎಂದು ‘India Today’ ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ.
ತನಿಖೆಯ ವೇಳೆ ಕೆಲವು ಪಕ್ಷಗಳ ನೋಂದಾಯಿತ ವಿಳಾಸಗಳಲ್ಲಿ ಕಚೇರಿಗಳೇ ಇರಲಿಲ್ಲ. ಕೆಲವು ಕಚೇರಿಗಳಿಗೆ ಬೀಗ ಹಾಕಲಾಗಿತ್ತು. ಇನ್ನು ಕೆಲವು ಸ್ಥಳಗಳನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿತ್ತು. ಕೆಲವು ವಿಳಾಸಗಳಲ್ಲಿ ಸಂಬಂಧಪಟ್ಟ ಪಕ್ಷಗಳ ಯಾವುದೇ ರಾಜಕೀಯ ಚಟುವಟಿಕೆಯನ್ನು ತಾವು ನೋಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಮತ್ತು ಅಂಗಡಿಕಾರರು ತಿಳಿಸಿದ್ದಾರೆ.
ತನಿಖೆಯಲ್ಲಿ ಉಲ್ಲೇಖಿಸಿರುವ ಅಂಕಿ ಅಂಶಗಳ ಪ್ರಕಾರ, ಭಾರತೀಯ ನ್ಯಾಷನಲ್ ಜನತಾ ದಳವು 2019ರಿಂದ 2024ರ ನಡುವೆ 957.4454 ಕೋಟಿ ರೂ. ದೇಣಿಗೆ ಪಡೆದಿದೆ. 2009ರಲ್ಲಿ ನೋಂದಣಿಯಾದ ಈ ಪಕ್ಷದ ಅಧಿಕೃತ ವಿಳಾಸ ಗುಜರಾತ್ ನ ಗಾಂಧಿನಗರದಲ್ಲಿರುವ ‘ಮೇಘಮಲ್ಹಾರ್ ಕಾಂಪ್ಲೆಕ್ಸ್’. ಇಂಡಿಯಾ ಟುಡೇ ತಂಡ ಅಲ್ಲಿಗೆ ಭೇಟಿ ನೀಡಿದಾಗ, ಏಳನೇ ಮಹಡಿಯಲ್ಲಿ ಪಕ್ಷದ ಕಚೇರಿ ಮತ್ತು ನಾಮಫಲಕ ಕಂಡುಬಂದವು. ಇಬ್ಬರು ಉದ್ಯೋಗಿಗಳೂ ಅಲ್ಲಿದ್ದರು. ಪಕ್ಷದ ವ್ಯವಹಾರಗಳನ್ನು ಎಸ್.ವಿ. ಗಜೇರಾ ನೋಡಿಕೊಳ್ಳುತ್ತಾರೆ ಎಂದು ಅವರು ತಿಳಿಸಿದರು. ಆದರೆ, ಗಜೇರಾ ಆ ವೇಳೆ ಕಚೇರಿಯಲ್ಲಿ ಇರಲಿಲ್ಲ.
ದೂರವಾಣಿ ಮೂಲಕ ಸಂಪರ್ಕಿಸಿದಾಗ, ಪಕ್ಷ ಪಡೆದಿರುವ 957.4454 ಕೋಟಿ ರೂ. ದೇಣಿಗೆ ಕುರಿತು ಸ್ಪಷ್ಟನೆ ನೀಡಲು ಗಜೇರಾ ನಿರಾಕರಿಸಿದರು. ಈ ಪಕ್ಷಕ್ಕೆ ಯಾವುದೇ ಸಂಸದರು ಅಥವಾ ಶಾಸಕರು ಇಲ್ಲ. ಚುನಾವಣಾ ರಾಜಕೀಯದಲ್ಲಿ ಗಮನಾರ್ಹ ಪ್ರಾತಿನಿಧ್ಯವಿಲ್ಲದ ಪಕ್ಷವೊಂದು ಇಷ್ಟು ದೊಡ್ಡ ಮೊತ್ತದ ದೇಣಿಗೆ ಪಡೆದಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ದಿ ನ್ಯೂ ಇಂಡಿಯಾ ಪಾರ್ಟಿಯು 2019ರಿಂದ 2024ರ ನಡುವೆ 608.1373 ಕೋಟಿ ರೂ. ದೇಣಿಗೆ ಪಡೆದಿದೆ ಎಂದು ವರದಿಯಾಗಿದೆ. ಅಹಮದಾಬಾದ್‌ನ ನರೋಡಾದ ‘ಉರ್ವಿ ಕಾಂಪ್ಲೆಕ್ಸ್’ ಅನ್ನು ಪಕ್ಷದ ನೋಂದಾಯಿತ ವಿಳಾಸವಾಗಿ ನಮೂದಿಸಲಾಗಿದೆ. ಆದರೆ, ಅಲ್ಲಿಗೆ ಭೇಟಿ ನೀಡಿದಾಗ ಪಕ್ಷದ ನಾಮಫಲಕ ಕಂಡುಬರಲಿಲ್ಲ. ಒಂದು ಮಹಡಿಯಲ್ಲಿದ್ದ ಕಚೇರಿ ಜಾಗಕ್ಕೆ ಬೀಗ ಹಾಕಲಾಗಿತ್ತು. ಪಕ್ಷದ ಕಚೇರಿ ಮತ್ತೊಂದು ಮಹಡಿಯಲ್ಲಿದೆ ಎಂದು ತಿಳಿಸಲಾಯಿತು. ಪಕ್ಷದ ಅಧ್ಯಕ್ಷ ಅಮಿತ್ ಚತುರ್ವೇದಿ ಆ ಪ್ರದೇಶಕ್ಕೆ ಭೇಟಿ ನೀಡುತ್ತಾರೆ, ಆದರೆ ಅದು ಬಹಳ ಅಪರೂಪ ಎಂದು ಸ್ಥಳೀಯ ಮಳಿಗೆಯವರು ತಿಳಿಸಿದ್ದಾರೆ.
ಸತ್ಯವಾದಿ ರಕ್ಷಕ್ ಪಾರ್ಟಿಯು ಇದೇ ಅವಧಿಯಲ್ಲಿ 426.2337 ಕೋಟಿ ರೂ. ಸ್ವೀಕರಿಸಿದೆ. ಇದರಲ್ಲಿ 2023–24ರಲ್ಲೇ 330 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಸೇರಿದೆ. ಗುಜರಾತ್ ನ ಆನಂದ್ ನಲ್ಲಿರುವ ಪಕ್ಷದ ನೋಂದಾಯಿತ ಕಚೇರಿಗೆ ಭೇಟಿ ನೀಡಿದಾಗ ಅದು ಬೀಗ ಹಾಕಿದ ಸ್ಥಿತಿಯಲ್ಲಿತ್ತು.
ನಂತರ ‘ಇಂಡಿಯಾ ಟುಡೇ’ ತಂಡ ಪಕ್ಷದ ಅಧ್ಯಕ್ಷೆ ಸ್ವಾತಿಬೆನ್ ಅವರನ್ನು ಅವರ ನಿವಾಸದಲ್ಲಿ ಪತ್ತೆಹಚ್ಚಿತು. 2024–25ರಲ್ಲಿ ಪಕ್ಷವನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದರು. ತಾವು ಕೇವಲ ಹೆಸರಿಗೆ ಮಾತ್ರ ಅಧ್ಯಕ್ಷೆಯಾಗಿದ್ದೆ ಎಂದೂ ತಿಳಿಸಿದರು. ಪಕ್ಷ ಪಡೆದ ಹಣದ ಬಗ್ಗೆಯೂ ಅವರು ಅಂತರ ಕಾಯ್ದುಕೊಂಡರು. ದೇಣಿಗೆ ಬಂದ ಸಂದರ್ಭದಲ್ಲಿ ಅದನ್ನು ಬೇರೆ ಯಾರಿಗೋ ನೀಡಲಾಗಿತ್ತು; ನಂತರ ಆ ಹಣಕ್ಕೆ ಏನಾಯಿತು ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದರು. 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕೇವಲ ಒಬ್ಬ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿತ್ತು.
ಆಮ್ ಜನ್ಮತ್ ಪಾರ್ಟಿಯು 2019ರಿಂದ 2024ರ ನಡುವೆ 220.3694 ಕೋಟಿ ರೂ. ಸ್ವೀಕರಿಸಿದೆ. ಅಹಮದಾಬಾದ್ ನ ನ್ಯೂ ನರೋಡಾದ ರಘುವೀರ್ ಅಪಾರ್ಟ್ ಮೆಂಟ್ ನಲ್ಲಿರುವ ವಿಳಾಸವನ್ನು ಪಕ್ಷದ ನೋಂದಾಯಿತ ಕಚೇರಿ ಎಂದು ನಮೂದಿಸಲಾಗಿದೆ. ಸ್ಥಳ ಪರಿಶೀಲನೆ ವೇಳೆ ಆ ಕಚೇರಿ ಸುಮಾರು ಒಂದು ವರ್ಷದಿಂದ ಮುಚ್ಚಿರುವುದು ಕಂಡುಬಂದಿತು. ಹಿಂದೆ ಅಲ್ಲಿ ಕಚೇರಿ ಕಾರ್ಯನಿರ್ವಹಿಸುತ್ತಿತ್ತು, ಆದರೆ ಈಗ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪಕ್ಷದ ವೆಬ್‌ಸೈಟ್ ನಲ್ಲಿ ಗೌರವ್ ಮಿಶ್ರಾ ಅವರನ್ನು ಅಧ್ಯಕ್ಷರು ಹಾಗೂ ಧರ್ಮೇಂದ್ರ ವೈಷ್ಣವ್ ಅವರನ್ನು ರಾಷ್ಟ್ರೀಯ ಖಜಾಂಚಿ ಎಂದು ಪಟ್ಟಿ ಮಾಡಲಾಗಿದೆ. ಆದರೆ, ವೆಬ್‌ಸೈಟ್ ನಲ್ಲಿ ನೀಡಿರುವ ದೂರವಾಣಿ ಸಂಖ್ಯೆಗೆ ಒಳಬರುವ ಕರೆಗಳ ಸೇವೆ ನಿಷ್ಕ್ರಿಯವಾಗಿರುವುದು ಕಂಡುಬಂದಿದೆ. ಸುಮಾರು ಒಂದು ವರ್ಷದ ಹಿಂದೆ ಪೊಲೀಸರು ಆ ಆವರಣದಲ್ಲಿ ದಾಳಿ ನಡೆಸಿದ್ದರು ಎಂದು ಸ್ಥಳೀಯ ನಿವಾಸಿ ಹಿತೇಶ್ ಗೋಸ್ವಾಮಿ ತಿಳಿಸಿದ್ದಾರೆ.
ರಾಷ್ಟ್ರೀಯ ವಿಕಾಸ್ ಪಾರ್ಟಿಯು 2019ರಿಂದ 2024ರ ನಡುವೆ 207.6342 ಕೋಟಿ ರೂ. ಪಡೆದಿದೆ. ದಕ್ಷಿಣ ದಿಲ್ಲಿಯ ವಿಶ್ವಕರ್ಮ ಕಾಲೋನಿಯ E-86A ಅನ್ನು ಪಕ್ಷದ ನೋಂದಾಯಿತ ವಿಳಾಸವಾಗಿ ನಮೂದಿಸಲಾಗಿದೆ. ಆದರೆ, ಅಲ್ಲಿ ರಾಜಕೀಯ ಪಕ್ಷದ ಕಚೇರಿ ಇರಲಿಲ್ಲ. ಬದಲಾಗಿ, ಡ್ಯಾನ್ಸ್ ಅಕಾಡೆಮಿಯೊಂದು ಕಾರ್ಯನಿರ್ವಹಿಸುತ್ತಿತ್ತು.
ಕಟ್ಟಡದ ಮಾಲೀಕ ಶೈಲವ್ ಅಗರ್ವಾಲ್, ತಾವು ಸುಮಾರು 15 ವರ್ಷಗಳಿಂದ ಅಲ್ಲೇ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ. ಹಲವು ವರ್ಷಗಳಲ್ಲಿ ಅನೇಕ ಬಾಡಿಗೆದಾರರು ಇದ್ದರೂ, ರಾಷ್ಟ್ರೀಯ ವಿಕಾಸ್ ಪಾರ್ಟಿ ಎಂದಿಗೂ ಅಲ್ಲಿ ಕಚೇರಿ ನಡೆಸಿರಲಿಲ್ಲ ಎಂದು ಅವರು ಹೇಳಿದ್ದಾರೆ. ಸ್ಥಳೀಯ ನಿವಾಸಿಗಳೂ ಆ ವಿಳಾಸದಲ್ಲಿ ಯಾವುದೇ ರಾಜಕೀಯ ಪಕ್ಷದ ಕಚೇರಿ ಕಾರ್ಯನಿರ್ವಹಿಸಿರುವುದನ್ನು ನೋಡಿಲ್ಲ ಎಂದು ತಿಳಿಸಿದ್ದಾರೆ.
ಸೌರಾಷ್ಟ್ರ ಜನತಾ ಪಾರ್ಟಿಯು 2019ರಿಂದ 2024ರ ನಡುವೆ 200.4231 ಕೋಟಿ ರೂ. ಪಡೆದಿದೆ ಎಂದು ವರದಿಯಾಗಿದೆ. ಗುಜರಾತ್ ನ ಸುರೇಂದ್ರನಗರದ ವಾಡಿಪಾರಾದಲ್ಲಿರುವ ಪಕ್ಷದ ನೋಂದಾಯಿತ ವಿಳಾಸಕ್ಕೆ ಭೇಟಿ ನೀಡಿದಾಗ, ಅಲ್ಲಿಂದ ಯಾವುದೇ ರಾಜಕೀಯ ಚಟುವಟಿಕೆ ನಡೆಯುತ್ತಿರುವುದು ಕಂಡುಬರಲಿಲ್ಲ.
ಜನ್ ಮನ್ ಪಾರ್ಟಿಯು ಇದೇ ಅವಧಿಯಲ್ಲಿ 113.5678 ಕೋಟಿ ರೂ. ಪಡೆದಿದೆ ಎಂದು ವರದಿಯಾಗಿದೆ. ಆದರೆ, ತನಿಖೆಯ ಸಂದರ್ಭದಲ್ಲಿ ಅದರ ವಿಳಾಸವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಪ್ರಬಲ್ ಭಾರತ್ ಪಾರ್ಟಿಯು 2019ರಿಂದ 2024ರ ನಡುವೆ 103.8439 ಕೋಟಿ ರೂ. ಪಡೆದಿದೆ ಎಂದು ವರದಿಯಾಗಿದೆ. ಬಿಹಾರದ ಸಿತಾಮರ್ಹಿ ಜಿಲ್ಲೆಯ ಪರ್ಸೌನಿ ವ್ಯಾಪ್ತಿಯ ಅಂಧಾರಾ ಗ್ರಾಮದಲ್ಲಿರುವ ವಿಳಾಸವನ್ನು ಪಕ್ಷದ ನೋಂದಾಯಿತ ಕಚೇರಿ ಎಂದು ನಮೂದಿಸಲಾಗಿದೆ. ಆದರೆ, ‘ಇಂಡಿಯಾ ಟುಡೇ’ ತಂಡ ಅಲ್ಲಿಗೆ ಭೇಟಿ ನೀಡಿದಾಗ ಯಾವುದೇ ರಾಜಕೀಯ ಪಕ್ಷದ ಕಚೇರಿ ಕಂಡುಬರಲಿಲ್ಲ. ಅಲ್ಲಿಂದ ಯಾವುದೇ ರಾಜಕೀಯ ಪಕ್ಷ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸ್ಥಳೀಯರಿಗೂ ಮಾಹಿತಿ ಇರಲಿಲ್ಲ.
ಭಾರತೀಯ ಜನ ಕ್ರಾಂತಿ ದಳ (ಡೆಮಾಕ್ರಟಿಕ್) ಮಧ್ಯಪ್ರದೇಶದ ಜಬಲ್‌ಪುರದ ಶಕ್ತಿ ನಗರದ ಸೈನಿಕ ಸೊಸೈಟಿಯಲ್ಲಿರುವ ವಿಳಾಸವೊಂದನ್ನು ತನ್ನ ಕಚೇರಿ ವಿಳಾಸವೆಂದು ನಮೂದಿಸಿದೆ. ಸ್ಥಳ ಪರಿಶೀಲನೆ ವೇಳೆ ಅಲ್ಲಿ ಯಾವುದೇ ಪಕ್ಷದ ಕಚೇರಿ ಅಥವಾ ರಾಜಕೀಯ ಚಟುವಟಿಕೆ ಕಂಡುಬರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ದಿಲ್ಲಿಯ ಫತೇಪುರ್ ಬೇರಿಯ ಹರ್‌ಸರೂಪ್ ಕಾಲೋನಿಯಲ್ಲಿರುವ ಪಕ್ಷದ ವಿಳಾಸವನ್ನೂ ಪರಿಶೀಲಿಸಲಾಯಿತು. ಆದರೆ, ಅದು ಎರಡು ಕುಟುಂಬಗಳು ವಾಸಿಸುತ್ತಿರುವ ವಸತಿ ಮನೆಯಾಗಿದೆ. ಅಲ್ಲಿ ಪಕ್ಷದ ಕಚೇರಿ ಕಾರ್ಯನಿರ್ವಹಿಸುತ್ತಿರುವುದನ್ನು ತಾವು ಎಂದಿಗೂ ನೋಡಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ. ಕೆಲವು ತಿಂಗಳ ಹಿಂದೆ ಪೊಲೀಸ್ ಸಿಬ್ಬಂದಿ ಆ ಮನೆಗೆ ಭೇಟಿ ನೀಡಿ ನೋಟಿಸ್ ಅಂಟಿಸಿದ್ದರು ಎಂದೂ ಅವರು ತಿಳಿಸಿದ್ದಾರೆ. ವಸತಿ ಪ್ರದೇಶದ ರಸ್ತೆಯಲ್ಲಿರುವ ಈ ಸ್ಥಳವನ್ನು ಪಕ್ಷವು ಕಚೇರಿ ವಿಳಾಸವಾಗಿ ಘೋಷಿಸಿರುವುದೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ದೇಣಿಗೆ ಕುರಿತು ಪ್ರಶ್ನೆಗಳು
ಸಂಘಟನಾತ್ಮಕವಾಗಿ ಅಥವಾ ಚುನಾವಣಾ ದೃಷ್ಟಿಯಿಂದ ಗಮನಾರ್ಹ ಅಸ್ತಿತ್ವ ಹೊಂದಿರದಿದ್ದರೂ ಭಾರಿ ಪ್ರಮಾಣದ ದೇಣಿಗೆ ಪಡೆದಿರುವ ರಾಜಕೀಯ ಪಕ್ಷಗಳ ಕುರಿತು ಈ ತನಿಖೆ ಪ್ರಶ್ನೆಗಳನ್ನು ಎತ್ತಿದೆ.
‘ಇಂಡಿಯಾ ಟುಡೇ’ ತನಿಖೆಯಲ್ಲಿ ಭಾರತೀಯ ನ್ಯಾಷನಲ್ ಜನತಾ ದಳ, ದಿ ನ್ಯೂ ಇಂಡಿಯಾ ಪಾರ್ಟಿ, ಸತ್ಯವಾದಿ ರಕ್ಷಕ್ ಪಾರ್ಟಿ, ಆಮ್ ಜನ್ಮತ್ ಪಾರ್ಟಿ, ರಾಷ್ಟ್ರೀಯ ವಿಕಾಸ್ ಪಾರ್ಟಿ, ಸೌರಾಷ್ಟ್ರ ಜನತಾ ಪಾರ್ಟಿ, ಜನ್ ಮನ್ ಪಾರ್ಟಿ ಮತ್ತು ಪ್ರಬಲ್ ಭಾರತ್ ಪಾರ್ಟಿಗಳನ್ನು ಪರಿಶೀಲಿಸಲಾಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, 2019ರಿಂದ 2024ರ ಅವಧಿಯಲ್ಲಿ ಈ ಪಕ್ಷಗಳಿಗೆ ನೀಡಲಾಗಿದೆ ಎಂದು ವರದಿಯಾಗಿರುವ ಒಟ್ಟು ದೇಣಿಗೆಯ ಮೊತ್ತ ಸಾವಿರಾರು ಕೋಟಿ ರೂಪಾಯಿಗಳಷ್ಟಿದೆ.
ಆದರೆ, ಸ್ಥಳ ಪರಿಶೀಲನೆಯು ಯಾವುದೇ ದೇಣಿಗೆ ಕಾನೂನುಬಾಹಿರವಾಗಿದೆ ಅಥವಾ ಪಕ್ಷಗಳು ಆರ್ಥಿಕ ಅಕ್ರಮ ಎಸಗಿವೆ ಎಂಬುದನ್ನು ನೇರವಾಗಿ ಸಾಬೀತುಪಡಿಸುವುದಿಲ್ಲ. ಆದರೂ, ವರದಿಯಾಗಿರುವ ದೇಣಿಗೆಯ ಪ್ರಮಾಣಕ್ಕೂ ಪಕ್ಷಗಳ ಗೋಚರ ರಾಜಕೀಯ ಚಟುವಟಿಕೆ, ಕಚೇರಿ ಮೂಲಸೌಕರ್ಯ ಹಾಗೂ ಚುನಾವಣಾ ಅಸ್ತಿತ್ವಕ್ಕೂ ಅಸಮಂಜಸತೆ ಕಂಡು ಬಂದಿದೆ.
ಸೌಜನ್ಯ: India today