ಮಂಗಳೂರು: ಸಂತ ಅಲೋಶಿಯಸ್ ಗೊನ್ಝಾಗ ಸಂಸ್ಮರಣೆ ಕಾರ್ಯಕ್ರಮ
ಮಂಗಳೂರು: ಸಂತ ಅಲೋಶಿಯಸ್ ಗೊನ್ಝಾಗ ಅವರ ನಿಸ್ವಾರ್ಥ ಸೇವೆ, ಪರಿಶುದ್ಧತೆ ಮತ್ತು ದೇವರ ಮೇಲಿನ ಭಕ್ತಿಯನ್ನು ಅನುಸರಿಸುತ್ತಾ, ವಿದ್ಯಾರ್ಥಿಗಳು ಕನಸು, ಸಮರ್ಪಣೆ ಹಾಗೂ ಶಿಸ್ತು ಇತ್ಯಾದಿ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂತ ಅಲೋಶಿಯಸ್ ಸಂಸ್ಥೆಯ ರೆ. ಫಾ. ಬ್ರಾಯನ್ ಪಿರೇರಾ ಹೇಳಿದರು.
ನಗರದ ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ಸಂತ ಅಲೋಶಿಯಸ್ ಗೊನ್ಝಾಗರ ಸಂಸ್ಮರಣಾ ಕಾರ್ಯಕ್ರಮಕ್ಕೆ ಸರ್ವಧರ್ಮ ಪ್ರಾರ್ಥನೆಯ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು .
ಶಾಲೆಯ ಪ್ರಾಂಶುಪಾಲ ಫಾ. ರೋಹನ್ ಡಿಅಲ್ಮೇಡಾ ಮಾತನಾಡಿ ಸಂತ ಅಲೋಶಿಯಸ್ ಗೊನ್ಝಾಗ ಅವರಂತೆ ಪ್ರತಿಯೊಬ್ಬರೂ ಮಾನವ ಕುಲಕ್ಕೆ ಸೇವೆ ಸಲ್ಲಿಸುವುದನ್ನೇ ಜೀವನದ ಗುರಿಯನ್ನಾಗಿಸಬೇಕು ಎಂದರು.
ಸಂತ ಅಲೋಶಿಯಸ್ ಸಂಸ್ಥೆಯ ನೂತನ ರೆಕ್ಟರ್ ಆಗಿ ಆಯ್ಕೆಯಾದ ಫಾ. ಬ್ರಾಯನ್ ಪಿರೇರಾರನ್ನು ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿ ಶೌರ್ಯ ಕುಮಾರ್‌ರನ್ನು ಸನ್ಮಾನಿಸಲಾಯಿತು.
ಉಪಪ್ರಾಂಶುಪಾಲ ಲಾರೆಲ್ ಡಿಸೋಜಾ ಹಾಗೂ ಸುರೇಶ್, ಅಪರ್ಣ ಸುರೇಶ್, ಶಾಲಾ ಶೈಕ್ಷಣಿಕ ಸಂಯೋಜಕ ದೀಪ ಕರ್ಕಡಾ, ದೀಪ್ತಿ ಕರ್ಕಡಾ, ಕ್ಯಾರೆಲ್ ರಾಡ್ರಿಗಸ್ ಹಾಗೂ ರಕ್ಷಕ-ಶಿಕ್ಷಕ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷೆ ರೀನಾ ನೊರೋನ್ಹಾ, ಕಾರ್ಯದರ್ಶಿ ಕ್ವೀನಿ ಫರ್ನಾಂಡೀಸ್ ಉಪಸ್ಥಿತರಿದ್ದರು.