‘ಮನ್ಸ’ ಜಾತಿಯ ಹೆಸರನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆ ಗೆ ಆಗ್ರಹ
ಮಂಗಳೂರು: ‘ಮನ್ಸ’ ಜಾತಿಯ ಹೆಸರನ್ನು ಸರಕಾರ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು. ಮಂಗಳೂರಿನಲ್ಲಿ ಸೆ.18ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತುಲುನಾಡ್ ಮನ್ಸ ಸಮಾಜ ಸೇವಾ ಸಂಘ ಆಗ್ರಹಿಸಿದೆ.
‘ಮನ್ಸ’ ಜಾತಿಯ ಮೂಲ ದಕ್ಷಿಣ ಕನ್ನಡ ಜಿಲ್ಲೆಯಾದರೂ ಸಮುದಾಯದ ಜನರು ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಕೇರಳದ ಕಾಸರಗೋಡು ಹೀಗೆ ಏಳು ಜಿಲ್ಲೆ ಗಳಲ್ಲಿ ನೆಲೆಗೊಂಡಿದ್ದು, ಈ ಸಮುದಾಯದ ಜನಸಂಖ್ಯೆ ಅಂದಾಜು 5 ಲಕ್ಷಕ್ಕೂ ಅಕವಿದೆ. ಆದರೆ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇರುವ ಈ ಜಾತಿಯ ಹೆಸರು ಸರ್ಕಾರದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದೆ ಬಿಟ್ಟು ಹೋಗಿರುವುದು ಬಹಳ ದುರದೃಷ್ಟಕರ ಸಂಗತಿಯಾಗಿದೆ ಎಂದು ಸಂಘದ ಗೌರವ ಸಲಹೆಗಾರ ಅಚ್ಯುತ ಸಂಪಿಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಮ್ಮ ಜಾತಿಯ ಹೆಸರು ಸರ್ಕಾರದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇಲ್ಲದಿರುವ ಕಾರಣದಿಂದ ನಾವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ‘ಆದಿದ್ರಾವಿಡ’ವೆಂದು, ಮಲೆನಾಡು ಜಿಲ್ಲೆಗಳಲ್ಲಿ ‘ಆದಿಕರ್ನಾಟಕ’ ಎಂದು ನಮ್ಮದಲ್ಲದ ಜಾತಿ ಹೆಸರುಗಳಲ್ಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದೇವೆ. ಆದರೆ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಶತಮಾನಗಳಷ್ಟು ನಮ್ಮ ಸಮುದಾಯವು ಹಿಂದು ಳಿದಿದೆ. ಈ ಕಾರಣಕ್ಕಾಗಿ ನಮ್ಮ ಈ ಮೂಲಜಾತಿ ‘ಮನ್ಸ’ ಹೆಸರನ್ನು ಸರ್ಕಾರದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವಂತೆ ಕಳೆದ ಹಲವಾರು ವರ್ಷಗಳಿಂದ ಸರ್ಕಾರಕ್ಕೆ ಸತತ ಮನವಿಗಳನ್ನು ಸಲ್ಲಿಸುತ್ತಾ ಬಂದಿ ದ್ದರೂ, ಇದಕ್ಕೆ ಯಾವುದೇ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಖೇದಕರ ಸಂಗತಿಯಾಗಿದೆ ಎಂದರು.
ರಾಜ್ಯದಲ್ಲಿ ಒಳಮೀಸಲಾತಿ ಜಾರಿಯ ಆದೇಶ ಬಂದ ಬಳಿಕ ನಮ್ಮ ಸಮುದಾಯಕ್ಕೆ ಬಹಳ ದೊಡ್ಡ ಅನ್ಯಾಯ ವಾಗಿದೆ. ಒಳಮೀಸಲಾತಿ ಆಯೋಗದ ಆದೇಶದಲ್ಲಿ ಸರ್ಕಾರದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆ ಗೊಂಡಿರದ ಅಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ನಿಯಮಾನುಸಾರ ಕ್ರಮ ಕೈಗೊಂಡು ಎಲ್ಲಾ ಜಾತಿಗಳಿಗೂ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಆದೇಶಿಸಲಾಗಿತ್ತು. ಆದರೆ ಸರಕಾರವು ಪರಿಶಿಷ್ಟ ಜಾತಿಗಳಲ್ಲೇ ಕೆಲವು ಬಲಿಷ್ಠ ಜಾತಿಗಳ ಪ್ರಭಾವಕ್ಕೊಳಗಾಗಿಯೋ ಎಂಬಂತೆ ಒಳಮೀಸಲಾತಿ ಜಾರಿಯ ಆದೇಶ ಮಾಡಿರುತ್ತದೆ. ಇದರಿಂದ ಸರ್ಕಾರದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದಿರುವ ನಮ್ಮಂತಹ ಜಾತಿಗಳಿಗೆ ಮಾತ್ರವಲ್ಲ, ಸರ್ಕಾರದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಹೆಸರು ಇರುವ ನಮ್ಮ ಜಿಲ್ಲೆಯ ಇತರ ಪರಿಶಿಷ್ಟ ಜಾತಿಗಳಿಗೂ ಅನ್ಯಾಯವಾಗುತ್ತಿದೆ ಎಂದರು.
ಮನ್ಸ ಜಾತಿಯ ಹೆಸರನ್ನು ಸರ್ಕಾರದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವಂತಾಗಲು, ಈ ಜಾತಿಯ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಕಡತ ತಯಾರಾಗಿದ್ದರೂ ಕೆಲವೊಂದು ಪ್ರಭಾವೀ ಜಾತಿಗಳ ಮತ್ತು ಕೆಲವೊಂದು ಸಮಾಜಘಾತುಕರ ಒತ್ತಡದಿಂದ ಸಂಬಂಸಿದ ಇಲಾಖೆಯ ಸಚಿವರು ಸದ್ರಿ ಆದೇಶಕ್ಕೆ ಸಹಿ ಹಾಕದೆ ನೆನೆಗುದಿಗೆ ಬಿದ್ದಿದೆ ಎಂದರು.
ಸಂಘದ ಗೌರವಾಧ್ಯಕ್ಷ ಎಂ. ಶಾಂತಾರಾಮ್, ಅಧ್ಯಕ್ಷ ವೆಂಕಣ್ಣ ಕೊಯ್ಯೂರು, ಉಪಾಧ್ಯಕ್ಷ ಹರಿಯಪ್ಪ ಮುತ್ತೂರು, ಪ್ರಧಾನ ಕಾರ್ಯದರ್ಶಿ ಉದಯ ಗೋಳಿಯಂಗಡಿ, ಸಂಘಟನಾ ಕಾರ್ಯದರ್ಶಿ ಎಂ. ರಮೇಶ್ ಬೋಷ್ ಉಪಸ್ಥಿತರಿದ್ದರು.