ಜುಬೈಲ್: ಅಲಿ ತಂಙಳ್ ಕುಂಬೋಳ್, ಉಸ್ಮಾನುಲ್ ಫೈಝಿ ತೋಡಾರ್ಗೆ ಸನ್ಮಾನ
ಜುಬೈಲ್, ಅ.22: ದಾರುಲ್ ಹಸನಿಯಾ ಅಕಾಡಮಿ ಎಜು-ಪಾರ್ಕ್ ಪುತ್ತೂರು ಇದರ ಸೌದಿ ಅರೇಬಿಯಾದ ಜುಬೈಲ್ ಘಟಕ ಮತ್ತು ಎಸ್ಐಸಿ ಜುಬೈಲ್ ಘಟಕದ ವತಿಯಿಂದ ದಾರುಲ್ ಹಸನಿಯಾ ಸಂಸ್ಥೆಯ ನೂತನ ಅಧ್ಯಕ್ಷ ಸಯ್ಯಿದ್ ಅಲಿ ತಂಙಳ್ ಕುಂಬೋಳ್ ಮತ್ತು ಸಮಸ್ತ ಕೇಂದ್ರ ಮುಶಾವರ ಸದಸ್ಯ ಖಾಝಿ ಉಸ್ಮಾನುಲ್ ಫೈಝಿ ಉಸ್ತಾದ್ ತೋಡಾರ್ ಹಾಗೂ ಮುಫತ್ತಿಸ್ ಉಮರ್ ದಾರಿಮಿಗೆ ಸನ್ಮಾನ ಕಾರ್ಯಕ್ರಮವು ಜುಬೈಲ್ನ ಖಾಸಗಿ ರೆಸ್ಟೋರೆಂಟ್ನಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಯ್ಯಿದ್ ಅಲಿ ತಂಙಳ್ ಕುಂಬೋಳ್ ದಾರುಲ್ ಹಸನಿಯಾ ವಿದ್ಯಾಸಂಸ್ಥೆಯು ಎಸ್ಎನ್ಇಸಿ ಪಠ್ಯಕ್ರಮವನ್ನು ಅಳವಡಿಸಿಕೊಂಡು ಅಲ್ಪಾವಧಿಯಲ್ಲಿಯೇ ಗಮನಾರ್ಹ ಸಾಧನೆಯತ್ತ ಮುನ್ನಡೆ ಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಪ್ರಾರ್ಥನೆಗೆ ನೇತೃತ್ವ ನೀಡಿ ಮಾತನಾಡಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಖಾಝಿ ಉಸ್ಮಾನುಲ್ ಫೈಝಿ ತೋಡಾರ್, ಶಿಕ್ಷಣ ಕ್ಷೇತ್ರಕ್ಕೆ ನೀಡುವ ನೆರವು ಭವಿಷ್ಯದ ಪೀಳಿಗೆಗೆ ಬೆಳಕು ನೀಡಿದಂತೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಇಂತಹ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಮಾಜದ ಎಲ್ಲ ವರ್ಗದವರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಎಸ್ಐಸಿ. ಸೌದಿ ಅರೇಬಿಯಾ ನ್ಯಾಷನಲ್ ಸಮಿತಿಯ ಮುಖಂಡ ಸುಲೈಮಾನ್ ಖಾಸಿಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಾರುಲ್ ಹಸನಿಯಾ ಗಲ್ಫ್ ಸಮಿತಿಯ ನಿರ್ದೇಶಕ ಹಾಗೂ ಉದ್ಯಮಿ ಫಾರೂಕ್ ಹಾಜಿ ಪೋರ್ಟ್ವೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ದಾರುಲ್ ಹಸನಿಯಾ ಗಲ್ಫ್ ಪ್ರತಿನಿಧಿ ಅಬ್ದುಲ್ ಕರೀಂ ದಾರಿಮಿ ಹಾಗೂ ಮುಫತ್ತಿಷ್ ಉಮರ್ ದಾರಿಮಿ ಸಂಸ್ಥೆಯ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ದಾರುಲ್ ಹಸನಿಯಾ ಅಕಾಡಮಿಯ ಕೋಶಾಧಿಕಾರಿ ಆಸಿಫ್ ಹಾಜಿ ದರ್ಬೆ, ದಾರುಲ್ ಹಸನಿಯಾ ಸೌದಿ ಅರೇಬಿಯಾ ಸಮಿತಿ ಅಧ್ಯಕ್ಷ ಫೈರೋಝ್ ಹಾಜಿ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿ ನಿಸಾರ್ ಪರ್ಲಡ್ಕ, ಉಪಾಧ್ಯಕ್ಷ ತೌಸೀರ್ ದರ್ಬೆ, ಎಸ್ಐಸಿ ಜುಬೈಲ್ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಾಕ್ ಫೈಝಿ, ಇಸ್ಮಾಯಿಲ್ ಹುದವಿ, ಉಸ್ಮಾನ್ ಶಾಫಿ, ಇಬ್ರಾಹಿಂ ದಾರಿಮಿ, ಅಬ್ದುಲ್ ಮಜೀದ್ ಕರ್ನಿರೆ, ತಾಹಿರ್ ಸಾಲ್ಮರ, ಅಬ್ದುಲ್ ಲತೀಫ್ ಮರಕ್ಕಿಣಿ, ಸುಹೈಲ್ ಕೋಡಿಂಬಾಡಿ, ಇಕ್ಬಾಲ್ ಕುಂತೂರು, ಆಸಿಫ್ ಬಪ್ಪಳಿಗೆ, ಅಬ್ದುಲ್ ರಹಿಮಾನ್ ಕೆ.ಎಸ್.ಕೆ., ಜಸೀಂ , ಶಫೀಕ್ ಉಪಸ್ಥಿತರಿದ್ದರು.
ಎಸ್ಐಸಿ ಜುಬೈಲ್ ಸಮಿತಿಯ ಮುಖಂಡ ಸಯ್ಯಿದ್ ಅಹ್ಮದ್ ತಂಙಳ್ ಸ್ವಾಗತಿಸಿದರು. ಆಶಿಕ್ ಬಾಖವಿ ಕಿರಾಅತ್ ಪಠಿಸಿದರು. ಸಲಾಹುದ್ದೀನ್ ಜೋಕಟ್ಟೆ ವಂದಿಸಿದರು. ನವಾಝ್ ಮುಕ್ವೆ ಕಾರ್ಯಕ್ರಮ ನಿರೂಪಿಸಿದರು.