ಡಾ.ಶಹನವಾಝ್

ಮಂಗಳೂರು : ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜಿನ ಆವರಣದಿಂದ ವಿದ್ಯಾರ್ಥಿನಿಯೊಬ್ಬಳನ್ನು ಗುರುವಾರ ಆಕೆಯ ಕುಟುಂಬಸ್ಥರು ಬಲವಂತಾಗಿ ವಾಹನದಲ್ಲಿ ಎಳೆದೊಯ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಉಳ್ಳಾಲ ಠಾಣೆಯ ಪೊಲೀಸರು, ಕುಟುಂಬಸ್ಥರಿಂದಲೇ ಅಪಹರಣ ಕ್ಕೊಳಗಾಗಿದ್ದಾಳೆ ಎನ್ನಲಾದ ವಿದ್ಯಾರ್ಥಿನಿಯನ್ನು ಕೇರಳದ ಮನೆಯೊಂದರಿಂದ ಶುಕ್ರವಾರ ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಖಾಸಗಿ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಗುರುವಾರ ಸಂಜೆ ನಡೆದಿದೆ ಎನ್ನಲಾದ ಘಟನೆಯ ಬಗ್ಗೆ ‘ಎಕ್ಸ್’ ಖಾತೆಯೊಂದರ ವಿಡಿಯೋವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಶುಕ್ರವಾರ ಹಂಚಿಕೊಂಡು, ‘ಮುಸ್ಲಿಮ್ ಯುವತಿ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದು ಆ ಕಾರಣದಿಂದ ಯುವತಿಯ ಕುಟುಂಬಸ್ಥರು ಬಲವಂತವಾಗಿ ಆ ಯುವತಿಯನ್ನು ಕಾಲೇಜು ಆವರಣದಿಂದ ಕರೆದೊಯ್ದಿದ್ದಾರೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ. ಆಕೆ ಪ್ರಾಪ್ತ ವಯಸ್ಕಳಾಗಿದ್ದು, ತನ್ನ ಬಗ್ಗೆ ನಿರ್ಧರಿಸುವ ಕಾನೂನುಬದ್ಧ ಹಕ್ಕನ್ನು ಆಕೆ ಹೊಂದಿದ್ದಾರೆ. ಈ ಘಟನೆಯ ಬಗ್ಗೆ ತಕ್ಷಣ ಮಾಹಿತಿ ಲಭಿಸಿದ್ದರೆ ವಾಹನ ದೂರ ಸಾಗುವ ಮೊದಲೇ ಅದನ್ನು ಪೊಲೀಸರು ತಡೆಯ ಬಹುದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್‌ ಆಗುತ್ತಲೇ ಪ್ರಕರಣ ದಾಖಲಿಸಿರುವ ಉಳ್ಳಾಲ ಪೊಲೀಸರು ಆಕೆಯ ಮನೆಗೆ ಭೇಟಿ ನೀಡಿದ್ದರು. ಆದರೆ ಆವಾಗ ಆ ಮನೆಗೆ ಬೀಗ ಹಾಕಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಪ್ರೀತಿಯ ವಿಚಾರವಾಗಿ ಕುಟುಂಬಸ್ಥರ ಮತ್ತು ವಿದ್ಯಾರ್ಥಿನಿಯ ಮಧ್ಯೆ ಭಿನ್ನಾಭಿಪ್ರಾಯವಿತ್ತು ಎನ್ನಲಾಗಿದೆ. ಕುಟುಂಬಸ್ಥರ ವಿರೋಧ ಕಟ್ಟಿಕೊಂಡ ಕಾರಣ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರೂ ಕೂಡ ತರಗತಿಗಳಿಗೆ ನಿಯಮಿತವಾಗಿ ಹಾಜರಾಗುತ್ತಿರಲಿಲ್ಲ ಎನ್ನಲಾಗಿದೆ. ಅಲ್ಲದೆ ಕುಟುಂಬಸ್ಥರ ವಿರುದ್ಧ ವಿದ್ಯಾರ್ಥಿನಿಯು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಹೇಳಲಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಪಾಂಡೇಶ್ವರ ಹಾಗೂ ಉಳ್ಳಾಲ ಪೊಲೀಸ್ ಠಾಣೆಗಳಲ್ಲಿ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಅದರ ಬೆನ್ನಲ್ಲೇ ಗುರುವಾರ ಸಂಜೆ ವಿದ್ಯಾರ್ಥಿನಿಯ ಕುಟುಂಬದ ಐವರು ಕಾಲೇಜಿಗೆ ತೆರಳಿ ಆಕೆಯ ವಿರೋಧದ ನಡುವೆಯೇ ಬಲವಂತವಾಗಿ ಜೀಪಿನಲ್ಲಿ ಕರೆದೊಯ್ದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ವಿದ್ಯಾರ್ಥಿನಿಯನ್ನು ವಾಹನದಲ್ಲಿ ಬಲವಂತವಾಗಿ ಕೂಡಿ ಹಾಕಿ ಕರೆದೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ.

ಕೇರಳದಲ್ಲಿರುವ ತನ್ನ ಸಂಬಂಧಿಕರ ಮನೆಯಿಂದ ವಿದ್ಯಾರ್ಥಿನಿಯನ್ನು ರಕ್ಷಿಸಲಾಗಿದೆ. ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಆಕೆ ತನ್ನ ಕುಟುಂಬದ ಜೊತೆ ಹೋಗಲು ನಿರಾಕರಿಸಿದ್ದಾಳೆ. ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಆಕೆ ಸೂಚಿಸಿದ ಸ್ಥಳಕ್ಕೆ ಪೊಲೀಸ್ ರಕ್ಷಣೆಯಲ್ಲಿ ಕಳುಹಿಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವು 7 ವರ್ಷಕ್ಕಿಂತ ಕಡಿಮೆ ಯಿಲ್ಲದ ಶಿಕ್ಷೆಯಾಗಿದೆ. ಹಾಗಾಗಿ ಬಿಎನ್‌ಎಸ್‌ಎಸ್ ಕಾಯ್ದೆಯಡಿ ಆರೋಪಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಅಪಹರಣ ಅಲ್ಲ, ಪಾಲಕರೇ ಕರೆದುಕೊಂಡು ಹೋಗಿದ್ದರು: ಘಟನೆ ಕುರಿತು ಮೆಡಿಕಲ್ ಕಾಲೇಜು ಡೀನ್ ಸ್ಪಷ್ಟನೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಕಣಚೂರು ವೈದ್ಯಕೀಯ ಕಾಲೇಜಿನ ಡೀನ್ ‘ಇದು ಅಪಹರಣವಲ್ಲ, ವಿದ್ಯಾರ್ಥಿನಿಯ ಪೋಷಕರೇ ಬಂದು ಮನೆಗೆ ಹೋಗಿರುವುದಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೀನ್ ಡಾ.ಶಹನವಾಝ್ ಮಾಣಿಪ್ಪಾಡಿ ‘ನಮ್ಮ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಅಪಹರಣವಾಗಿದೆ ಎಂಬ ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಆಕೆ ಕಳೆದ ಕೆಲವು ದಿನಗಳಿಂದ ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಈ ಕುರಿತು ಆಕೆಯ ಪೋಷಕರು ಕಾಲೇಜಿಗೆ ಬಂದು ವಿಚಾರಣೆ ನಡೆಸಿದ್ದರು. ಅದೇ ದಿನ ಆಕೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಹೋಗಿ ಅವರ ವೈಯುಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಪಾಲಕರ ವಿರುದ್ದವೇ ದೂರು ನೀಡಿದ್ದಳು. ನಾವು ಕೂಡಾ ಆಕೆ ಕಾಲೇಜು ಹಾಸ್ಟೆಲ್ ಪರಿಸರದಲ್ಲಿ ಇಲ್ಲದಿರುವ ಕಾರಣ ನ.18ರಂದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು ಎಂದು ತಿಳಿಸಿದ್ದಾರೆ.

ಪಾಂಡೇಶ್ವರ ಪೊಲೀಸರು ಆಕೆಯನ್ನು ಎಸ್ಕಾರ್ಟ್ ಮೂಲಕ ಉಳ್ಳಾಲ ಠಾಣೆಗೆ ಕರೆದುಕೊಂಡು ಬಂದು ಆಕೆಯ ಪೋಷಕರೊಂದಿಗೆ ಮತ್ತು ಕಾಲೇಜಿಗೂ ಬಂದು ಅವರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿ ಮಾತುಕತೆ ನಡೆಸಿದ್ದರು. ಮರುದಿನ ಪೋಷಕರು ಸಂಬಂಧಿಕರು ಆಕೆಯ ಕಾಲೇಜಿನಲ್ಲಿ ಇರುವುದನ್ನು ಗಮನಿಸಲು ಹಾಗೂ ಆಕೆಯನ್ನು ಕರೆದುಕೊಂಡು ಹೋಗಲು ಬಂದಿದ್ದರು. ಆದರೆ ಈ ಸಂದರ್ಭ ಆಕೆ ಮನೆಯವರ ಜೊತೆ ತೆರಳಲು ನಿರಾಕರಿಸಿದ್ದಳು. ಇರಿಸು ಮುರಿಸಿಗೊಳಗಾದ ಕುಟುಂಬಸ್ಥರು ಆಕೆಯ ವಿರೋಧದ ನಡುವೆಯೂ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭ ಅಲ್ಲಿದ್ದವರು ಯಾರೂ ತಡೆಯಲಿಲ್ಲ. ಯಾಕೆಂದರೆ ಅವರೆಲ್ಲರಿಗೂ ಆಕೆಯನ್ನು ಪೋಷಕರು ಕರೆದುಕೊಂಡು ಹೋಗುವುದು ತಿಳಿದಿತ್ತು ಎಂದು ಸ್ಪಷ್ಟಪಡಿಸಿದರು.

ಈ ಘಟನೆಯನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪಹರಣ ಮಾಡಲಾಗಿದೆ ಎಂಬ ನಿಟ್ಟಿನಲ್ಲಿ ಬಿಂಬಿಸಿ ಕಾಲೇಜಿನ ಘನತೆಗೆ ದಕ್ಕೆ ಉಂಟಾಗುವ ರೀತಿಯಲ್ಲಿ ಮಾಡಿದ್ದಾರೆ. ಆದ್ದರಿಂದ ಇದರ ಸತ್ಯಾಸತ್ಯತೆಯನ್ನು ಅರಿತು ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಡೀನ್ ಡಾ.ಶಹನವಾಝ್ ಮಾಣಿಪ್ಪಾಡಿ ವಿನಂತಿಸಿದ್ದಾರೆ.

ವಿದ್ಯಾರ್ಥಿಗಳನ್ನು ಪೋಷಕರೊಂದಿಗೆ ಮಾತ್ರ ಕಳುಹಿಸಲಾಗುತ್ತದೆ. ಪೋಷಕರನ್ನು ಹೊರತುಪಡಿಸಿ ಅಣ್ಣ ಅಥವಾ ಇತರ ಸಂಬಂಧಿಕರು ಬಂದರೂ ಅವರೊಂದಿಗೆ ವಿದ್ಯಾರ್ಥಿಗಳನ್ನು ಕಳುಹಿಸುವುದಿಲ್ಲ. ಈ ಘಟನೆಯಲ್ಲಿಯೂ ಪೋಷಕರೇ ವಾಹನದಲ್ಲಿದ್ದರು ಎಂದು ಸ್ಪಷ್ಟಪಡಿಸಿದರು.

ಭದ್ರತಾ ಸಿಬ್ಬಂದಿಗೆ ವಿಷಯ ತಿಳಿದ ತಕ್ಷಣ ಅವರು ತನಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿಯ ಅಕ್ಕನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆಕೆ ಕರೆ ಸ್ವೀಕರಿಸಿರಲಿಲ್ಲ. ಪೋಷಕರೇ ಬಂದಿದ್ದಾರೆ ಎಂಬ ಮಾಹಿತಿ ಇದ್ದರೂ ಯಾವುದೇ ಭದ್ರತಾ ಲೋಪವಾಗದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಕಾಲೇಜಿನಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳ ಜವಾಬ್ದಾರಿ ನಮ್ಮ ಮೇಲಿದೆ. ವಿದ್ಯಾರ್ಥಿನಿಯ ಸುರಕ್ಷತೆಯ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಮ ವಹಿಸಿಲ್ಲ ಎಂದು ಹೇಳಿದರು.

ಇದು ಯಾರೋ ಬಂದು ವಿದ್ಯಾರ್ಥಿನಿಯನ್ನು ಎತ್ತುಕೊಂಡು ಹೋದದಲ್ಲ. ಆಕೆಯ ಪೋಷಕರೇ ಬಂದು ಕರೆದು ಕೊಂಡು ಹೋಗಿರುವುದಾಗಿದೆ. ಆದ್ದರಿಂದ ಇದು ಅಪಹರಣವಲ್ಲ. ಅಲ್ಲದೆ ಪಾಲಕರು ಕರೆದುಕೊಂಡು ಹೋದ ತಕ್ಷಣ ನಾವು ಉಳ್ಳಾಲ ಪೊಲೀಸರಿಗೂ ಮಾಹಿತಿ ನೀಡಿದ್ದೆವು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor