ಬಂಟ್ವಾಳ | ವಿದ್ಯುತ್ ಚಾಲಿತ ತುರಿಮಣೆಗೆ ಸಿಲುಕಿದ್ದ ಅಕ್ಷರ ದಾಸೋಹದ ಸಿಬ್ಬಂದಿಯ ಕೈಬೆರಳು; ಅವಘಡದಿಂದ ಪಾರು ಮಾಡಿದ ಬಾಲಕ

► ವಿದ್ಯಾರ್ಥಿ ಮನ್ವಿತ್‌ನ ಸಮಯಪ್ರಜ್ಞೆ, ಧೈರ್ಯ ನಿಜಕ್ಕೂ ಶ್ಲಾಘನೀಯ : ಸಿಎಂ ಅಭಿನಂದನೆ ► ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಹಾಗೂ ಅಧಿಕಾರಿಗಳಿಂದ ಶ್ಲಾಘನೆ

Update: 2026-08-13 18:47 IST

ಬಂಟ್ವಾಳ: ತಾಲೂಕಿನ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕನೋರ್ವ ಬಿಸಿಯೂಟ ಕಾರ್ಮಿಕರು ಕರ್ತವ್ಯ ನಿರತರಾಗಿದ್ದ ವೇಳೆ ಸಂಭವಿಸಬಹುದಾಗಿದ್ದ ದೊಡ್ಡ ಅವಘಡವನ್ನು ತಪ್ಪಿಸಿ ಸಿಬ್ಬಂದಿಯನ್ನು ಪಾರು ಮಾಡಿ ಸಮಯಪ್ರಜ್ಞೆ ಮೆರೆದ ಘಟನೆ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ಐದನೇ ತರಗತಿ ಬಾಲಕ ಮನ್ವಿತ್ ಸಮಯಪ್ರಜ್ಞೆ ಮೆರೆದ ವಿದ್ಯಾರ್ಥಿ.

ಶಾಲೆಯ ಅಕ್ಷರ ದಾಸೋಹದ ಸಿಬ್ಬಂದಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುಚ್ಚಾಲಿತ ತುರಿಮಣೆ ಬಳಿ ಆಕಸ್ಮಿಕವಾಗಿ ಅವರ ಕೈಬೆರಳು ಸಿಲುಕಿಕೊಂಡಿದ್ದು, ಕೂಡಲೇ ಅವರು ಕಿರುಚಿದ್ದಾರೆ. ಈ ವೇಳೆ ಶಾಲಾ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕ ಮನ್ವಿತ್ ತಕ್ಷಣ ಧಾವಿಸಿ ತುರಿಮಣೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾನೆ.

ವಿದ್ಯಾರ್ಥಿ ಮನ್ವಿತ್‌ನ ಸಮಯಪ್ರಜ್ಞೆ, ಧೈರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಿಎಂ ಡಿಕೆ ಶಿವಕುಮಾರ್‌ ಅವರು ಎಕ್ಸ್‌ನಲ್ಲಿ ಅಭಿನಂದಿಸಿದ್ದಾರೆ.

ಸ್ವಯಂ ನಿರ್ಧಾರದಿಂದ ಸಮಯಪ್ರಜ್ಞೆ ಮೆರೆದ ಬಾಲಕನ ಧೈರ್ಯವನ್ನು ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ಮತ್ತು ಸದಸ್ಯರು ಶ್ಲಾಘಿಸಿದ್ದಾರೆ.

ಶಾಲೆಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ್, ಸಿಆರ್ ಪಿ ಜ್ಯೋತಿ ಭೇಟಿ ನೀಡಿ ಬಾಲಕನ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News