ಬೆಂಗಳೂರು: ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಬೆಳ್ತಂಗಡಿಯ ಯುವಕ

Update: 2026-08-15 12:28 IST

ಬೆಳ್ತಂಗಡಿ: ಬೆಂಗಳೂರು ನಗರದ ರಾಜೇಶ್ವರಿ ನಗರದಲ್ಲಿ ಬೆಳ್ತಂಗಡಿಯ ಯುವಕನೋರ್ವ ಹೆಂಡತಿಯನ್ನು ಕತ್ತು ಹಿಸುಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆ 14 ರಂದು ನಡೆದಿದೆ.

ಮೃತರನ್ನು ಪದ್ಮಾವತಿ (29) ಹಾಗೂ ಸುಮಂತ್ ಜೈನ್ (32) ಎಂದು ಗುರುತಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಗೆ ಗ್ರಾಮದ ಎಳನೀರು ನಿವಾಸಿಯಾಗಿರುವ ಸುಮಂತ್ ಸಿವಿಲ್‌ ಎಂಜಿನಿಯ‌ರ್ ಆಗಿದ್ದರು. ಪದ್ಮಾವತಿ ವೈಟ್ ಫೀಲ್ಡ್ ಸಮೀಪದ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

ಕಳೆದ ರಾತ್ರಿ ಕೌಟುಂಬಿಕ ಕಲಹವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಸುಮಂತ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ತನ್ನ ತಾಯಿಗೆ ನಾನು ಸಾಯುತ್ತಿದ್ದೇನೆ ಎಂದು ವಾಯ್ಸ್ ಮೆಸೇಜ್ ಕಳುಹಿಸಿರುವುದಾಗಿಯೂ ತಿಳಿದು ಬಂದಿದೆ

ತನ್ನ ಪಿಎಫ್ ಹಣ ಹಾಗೂ ಮನೆಯಲ್ಲಿನ ವಸ್ತುಗಳು ತೆಗೆದುಕೊಂಡು ಹೋಗುವಂತೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ ಎನ್ನಲಾಗಿದ್ದು ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಮಾಹಿತಿ ಲಭ್ಯವಾಗಿದೆ.

ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೂರು ವರ್ಷದ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ನಿನ್ನೆ ದಂಪತಿ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದ್ದು ಗಲಾಟೆ ವಿಕೋಪಕ್ಕೆ ತಿರುಗಿದಾಗ ಕೊಲೆ ಪ್ರಕರಣ‌ ನಡೆದಿದೆ ಎಂದು ತಿಳಿದು ಬಂದಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಮನೆಯಲ್ಲಿ ಪೊಲೀಸರು, ಸೊಕೋ ತಂಡದಿಂದ ಪರಿಶೀಲನೆ ನಡೆದಿದ್ದು ಮೃತದೇಹಗಳ ಮಹಜರು ಹಾಗೂ ಮರಣೋತ್ತರ ಪರೀಕ್ಷೆಗಳು ಇನ್ನಷ್ಟೆ ನಡೆಯಬೇಕಾಗಿದೆ ಎಂದು ತಿಳಿದು ಬಂದಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News