Belthangady | ಪಿಕಪ್ ವಾಹನ–ಆಕ್ಟಿವಾ ಮುಖಾಮುಖಿ ಢಿಕ್ಕಿ: ಇಬ್ಬರು ಮೃತ್ಯು
ಬೆಳ್ತಂಗಡಿ: ಬಳ್ಳಮಂಜ–ಪಣಕಜೆ ರಸ್ತೆಯ ಪಾಲ್ಯರ ಎಂಬಲ್ಲಿ ಪಿಕಪ್ ವಾಹನ ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.
ಅಪಘಾತದಲ್ಲಿ ಆಕ್ಟಿವಾ ಸವಾರ ಡಾಕಯ್ಯ ಗೌಡ ಹಾಗೂ ಹಿಂಬದಿ ಸವಾರ ಚಂದಪ್ಪ ಮೂಲ್ಯ ಅವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಡಂತ್ಯಾರಿನ ‘ಎಸ್.ಎಂ. ಶಾಮಿಯಾನ’ ಸಂಸ್ಥೆಗೆ ಸೇರಿದ ಪಿಕಪ್ ವಾಹನವು ಬಳ್ಳಮಂಜ ಕಡೆಯಿಂದ ಪಣಕಜೆ ಕಡೆಗೆ ಸಾಗುತ್ತಿತ್ತು. ಇದೇ ವೇಳೆ ಪಣಕಜೆಯಿಂದ ಬಳ್ಳಮಂಜ ಕಡೆಗೆ ಬರುತ್ತಿದ್ದ ಆಕ್ಟಿವಾ ಸ್ಕೂಟರ್‌ಗೆ ಪಾಲ್ಯರ ಸಮೀಪ ಪಿಕಪ್ ವಾಹನ ನೇರವಾಗಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಢಿಕ್ಕಿಯ ತೀವ್ರತೆಗೆ ಹಿಂಬದಿ ಸವಾರ ಚಂದಪ್ಪ ಮೂಲ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಲೆಗೆ ಗಂಭೀರ ಗಾಯಗೊಂಡಿದ್ದ ಡಾಕಯ್ಯ ಗೌಡ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.