ಹಿಂದುತ್ವಕ್ಕೆ ಸೇವೆ ಸಲ್ಲಿಸಿ ಸಾಕೋ ಸಾಕಾಗಿದೆ: ಬಿಜೆಪಿ ಮುಖಂಡ ಕೃಷ್ಣಪ್ಪ ಕಲ್ಲಡ್ಕರದ್ದು ಎಂದು ಹೇಳಲಾದ ಆಡಿಯೋ ವೈರಲ್
► ʼಹಿಂದುತ್ವದ ಪಾಠ ಹೇಳುವವರು ತಮ್ಮ ಊರಲ್ಲಿ ಜಾತಿ ರಾಜಕಾರಣ ಮಾಡುತ್ತಾರೆʼ; ಸತೀಶ್ ದಾವಣಗೆರೆ ನೀಡಿದ್ದ ಹೇಳಿಕೆಗೆ ತಿರುಗೇಟು ► BC Road ನಲ್ಲಿ ಸಂಘಪರಿವಾರದ ಪ್ರತಿಭಟನೆಯಲ್ಲಿ ಕರಾವಳಿ ಶಾಸಕರ ವಿರುದ್ಧ ಹೇಳಿಕೆಗೆ ಆಕ್ರೋಶ
ಬಂಟ್ವಾಳ, ಸೆ.28: ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧನ ಮುಂದುವರಿಸಿರುವುದನ್ನು ವಿರೋಧಿಸಿ ನಡೆದ VHP ಮತ್ತು ಬಜರಂಗದಳದ ಪ್ರತಿಭಟನಾ ಸಭೆಯಲ್ಲಿ ಕೇಳಿಬಂದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ.
ಬಿ.ಸಿ.ರೋಡಿನ ರಕ್ತೇಶ್ವರಿ ಸನ್ನಿಧಿ ಬಳಿ ಸೋಮವಾರ ನಡೆದ ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ, ಬಿಜೆಪಿ ಶಾಸಕರು ಹಾಗೂ ಸಂಸದರು ಹಿಂದೂ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸುವ ವೇಳೆ ಆಡಿದ ಮಾತುಗಳು ಬಿಜೆಪಿ ಮುಖಂಡರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಅವರು ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಪ್ರತಿಭಟನೆಯ ವೇಳೆ ಕರಾವಳಿಯ ಶಾಸಕರು, ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ್ದರು.
‘ನೀವು ಇಂದು ಆಡಳಿತದಲ್ಲಿದ್ದೀರಿ, ಗೆದ್ದಿದ್ದೀರಿ ಎಂದಾದರೆ ಈ ಕೇಸರಿ ಕಾರ್ಯಕರ್ತರಿಂದ ಎಂಬುದನ್ನು ಮರೆಯಬೇಡಿ. ವಿಧಾನಸೌಧದಲ್ಲಿ, ಲೋಕಸಭೆಯಲ್ಲಿ ಕರ್ನಾಟಕದ ವಿಷಯದಲ್ಲಿ ಧ್ವನಿ ಎತ್ತಬೇಕು. ಕರಾವಳಿಯಲ್ಲಿ ಏನಾಗುತ್ತಿದೆ ಎಂಬುದನ್ನು ಸರಕಾರದ ಗಮನಕ್ಕೆ ತರಬೇಕು’ ಎಂದು ಹೇಳಿದ್ದರು.
ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧ ʼಏಕವಚನಲ್ಲಿಯೇʼ ವಾಗ್ದಾಳಿ ನಡೆಸಿದ ಅವರು, ‘ಯಾರ ಕೈಯಲ್ಲಿ ಕೋಲಿರುತ್ತದೆಯೋ ಅವರ ಮಾತನ್ನು ಎಮ್ಮೆ ಕೇಳುತ್ತದೆ ಎನ್ನುತ್ತಾರೆ. ರಾಜ್ಯದ ಮುಖ್ಯಮಂತ್ರಿ ಕರಾವಳಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ಹೋರಾಟ ಮಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಹಿಂದೂ ಕಾರ್ಯಕರ್ತರು ಸದೃಢವಾಗಿಲ್ಲ ಎಂದಾದರೆ ನಿಮಗೆ ಶಾಸಕ, ಸಂಸದ ಸ್ಥಾನವೂ ಇರುವುದಿಲ್ಲ. ನೀವು ನಮ್ಮಂತೆ ಕಾರ್ಯಕರ್ತರಾಗಬೇಕಾಗುತ್ತದೆ ಎಂಬುದನ್ನು ಮರೆಯಬಾರದು’ ಎಂದರು.
‘ದೇವದುರ್ಲಭ ಕಾರ್ಯಕರ್ತರು ಕೇಳಿದಾಗ, ಕಾರ್ಯಕರ್ತರ ಪರವಾಗಿ ಧ್ವನಿ ಎತ್ತಬೇಕು. ಬೇರೆ ಕ್ಷೇತ್ರದಲ್ಲಿ ಗೆಲ್ಲಬೇಕಾದರೆ ಎಷ್ಟು ಹಣ ಖರ್ಚು ಮಾಡಬೇಕು ಎಂದು ಹೇಳಿ. ಆದರೆ ಕರಾವಳಿಯಲ್ಲಿ ಕಷ್ಟಪಡದೆ, ಬೆವರು ಸುರಿಸದೆ, ಹಣವನ್ನು ಮನೆಯಲ್ಲಿ ಇಟ್ಟುಕೊಂಡೇ ಗೆಲ್ಲಲು ನಮ್ಮ ಎರಡು ಜಿಲ್ಲೆಗಳೇ ಸಾಕ್ಷಿ’ ಎಂದು ಹೇಳಿದರು.
‘ಇದನ್ನು ಅರ್ಥ ಮಾಡಿಕೊಳ್ಳಬೇಕು. ಕಾರ್ಯಕರ್ತರ ಬೆನ್ನಿಗೆ ನಿಲ್ಲಬೇಕು. ನಾನು ಮುಂದೆ ಗೆಲ್ಲುತ್ತೇನೆಯೋ ಇಲ್ಲವೋ, ಪಕ್ಷ ಇರುತ್ತದೆಯೋ ಇಲ್ಲವೋ, ಆದರೆ ನನ್ನ ದೇಶ ಮುಖ್ಯ. ಈ ಧ್ಯೇಯನಿಷ್ಠೆಗಾಗಿ ಬಂದವನು ನಾನು. ದೇಶದ ಚುಕ್ಕಾಣಿ ಹಿಡಿದಿದ್ದೇನೆ ಎಂದಾದರೆ ನನ್ನ ಕಾರ್ಯಕರ್ತರ ಸಲುವಾಗಿ ಎಂಬ ಕಿಂಚಿತ್ತಾದರೂ ಭಾವನೆ ಇರಬೇಕು’ ಎಂದು ಹೇಳಿದರು.
‘ಇಂದು ರಾಜ್ಯ ಸರಕಾರದ ವಿರುದ್ಧ ಇಡೀ ಹಿಂದೂ ಸಮುದಾಯ ಸಿಡಿದೆದ್ದಿರುವುದಕ್ಕೆ ಕಾರಣವೇನು ಎಂದರೆ, ಗಣೇಶೋತ್ಸವದ ಮೆರವಣಿಗೆಯಲ್ಲಿ ಹಿಂದುತ್ವದ ಕಾರ್ಯಕ್ರಮಕ್ಕೆ ಅಡಚಣೆ ಮಾಡಲಾಗುತ್ತಿದೆ ಎಂಬುದು. ಆದರೆ ನಿಮ್ಮ ವಿರುದ್ಧವೂ ಸಿಡಿದೆದ್ದೇವು. ನಾವು ಕರಾವಳಿ ತೀರದವರು, ಅವಲಕ್ಕಿ ಪ್ರಿಯರು. ನಮ್ಮ ಬಾಯಲ್ಲಿ ಅವಲಕ್ಕಿ ಇಟ್ಟಂತೆ ನಮ್ಮ ಶಾಸಕರು, ಸಂಸದರೂ ಬಾಯಲ್ಲಿ ಅವಲಕ್ಕಿ ತುಂಬಿಕೊಂಡಿದ್ದಾರೆ. ನಾವು ಸಿಡಿದೆದ್ದೇಳುವ ಮುನ್ನ ನೀವು ಜಾಗೃತರಾಗಬೇಕು’ ಎಂದು ಹೇಳಿದರು.
►‘ದಾವಣಗೆರೆಗೆ ಹೋಗಿ ಹಿಂದುತ್ವದ ಪಾಠ ಹೇಳಿ’
ಸತೀಶ್ ದಾವಣಗೆರೆ ಅವರ ಹೇಳಿಕೆಗೆ ಬಿಜೆಪಿ ಪ್ರಮುಖರಾದ ಕೃಷ್ಣಪ್ಪ ಕಲ್ಲಡ್ಕ ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಲಾದ ಆಡಿಯೋ ಕ್ಲಿಪ್ ವೈರಲ್ ಆಗಿದೆ.
ಈ ಹಿಂದೆ ಕರ್ನಾಟಕ ಬಿಜೆಪಿ IT Cellನ ಮುಖ್ಯಸ್ಥರಾಗಿದ್ದ ವಿಕಾಸ್ ಪುತ್ತೂರು ಅವರನ್ನು ಉದ್ದೇಶಿಸಿ ಮಾತನಾಡಿರುವ ಆಡಿಯೋದಲ್ಲಿ, ‘ವಿಕಾಸಣ್ಣ, ನಾನು ನಿಮ್ಮ ಹೆಸರನ್ನು ತೆಗೆದುಕೊಂಡು ಯಾಕೆ ಮಾತನಾಡುತ್ತಿದ್ದೇನೆ ಎಂದರೆ ನೀವು ಈಗ ರಾಜ್ಯವ್ಯಾಪಿ ಪ್ರವಾಸ ಮಾಡುವವರು. ನೀವು ದಾವಣಗೆರೆಗೆ ಹೋಗಿ ಸ್ವಲ್ಪ ಕೇಳಬೇಕು. ಮೊನ್ನೆ ದಾವಣಗೆರೆಯಲ್ಲಿ ಉಪಚುನಾವಣೆ ನಡೆಯಿತು. ಅಲ್ಲಿ ಎಲ್ಲ ಮುಸ್ಲಿಮರು ಕಾಂಗ್ರೆಸ್ ವಿರುದ್ಧ ಮಾತನಾಡಿದರು. ಆದರೂ ಕಾಂಗ್ರೆಸ್ ಗೆದ್ದಿದೆ. ಯಾಕೆ ಗೊತ್ತಾ?’ ಎಂದು ಅವರು ಪ್ರಶ್ನಿಸಿದ್ದಾರೆ.
‘ಇಂದು ನಮಗೆ ಇಲ್ಲಿ ಬುದ್ಧಿ ಹೇಳಿದರಲ್ಲ, ಹಿಂದುತ್ವದ ಪಾಠ. ಇವರು ಇರುವ ಕ್ಷೇತ್ರ ಅದು. ಇವರೆಲ್ಲ ಸೇರಿಕೊಂಡು ಅಲ್ಲಿ ಜಾತಿವಾದ ಮಾಡಿದರು. ಅಲ್ಲಿ ಜಾತಿಗೆ ಮತ ಕೊಟ್ಟರು. ಇವರದ್ದು ಯಾವ ಹಿಂದುತ್ವ? ಕರ್ಮದ ಹಿಂದುತ್ವವೇ? ಇವರು ಇಲ್ಲಿ ಬಂದು ನಮಗೆ ಹಿಂದುತ್ವದ ಬೋಧನೆ ಮಾಡುತ್ತಾರೆ. ಅಲ್ಲಿ ಜಾತಿಯವನನ್ನು ಗೆಲ್ಲಿಸುತ್ತಾರೆ. ದಾವಣಗೆರೆಯಲ್ಲಿ ಇವರಿಗೆ ಜಾತಿಯವನು ಬೇಕು, ಕಾಂಗ್ರೆಸ್ ನವನು ಬೇಕು; ಅಲ್ಲಿ ಬಿಜೆಪಿ ಬೇಡ, ಹಿಂದೂ ಧರ್ಮ ಬೇಡ. ಇಲ್ಲಿ ಮಾತ್ರ ಹಿಂದುತ್ವದ ಭಾಷಣ ಮಾಡುತ್ತಾರೆ. ಇಂಥವರನ್ನು ಬರಲು ನೀವು ಯಾಕೆ ಬಿಡುತ್ತೀರಿ?’ ಎಂದು ಅವರು ಕೇಳಿದ್ದಾರೆ.
‘ಅವತ್ತು ಪ್ರಮೋದ್ ಮುತಾಲಿಕ್ ಯಾರನ್ನು ಸೋಲಿಸಲು ಕಾರ್ಕಳಕ್ಕೆ ಬಂದಿದ್ದರು? ಇಂಥವರಿಗೆ ಕಡಿವಾಣ ಹಾಕಬೇಕಾದರೆ ನೀವು ಹಾಕಬೇಕು. ರಾಜ್ಯವ್ಯಾಪಿ ಪ್ರವಾಸ ಮಾಡುವಾಗ ರಾಜ್ಯದ ಹಾಗೂ ರಾಷ್ಟ್ರೀಯ ನಾಯಕರಿಗೆ ಈ ವಿಷಯ ತಿಳಿಸಬೇಕು. ಇಂಥವರಿಗೆ ಸಂಘ ಪರಿವಾರದಲ್ಲಿ ಯಾವುದೇ ಜವಾಬ್ದಾರಿ ಕೊಡಬಾರದು ಎಂದು ಹೇಳಬೇಕು. ಇವರು ಬಿಜೆಪಿಯನ್ನು ಮುಗಿಸಲು ಬಂದಿದ್ದಾರೆಯೇ ಅಥವಾ ಮತ್ತೊಮ್ಮೆ ಹಿಂದುತ್ವವನ್ನು ಕಟ್ಟಲು ಬಂದಿದ್ದಾರೆಯೇ ಎಂಬುದನ್ನು ಪ್ರಶ್ನಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಇವರೇ ದೊಡ್ಡ ದೊಡ್ಡ ಹಿಂದುತ್ವದ ಭಾಷಣ ಮಾಡುತ್ತಾರೆ. ತಮ್ಮ ಊರಲ್ಲಿ ಜಾತಿಯ ಪರವಾಗಿ ಗೆಲ್ಲಿಸುತ್ತಾರೆ. ಮುಸ್ಲಿಮರ ವಿರೋಧ ಇದ್ದಾಗಲೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದು ಜಾತಿಯವರು ಎಂಬುದನ್ನು ಇವರೇ ಹೇಳುತ್ತಾರೆ. ಅಲ್ಲಿ ಗೆಲ್ಲಿಸಿದವರು ಚಿಕ್ಕ ಹುಡುಗ, ಇನ್ನೂ ಮೀಸೆ ಕೂಡ ಬಂದಿರದವನಂತೆ. ಅಂಥವನನ್ನು ಗೆಲ್ಲಿಸಿದ್ದು ನಮ್ಮ ಜಾತಿಯವರು ಎಂದು ಹೇಳುತ್ತಾರೆ. ಇವರೆಲ್ಲ ಇಲ್ಲಿ ಬಂದು ನಮಗೆ ಹಿಂದುತ್ವದ ಪಾಠ ಮಾಡುತ್ತಾರೆ. ಇದು ನಮ್ಮ ಭದ್ರಕೋಟೆ. ನಾವು ಹಿಂದುತ್ವಕ್ಕೆ ಸೇವೆ ಸಲ್ಲಿಸಿ ಸಾಕೋ ಸಾಕಾಗಿದೆ. ನಮಗೆ ಹಿಂದುತ್ವ ಕಲಿಸಲು ಇವರು ಬಂದಿದ್ದಾರೆ’ ಎಂದು ಆಡಿಯೋದಲ್ಲಿ ಟೀಕಿಸಿದ್ದಾರೆ.
‘ಇಂಥವರ ಬಗ್ಗೆ ರಾಷ್ಟ್ರೀಯ ಹಾಗೂ ರಾಜ್ಯದ ನಾಯಕರಿಗೆ ಸರಿಯಾಗಿ ತಿಳಿಸಬೇಕು. ಇವರು ಪ್ರವಾಸ ಮಾಡಬಾರದು. ಪ್ರವಾಸ ಮಾಡಿದರೆ ಬಿಜೆಪಿ ಅವಸಾನವಾಗುತ್ತದೆ. ಬಂಟ್ವಾಳದಲ್ಲಿ ಇವರ ಮಾತನ್ನು ಯಾರೂ ಕೇಳುವುದಿಲ್ಲ. ಪಕ್ಷವನ್ನು ಕಟ್ಟಿದವರು ಇಲ್ಲಿದ್ದಾರೆ. ಅವರು ಹೋರಾಟ ಮಾಡುತ್ತಿದ್ದಾರೆ. ನಾವೆಲ್ಲ ಸೇರಿ ಅವರನ್ನು ಗೆಲ್ಲಿಸುತ್ತೇವೆ. ರಾಜೇಶ್ ನಾಯ್ಕ್ ಗೆದ್ದೇ ಗೆಲ್ಲುತ್ತಾರೆ. ಅದಕ್ಕೆ ಯಾರಿಂದಲೂ, ಯಾವುದೇ ಭಾಷಣದಿಂದಲೂ ಕಡಿವಾಣ ಬೀಳುವುದಿಲ್ಲ. ಅದನ್ನು ಯಾರೂ ಕೇಳುವುದಿಲ್ಲ’ ಎಂದು ಹೇಳಿದ್ದಾರೆ.
‘ಈಗ ಕಾಂಗ್ರೆಸ್ ನವರಿಗೆ ಒಂದು ಅಸ್ತ್ರ ಸಿಕ್ಕಿದೆ. ಇಂದಿನ ಹೇಳಿಕೆಯನ್ನೇ ಕಟ್ ಮಾಡಿ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯ ಶಾಸಕರು, ಸಂಸದರಿಗೆ ಸಂಘಟನೆಯ ನಾಯಕರಿಂದ ಛೀಮಾರಿ ಬೇಕಾ? ನಾಳೆ ಅವರು ಪತ್ರಿಕಾಗೋಷ್ಠಿ ನಡೆಸಬೇಕು. ಯಾರು? ಇಂದು ಬಂದ ದಾವಣಗೆರೆಯವರು ಪತ್ರಿಕಾಗೋಷ್ಠಿ ನಡೆಸಿ, ನಾವು ಬಿಜೆಪಿಯ ಶಾಸಕರು, ಸಂಸದರಿಗೆ ಹೇಳಿದ್ದಲ್ಲ ಎಂದು ಸ್ಪಷ್ಟಪಡಿಸಬೇಕು. ಇಲ್ಲವಾದರೆ ಸಮಸ್ಯೆಯಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.
‘ಇನ್ನು ಮುಂದೆ ನಾವು ಸಂಘಟನೆಗೆ ಒಂದು ರೂಪಾಯಿಯ ಸಹಕಾರ ಮಾಡುವುದಿಲ್ಲ. ಸಂಘಟನೆಯ ಕಾರ್ಯಕ್ರಮಕ್ಕೂ ಬರುವುದಿಲ್ಲ. ನಾವು ಬಿಜೆಪಿ, ಅಷ್ಟೇ’ ಎಂದು ಕೃಷ್ಣಪ್ಪ ಕಲ್ಲಡ್ಕರದ್ದು ಎಂದು ಹೇಳಲಾದ ಆಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.