ಹಣ ಪಡೆದು ಹಜ್ ಯಾತ್ರಿಕರಿಗೆ ಆಹಾರ ನೀಡದೆ ವಂಚನೆ: ಆರೋಪ
► ದ.ಕ. ಜಿಲ್ಲೆಯ ಸಾವಿರಕ್ಕೂ ಅಧಿಕ ಮಂದಿ ಆಹಾರಕ್ಕಾಗಿ ಅಲೆದಾಟ ► ಇದಕ್ಕೂ ನಮಗೂ ಸಂಬಂಧವಿಲ್ಲ: ಮುಹಮ್ಮದ್ ಹನೀಫ್ ಹಾಜಿ
ಮಂಗಳೂರು, ಮೇ 31: ಹಜ್ ಕಮಿಟಿಯ ಮೂಲಕ ಪವಿತ್ರ ಹಜ್‌ಯಾತ್ರೆಗೆ ತೆರಳಿದ ದ.ಕ.ಜಿಲ್ಲೆಯ ಸಾವಿರಕ್ಕೂ ಅಧಿಕ ಮಂದಿಗೆ ಹಜ್-ಉಮ್ರಾ ಟೂರ್ ಸಂಸ್ಥೆಯೊಂದು ಹಣ ಪಡೆದು ಸಕಾಲಕ್ಕೆ ಆಹಾರ ನೀಡದೆ ವಂಚಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಹಲವು ಪ್ರಮುಖ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ವ್ಯಕ್ತಿಯೊಬ್ಬರು ಈ ವಂಚನೆಯ ಹಿಂದೆ ಇದ್ದಾರೆ ಎಂದು ಹೇಳಲಾಗುತ್ತಿದ್ದು, ಹಜ್ಜಾಜ್‌ಗಳ ನೋವಿನಿಂದ ಕೂಡಿದ ಧ್ವನಿ ಸಂದೇಶಗಳು ಮತ್ತು ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪ್ರಸಕ್ತ ಸಾಲಿನ ಹಜ್ ಯಾತ್ರೆಗೆ ಸಿದ್ಧತೆ ನಡೆಸುತ್ತಿರುವ ವೇಳೆ ಸದ್ರಿ ವ್ಯಕ್ತಿಯು ವಾಟ್ಸ್ ಆ್ಯಪ್ ಗ್ರೂಪೊಂದನ್ನು ರಚಿಸಿ ಹಜ್-ಉಮ್ರಾ ಟೂರ್ ಸಂಸ್ಥೆಯೊಂದರಿಂದ ಹಜ್ ಕಮಿಟಿ ಮೂಲಕ ಹೋಗುವ ಯಾತ್ರಿಕರಿಗೆ ಊಟದ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿ ಪ್ರತಿಯೊಬ್ಬರಿಂದಲೂ 22 ಸಾವಿರ ರೂ. ಮುಂಗಡವಾಗಿ ಪಡೆದುಕೊಂಡಿದ್ದರು ಎನ್ನಲಾಗಿದೆ. ಆದರೆ ಯಾತ್ರಿಕರಿಗೆ ಮಕ್ಕಾದಲ್ಲಿ ಸಕಾಲಕ್ಕೆ ಊಟದ ವ್ಯವಸ್ಥೆ ಮಾಡದೆ ಸದ್ರಿ ವ್ಯಕ್ತಿಯು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಮ್ಮದು ಸೌದಿ ಸರಕಾರದಿಂದಲೇ ಲೈಸನ್ಸ್ ಹೊಂದಿರುವ ಕ್ಯಾಟರಿಂಗ್ ಆಗಿದೆ. ನಿಮಗೆ ಕ್ಲಪ್ತ ಸಮಯಕ್ಕೆ ಆಹಾರದ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸದ್ರಿ ವ್ಯಕ್ತಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ದ.ಕ.ಜಿಲ್ಲೆಯಿಂದ ಸುಮಾರು 1300ಕ್ಕೂ ಅಧಿಕ ಮಂದಿ ಹಜ್ ಕಮಿಟಿ ಮೂಲಕ ಹಜ್ ಯಾತ್ರೆ ಕೈಗೊಂಡಿದ್ದು, ಈ ವ್ಯಕ್ತಿಯ ಮಾತು ನಂಬಿ 22 ಸಾವಿರ ರೂ. ಪಾವತಿಸಿ ಬಂದ ನಮಗೆ ಈವರೆಗೆ ಸರಿಯಾದ ಆಹಾರ ಸಿಗಲೇ ಇಲ್ಲ. ಪ್ರಶ್ನಿಸಿದರೆ ಸರಿಯಾಗಿ ಸ್ಪಂದಿಸಲಿಲ್ಲ. ನಾವೀಗ ಉಪಾಯವಿಲ್ಲದೆ ಬೇರೆ ಕಡೆ ಹೋಗಿ ಆಹಾರಕ್ಕಾಗಿ ಸರದಿ ಸಾಲಿ ನಲ್ಲಿ ನಿಲ್ಲುವಂತಾಗಿದೆ ಎಂದು ಕೆಲವು ಹಜ್ಜಾಜಿಗಳು ಅದೇ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿ ದ್ದರು. ಹಜ್ ಯಾತ್ರಿಕರ ಸೇವೆಯ ಹೆಸರಿನಲ್ಲಿ ಹಣ ವಸೂಲಿ ಮಾಡಿ ನಮ್ಮನ್ನು ವಂಚಿಸಿದ್ದಾರೆ ಎಂದೂ ಹಜ್ಜಾಜ್‌ಗಳು ಆರೋಪಿಸಿದ್ದಾರೆ. ಇದರ ಧ್ವನಿ ಸಂದೇಶ ಮತ್ತು ವೀಡಿಯೋ ವೈರಲ್ ಆಗುತ್ತಲೇ ಇದೀಗ ವಾಟ್ಸ್‌ಆ್ಯಪ್ ಗ್ರೂಪನ್ನು ಆಡ್ಮಿನ್ ಓನ್ಲಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
► ಇದಕ್ಕೂ ನಮಗೂ ಸಂಬಂಧವಿಲ್ಲ: ಮುಹಮ್ಮದ್ ಹನೀಫ್ ಹಾಜಿ
ಈ ಬಾರಿ ದ.ಕ.ಜಿಲ್ಲೆಯಿಂದ 1300ಕ್ಕೂ ಅಧಿಕ ಮಂದಿ ಹಜ್ ಯಾತ್ರೆ ಕೈಗೊಂಡಿದ್ದಾರೆ. ಆ ಪೈಕಿ 800ಕ್ಕೂ ಅಧಿಕ ಮಂದಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ನೆರವು ನೀಡಿದೆ. ಹಜ್ ಯಾತ್ರಾರ್ಥಿಗಳಿಗೆ ತಮ್ಮ ಕೊಠಡಿಗಳಲ್ಲಿ ಆಹಾರ ತಯಾರಿಸುವ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಕೆಲವು ಉಮ್ರಾ ಟೂರ್ ಸಂಸ್ಥೆಯವರು ಊಟದ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿದ್ದರು. ಅದರಂತೆ ಕೆಲವು ಯಾತ್ರಿಕರು ಊಟಕ್ಕಾಗಿ ಆ ಸಂಸ್ಥೆಯವರಿಗೆ ಹಣವನ್ನು ಪಾವತಿಸಿ ದ್ದರು. ಆಹಾರ ನೀಡುವ ವ್ಯವಸ್ಥೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದಲ್ಲಿ ಆ ಸಂಸ್ಥೆಯವರು ಹಾಗೂ ಹಾಜಿಗಳು ನೇರ ಹೊಣೆಯಾಗಿರುತ್ತಾರೆ ಎಂಬುದನ್ನು ನಾವು ಆರಂಭದಲ್ಲೇ ತಿಳಿಸಿದ್ದೆವು. ಆದರೆ ಯಾತ್ರಿಕರು ನಮ್ಮ ಸೂಚನೆ ಮೀರಿ ಖಾಸಗಿ ವ್ಯಕ್ತಿಗೆ ಹಣ ಪಾವತಿಸಿದ್ದಾರೆ. ಹಾಗೇ ಇದೀಗ ಊಟ ನೀಡದೆ ವಂಚಿಸಿರುವ ಬಗ್ಗೆ ನಮಗೂ ದೂರು ಬಂದಿದೆ. ಈ ಸಂಸ್ಥೆಯೊಂದಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿಗೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ತಿಳಿಸಿದ್ದಾರೆ.