Mangaluru : ಗ್ಲ್ಯಾನಿಶ್ ಮಾರ್ಟಿಸ್ಗೆ 2026 ನೇ ಸಾಲಿನ ಕಿಟಾಳ್ ಯುವ ಪುರಸ್ಕಾರ
ಮಂಗಳೂರು: 2026 ನೇ ಲಿಯೋ ರೊಡ್ರಿಗಸ್ ದತ್ತಿ ಕಿಟಾಳ್ ಯುವ ಪುರಸ್ಕಾರಕ್ಕೆ ಯುವ ಕವಿ ಮತ್ತು ಕಥೆಗಾರ ಗ್ಲ್ಯಾನಿಶ್ ಜ್ಯೂಡ್ ಮಾರ್ಟಿಸ್ ಆಯ್ಕೆಯಾಗಿದ್ದಾರೆ.
2011 ರಿಂದ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೊಂಕಣಿ ಸಾಹಿತಿ ಮತ್ತು ವಿಮರ್ಶಕ ಎಚ್. ಎಮ್. ಪೆರ್ನಾಲ್ ಅವರು ಸಂಪಾದಿಸಿ ಪ್ರಕಟಿಸುತ್ತಿರುವ ಕಿಟಾಳ್ (www.kittall.com) ಅಂತರ್ಜಾಲ ಸಾಹಿತ್ಯ ಪತ್ರಿಕೆಯು, ಯುವ ಬರಹಗಾರನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2012 ನೇ ವರ್ಷದಿಂದ ಲಿಯೊ ರೊಡ್ರಿಗಸ್ ದತ್ತಿ ಕಿಟಾಳ್ ಯುವ ಪುರಸ್ಕಾರವನ್ನು ನೀಡುತ್ತಾ ಬರುತ್ತಿದೆ.
ಈ ಪ್ರಶಸ್ತಿಯನ್ನು ಅಬುದಾಬಿಯ ಅನಿವಾಸಿ ಉದ್ಯಮಿ ಮತ್ತು ಕೊಂಕಣಿ ಸಮರ್ಥಕ ಲಿಯೋ ರೊಡ್ರಿಗಸ್ ಕುಟುಂಬ ಪ್ರಾಯೋಜಿಸುತ್ತಿದ್ದು, ಪ್ರಶಸ್ತಿಯು 25,000 ನಗದು ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರಧಾನ ಸಮಾರಂಭವು ಶನಿವಾರ ಅಕ್ಟೋಬರ್ 3 ರಂದು, ಹಂಪನಕಟ್ಟೆ ಎಂಸಿಸಿ ಬ್ಯಾಂಕಿನ ಸಭಾಗೃಹದಲ್ಲಿ ಸಂಜೆ 6.30 ಕ್ಕೆ ನಡೆಯಲಿದ್ದು, ಲಿಯೋ ರೊಡ್ರಿಗಸ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕೊಂಕಣಿ ಭಾಷೆಯ ಬರಹಗಾರರಾದ ವಿಲ್ಸನ್ ಕಟೀಲ್, ವಿಲ್ಮ ಬಂಟ್ವಾಳ್, ಸ್ಟ್ಯಾನಿ ಬೇಳಾ, ರೋಶು ಬಜ್ಪೆ, ಜೊ.ಸಿ.ಸಿದ್ದಕಟ್ಟೆ, ಕಿರಣ್ ನಿರ್ಕಾಣ್ ಮುಂತಾದವರು ಈ ಹಿಂದೆ ಕಿಟಾಳ್ ಯುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೂಡಬಿದ್ರೆ ಅಲಂಗಾರಿನ ಲವೀನಾ ಮತ್ತು ಗಿಲ್ಬರ್ಟ್ ಮಾರ್ಟಿಸ್ ದಂಪತಿಯ ಮಗನಾದ ಗ್ಲಾನಿಶ್ ಅವರು ಆಳ್ವಾಸ್ ಕಾಲೇಜಿನ ಹಳೆವಿದ್ಯಾರ್ಥಿ. ಕಳೆದ ಒಂದು ದಶಕದಿಂದ ಕೊಂಕಣಿಯಲ್ಲಿ ಸತತವಾಗಿ ಬರೆಯುತ್ತಿರುವ ಇವರು ಕೊಂಕಣಿಯಲ್ಲಿ ಭರವಸೆಯ ಯುವ ಲೇಖಕ ಮತ್ತು ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ. 2024 ರಲ್ಲಿ ಅವರ ಚೊಚ್ಚಲ ಕಥಾಸಂಕಲನ ’ಹೆರಿಡಿಟಿ’ ಪ್ರಕಟವಾಗಿದ್ದು, ಈ ವರೆಗೆ ಕೊಂಕಣಿಯಲ್ಲಿ ಸುಮಾರು 25 ಸಣ್ಣಕಥೆಗಳು, 60 ಕವನಗಳು ಮತ್ತು 20 ಲೇಖನಗಳನ್ನು ಬರೆದಿರುತ್ತಾರೆ. 2025 ರಲ್ಲಿ ಅವರ ಗೀತ ಸಾಹಿತ್ಯಕ್ಕೆ 'ECW ಬೆಸ್ಟ್ ಮಲ್ಟಿಲಿಂಗ್ವಲ್ ಲಿರಿಸಿಸ್ಟ್ ಪ್ರಶಸ್ತಿ' ಬಂದಿದೆ.
ಕೊಂಕಣಿಯ ಜೊತೆಗೆ ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲೂ ಬರೆಯುವ ಗ್ಲಾನಿಶ್, ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಡಾ| ಸಂತೋಷ್ ಎಲ್. ಗಾಂವ್ಕರ್ ಇವರ ಮಾರ್ಗದರ್ಶನದಲ್ಲಿ ಪ್ರಸ್ತುತ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ. ಆರ್ಗ್ಯಾನಿಕ್ ಮತ್ತು ಮೆಡಿಸಿನಲ್ ಕೆಮಿಸ್ಟ್ರಿ ಕ್ಷೇತ್ರಕ್ಕೆ ಸಂಬಂಧಿಸಿ ಅಧ್ಯಯನ ಮಾಡುತ್ತಿರುವ ಗ್ಲಾನಿಶ್ ಅವರು, 2024 ರಿಂದ 25 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಕಟಣೆಗಳನ್ನು ಬರೆದಿರುತ್ತಾರೆ. ರಾಸಾಯನಿಕ ವಿಜ್ಞಾನಗಳ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಲಂಡನ್‌ನ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ (AMRSC) ಅಸೋಸಿಯೇಟ್ ಸದಸ್ಯರಾಗಿ ಅವರು ಇತ್ತೀಚೆಗೆ ಸೇರ್ಪಡೆಯಾಗಿದ್ದಾರೆ.