ಬೇಡಿಕೆ ಈಡೇರುವವರೆಗೆ ಎಂಆರ್ಪಿಎಲ್ ವಿರುದ್ಧ ತೀಕ್ಷ್ಣ ಹೋರಾಟ : ಸತ್ಯಜಿತ್ ಸುರತ್ಕಲ್ ಎಚ್ಚರಿಕೆ
ಎಂಆರ್ಪಿಎಲ್ ನಾಲ್ಕನೇ ಹಂತದ ನಿರ್ವಸಿತರ ಸಭೆ
ಸುರತ್ಕಲ್: ಕಳುವಾರು ಮತ್ತು ಕುತ್ತೆತ್ತೂರು ಭಾಗದ ಜನರಿಗೆ ಹಾಗೂ ನೌಕರರಿಗೆ ನ್ಯಾಯ ಒದಗಿಸಬೇಕು. ಜಿಲ್ಲೆಯ ಜನರ ಬೇಡಿಕೆಗಳು ಈಡೇರುವವರೆಗೆ ಎಂಆರ್ಪಿಎಲ್ ವಿರುದ್ಧ ತೀಕ್ಷ್ಣ ಹೋರಾಟ ಆರಂಭಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಎಚ್ಚರಿಕೆ ನೀಡಿದ್ದಾರೆ.
ಕುತ್ತೆತ್ತೂರಿನಲ್ಲಿ ರವಿವಾರ ನಡೆದ ಎಂಆರ್ಪಿಎಲ್ ನಾಲ್ಕನೇ ಹಂತದ ನಿರ್ವಸಿತರ ಸಭೆಯಲ್ಲಿ ಮಾತನಾಡಿದ ಅವರು, ಎಂಆರ್ಪಿಎಲ್ ಭೂ ನಿರ್ವಸಿತರು, ಕಳುವಾರು ಸಂತ್ರಸ್ತರು ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜಂಟಿ ಕ್ರಿಯಾ ಸಮಿತಿ ಹೋರಾಟದ ನೇತೃತ್ವ ವಹಿಸಿಕೊಂಡಿದೆ. ಬೇಡಿಕೆಗಳು ಈಡೇರುವವರೆಗೆ ಹೋರಾಟ ನಿರಂತರವಾಗಿ ನಡೆಯಲಿದೆ. ಜನರ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿ ಸರ್ಕಾರ ಮತ್ತು ಎಂಆರ್ಪಿಎಲ್ ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.
ಕ್ರಿಯಾ ಸಮಿತಿಯ ಶಶಿರಾಜ್ ಕೊಳಂಬೆ ಮಾತನಾಡಿ, ಜನರ ತಾಳ್ಮೆಯನ್ನು ಪರೀಕ್ಷಿಸಬಾರದು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಂಪನಿಗಾಗಿ ಜಾಗ ಬಿಟ್ಟುಕೊಟ್ಟ ಕುಟುಂಬಗಳನ್ನು ನಿರ್ಲಕ್ಷಿಸಬಾರದು ಎಂದು ಎಚ್ಚರಿಸಿದರು.
ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ಮಾತನಾಡಿ, ಪ್ರತಿಯೊಬ್ಬ ಸಂತ್ರಸ್ತ ಕುಟುಂಬದವರು ಕುಟುಂಬ ಸಮೇತರಾಗಿ ಹೋರಾಟಕ್ಕೆ ಕೈಜೋಡಿಸಬೇಕು. ಸೌಲಭ್ಯಗಳಿಂದ ವಂಚಿತರಾದವರು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಯಶಸ್ಸು ಖಚಿತ ಎಂದರು.
ಸಭೆಯಲ್ಲಿ ನಿರ್ವಸಿತರ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ, ಸಂಚಾಲಕ ಡೋನಿ ಸುವಾರಿಸ್, ಪ್ರವೀಣ್ ಕುಮಾರ್, ಗುರುಪ್ರಸಾದ್ ಭಟ್ ಸೇರಿದಂತೆ ನಿರ್ವಸಿತ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದು, ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ :
ನೌಕರರಿಗೆ ನ್ಯಾಯಯುತ ಸೌಲಭ್ಯಗಳನ್ನು ಒದಗಿಸಬೇಕು. ಎಂಆರ್ಪಿಎಲ್ನ ನಾಲ್ಕನೇ ಹಂತದಲ್ಲಿ ಅಂದಾಜು 450ಕ್ಕೂ ಅಧಿಕ ನಿರ್ವಸಿತ ಕುಟುಂಬಗಳಿದ್ದು, ಅವರಿಗೆ ಉದ್ಯೋಗ ಹಾಗೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಈ ಬೇಡಿಕೆಗಳ ಈಡೇರಿಕೆಗಾಗಿ ಮೊದಲ ಹಂತದಲ್ಲಿ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಸತ್ಯಜಿತ್ ಸುರತ್ಕಲ್ ತಿಳಿಸಿದರು.