ದ್ವೇಷ ಭಾಷಣ ಮಾಡಿರುವ ಸಿ.ಟಿ.ರವಿಯನ್ನು ಕೂಡಲೇ ಬಂಧಿಸಿ: ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ ಆಗ್ರಹ
ಮಂಗಳೂರು: ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದನ್ನೇ ರಾಜಕೀಯ ಎಂದುಕೊಂಡಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಗುರುವಾರ ಚಿಕ್ಕಮಗಳೂರಿನಲ್ಲಿ ನೀಡಿರುವ ಹೇಳಿಕೆ ಆಘಾತಕಾರಿಯಾಗಿದೆ. "ಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ. ಎದೆ ಸೀಳಿದರೆ ಮೂರು ಅಕ್ಷರ ಬರುವುದಿಲ್ಲ" ಎಂದು ಸಿ.ಟಿ.ರವಿ ದ್ವೇಷದ ಹೇಳಿಕೆ ನೀಡಿದ್ದಾರೆ. ಎಲ್ಲ ವಿಷಯದಲ್ಲೂ ಮುಸ್ಲಿಮರನ್ನು ಎಳೆದು ತಂದು ವಿಷಯಾಂತರ ಮಾಡುವ ತಮ್ಮ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆ. ಒಂದು ಧರ್ಮದ ಗೌರವಾನ್ವಿತ ಧರ್ಮಗುರುಗಳನ್ನು ಅವಮಾನಿಸುವ ಮೂಲಕ ಜನರನ್ನು ಧರ್ಮದ ಆಧಾರದಲ್ಲಿ ಪ್ರಚೋದಿಸಿ, ವಿಭಜಿಸಿ, ದ್ವೇಷ ಹರಡುವ ದುಷ್ಟ ಸಂಚು ಎಸಗಿದ್ದಾರೆ. ಅದಕ್ಕಾಗಿ ಸಿ.ಟಿ.ರವಿ ವಿರುದ್ಧ ಚಿಕ್ಕಮಗಳೂರು ಜಾಮಿಯ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಈಗಾಗಲೇ ದೂರು ದಾಖಲಿಸಿದ್ದಾರೆ. ದ್ವೇಷ ಭಾಷಣ ಮಾಡಿರುವ ಹಾಗೂ ದ್ವೇಷ ಅಪರಾಧಕ್ಕೆ ಪ್ರಚೋದಿಸಿದ ಆರೋಪದಲ್ಲಿ ಕೂಡಲೇ ಕಾನೂನು ಕ್ರಮ ಕೈಗೊಂಡು ಸಿ.ಟಿ.ರವಿಯನ್ನು ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ ಆಗ್ರಹಿಸಿದೆ.
ನೀಟ್ ಪರೀಕ್ಷೆಯಲ್ಲಿ ನಡೆದಿರುವ ಹಗರಣದ ವಿರುದ್ಧದ ವಿದ್ಯಾರ್ಥಿಗಳು ಹಾಗೂ ಯುವಜನರ ಪ್ರತಿಭಟನೆ ಇಡೀ ದೇಶಾದ್ಯಂತ ಹಬ್ಬಿದೆ. ಎಲ್ಲೆಡೆ ಜನರು ಬೀದಿಗಿಳಿದು ಮೋದಿ ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ರಾಜಧಾನಿ ದಿಲ್ಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ವಾರಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇವೆಲ್ಲದರಿಂದ ಮೋದಿ ಸರಕಾರ ಹಾಗೂ ಬಿಜೆಪಿ ಕಂಗೆಟ್ಟಿದೆ. ದೇಶದ ಉದ್ದಗಲಗಳಲ್ಲಿ ವೇಗವಾಗಿ ಹಬ್ಬುತ್ತಿರುವ ಯುವಜನರ ಆಂದೋಲನವನ್ನು ಹೇಗೆ ಹತ್ತಿಕ್ಕಬೇಕು ಎಂದು ಗೊತ್ತಾಗದೆ ಬಿಜೆಪಿ ಕಂಗಾಲಾಗಿದೆ. ಜನರಿಂದ ಬರುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಸಹಾಯಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಯಾವತ್ತೂ ಅನುಸರಿಸುವ ಮುಸ್ಲಿಮ್ ದ್ವೇಷ ಹಾಗೂ ಹಿಂದೂ ಮುಸ್ಲಿಮ್ ವಿಭಜನೆಯ ನೀತಿಯನ್ನೇ ಸಿ.ಟಿ.ರವಿ ಪುನಃ ಅನುಸರಿಸಿದ್ದಾರೆ. ಇನ್ನೊಂದು ಕಡೆ ಅವರದೇ ಪಕ್ಷದ ಮಾಜಿ ಸಂಸದ ಪ್ರತಾಪ್ ಸಿಂಹ ದಿಲ್ಲಿಯ ಜಂತರ್ ಮಂತರ್ ನಲ್ಲಿ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಅಂದರೆ ಈ ಬಿಜೆಪಿ ನಾಯಕರಿಗೆ ಗುಲಾಮರಂತೆ ಬಾಯಿ ಮುಚ್ಚಿಕೊಂಡು ಮತ ಚಲಾಯಿಸುವವರು ಮಾತ್ರ ಬೇಕು, ಆಳುವವರಿಗೆ ಸರಿಯಾದ ಪ್ರಶ್ನೆ ಕೇಳುವ ಜಾಗೃತ ಪ್ರಜೆಗಳು ಇವರಿಗೆ ಬೇಡವಾಗಿದ್ದಾರೆ ಎಂದು ಒಕ್ಕೂಟ ಟೀಕಿಸಿದೆ.
ನೀಟ್ ಹಗರಣದ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನೇ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ವಿದ್ಯಾರ್ಥಿಗಳ ಜೊತೆ ಸೇರಿ ನ್ಯಾಯಕ್ಕಾಗಿ ಆಗ್ರಹಿಸಬೇಕಿದ್ದ ಬಿಜೆಪಿ ಅವರ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದೆ. ಅಂತಹ ಜನವಿರೋಧಿ ಪ್ರತಿಭಟನೆಯಲ್ಲಿ ವಿಷಯಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿರದ ತೀರಾ ಪ್ರಚೋದನಕಾರಿ ಹಾಗೂ ಕೀಳು ಅಭಿರುಚಿಯ ಹೇಳಿಕೆಯನ್ನು ಸಿ.ಟಿ.ರವಿ ನೀಡಿದ್ದಾರೆ. ಹಿಂದೂ - ಮುಸ್ಲಿಮ್ ಎಂದು ಜನರನ್ನು ವಿಭಜಿಸುವ ಬಿಜೆಪಿಯ ಈ ನೀತಿಯಿಂದ ಜನರು ಅದರಲ್ಲೂ ವಿಶೇಷವಾಗಿ ಯುವಜನರು ರೋಸಿ ಹೋಗಿದ್ದಾರೆ ಎಂಬುದು ಸಿ.ಟಿ.ರವಿಗೆ ಇನ್ನೂ ಗೊತ್ತಾಗಿಲ್ಲ ಎಂದು ಒಕ್ಕೂಟ ಹೇಳಿದೆ.
ಬಿಜೆಪಿ ನಾಯಕರ ಹೇಳಿಕೆ ಹಾಗೂ ಅವರ ದ್ವಂದ್ವ ನೀತಿಗಳಿಗೆ ಬಹಳ ಹತ್ತಿರದ ನಂಟಿದೆ. ಒಂದು ಕಡೆ ಮುಸ್ಲಿಮ್ ಹೆಣ್ಣು ಮಕ್ಕಳು ಹಿಜಾಬ್ ಧರಿಸಿಕೊಂಡು ಶಾಲಾ-ಕಾಲೇಜಿಗೆ ಹೋಗುವುದನ್ನು ಬಿಜೆಪಿಗರು ವಿರೋಧಿಸುತ್ತಾರೆ. ಇವರ ಸರಕಾರ ಮುಸ್ಲಿಮರಿಗೆ ಶಿಕ್ಷಣದಲ್ಲಿ ಸಿಗುತ್ತಿದ್ದ ಸಂವಿಧಾನಬದ್ಧ ಮೀಸಲಾತಿಯನ್ನು ತೆಗೆದು ಹಾಕುತ್ತದೆ. ಮತ್ತೊಂದು ಕಡೆ ಮುಸ್ಲಿಮ್ ಹೆಣ್ಣು ಮಕ್ಕಳಿಗೆ ಆ ಸಮುದಾಯ ಶಿಕ್ಷಣ ನೀಡುವುದಿಲ್ಲ ಎಂದು ಅವರೇ ಹೇಳುತ್ತಾರೆ. ಉತ್ತರ ಪ್ರದೇಶದ ಬಿಜೆಪಿ ಸರಕಾರ ಕ್ಷುಲ್ಲಕ ಕಾರಣ ನೀಡಿ ಮುಸ್ಲಿಮ್ ನಾಯಕರು ಸ್ಥಾಪಿಸಿದ ಭವ್ಯ ಮುಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾನಿಲಯದ ಡಝನ್ ಗಟ್ಟಲೆ ಕಟ್ಟಡಗಳನ್ನು ಧ್ವಂಸ ಮಾಡಲು ಹೊರಡುತ್ತದೆ. ಅದೇ ಬಿಜೆಪಿಯ ಸಿ.ಟಿ.ರವಿ ಇಲ್ಲಿ ನಿಂತು ಮುಸ್ಲಿಮರ ಎದೆ ಸೀಳಿದರೆ ಮೂರು ಅಕ್ಷರ ಬರುವುದಿಲ್ಲ ಎಂದು ಹೇಳಿಕೆ ಕೊಡುತ್ತಾರೆ. ಅಂದರೆ ಬಿಜೆಪಿಗೆ ಮುಸ್ಲಿಮ್ ಸಮುದಾಯಕ್ಕೆ ಶಿಕ್ಷಣ ಸಿಗಬೇಕು ಎಂಬ ಪ್ರಾಮಾಣಿಕ ಕಳಕಳಿ ಇಲ್ಲ, ಕೇವಲ ತನ್ನ ರಾಜಕೀಯಕ್ಕಾಗಿ ಮುಸ್ಲಿಮ್ ಸಮುದಾಯವನ್ನು ಬೇಕಾದಂತೆ ಬಳಸಿಕೊಳ್ಳುವುದು ಮಾತ್ರ ಅವರಿಗೆ ಬೇಕಿದೆ. ಇದನ್ನು ಈಗ ಈ ದೇಶದ ಜನರೂ ಅರ್ಥ ಮಾಡಿಕೊಳ್ಳುತ್ತಿದ್ದಾರೆ.
ಸಿ.ಟಿ.ರವಿ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಹರಡುವ ಸಾಧ್ಯತೆ ಇದೆ. ಜನರ ನಡುವೆ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಹಾಗು ಅನುಮಾನ ಹರಡಿ ಪ್ರಚೋದಿಸುವ ಉದ್ದೇಶ ಅವರ ಮಾತುಗಳಲ್ಲಿದೆ. ಅದಕ್ಕಾಗಿ ಸಿ.ಟಿ.ರವಿ ವಿರುದ್ಧ ಸರಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟದ ಮಾಧ್ಯಮ ವಕ್ತಾರ ಮತ್ತು ಸಂಚಾಲಕ ಸುಹೈಲ್ ಮರೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.