ಕುತ್ತಾರು: ಸ್ಪೀಕರ್ ಯು.ಟಿ. ಖಾದರ್‌ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಆರೋಪ; 11 ಮಂದಿ ವಿರುದ್ಧ ಪ್ರಕರಣ ದಾಖಲು
ಸ್ಪೀಕರ್ ಯು.ಟಿ. ಖಾದರ್
ಉಳ್ಳಾಲ : ಕುತ್ತಾರ್ ನಲ್ಲಿ ವೃತ್ತ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆಗೆ ಸಂಬಂಧಿಸಿದಂತೆ, ಸ್ಪೀಕರ್ ಅವರ ಅಂಗರಕ್ಷಕ ನೀಡಿದ ದೂರಿನಂತೆ 11 ಜನರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲವು ದಿನಗಳ ಹಿಂದೆ ಯು.ಟಿ. ಖಾದರ್ ಅವರು ಉಳ್ಳಾಲ ತಾಲೂಕಿಗೆ ತೆರಳಿದ್ದರು. ಈ ವೇಳೆ ಕುತ್ತಾರ್ ನಲ್ಲಿ ವೃತ್ತ ನಿರ್ಮಾಣ ವಿಚಾರ ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತು ಅಸಮಾಧಾನಗೊಂಡಿದ್ದ ಜನರ ತಂಡ ಅವರ ವಾಹನವನ್ನು ತಡೆದು ಅಸಭ್ಯವಾಗಿ ವರ್ತಿಸಿದ್ದರು ಎನ್ನಲಾಗಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ಎಂದು ತಿಳಿದು ಬಂದಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸ್ಪೀಕರ್ ಯುಟಿ ಖಾದರ್ ಅವರ ಅಂಗರಕ್ಷಕ ಮೊಹಮ್ಮದ್ ಯಾಸಿನ್ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣದಲ್ಲಿ ಓರ್ವನನ್ನು ಆರೋಪಿಯನ್ನಾಗಿ ಮಾಡಲಾಗಿದ್ದು, ಈತನ ಜೊತೆಗಿದ್ದರೆನ್ನಲಾದ ಇತರ 10 ಜನರ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಜನಪ್ರತಿನಿಧಿಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ನಿಯಮ ಉಲ್ಲಂಘಿಸಿ ಗುಂಪು ಸೇರಿದ ಆರೋಪಗಳ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.