ಸತ್ಯಜಿತ್ ಸುರತ್ಕಲ್‌ಗೆ ʼಪರಿವಾರ ಪಕ್ಷʼದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗಲಿ: ಸಂಘಪರಿವಾರದ ಕಾರ್ಯಕರ್ತ ಸಂದೀಪ್ ಪೂಜಾರಿ ಪಂಪ್‌ವೆಲ್
"ಟೂಲ್ ಕಿಟ್ ಎಂದು ಹೇಳುವುದು ಬಿಲ್ಲವ ಸಮಾಜಕ್ಕೆ ಮಾಡುವ ದೊಡ್ಡ ಅವಮಾನ"
Photo source | Facebook/Sandeep Poojary Pumpwell
ಮಂಗಳೂರು: ಸತ್ಯಜಿತ್ ಸುರತ್ಕಲ್ ಅವರಿಗೆ ಪರಿವಾರ ಪಕ್ಷದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಲಿ ಎಂದು ಸಂಘಪರಿವಾರದ ಕಾರ್ಯಕರ್ತ, ಹಿಂದೂ ಜಾಗರಣ ವೇದಿಕೆಯ ಮಾಜಿ ಮುಖಂಡ ಸಂದೀಪ್ ಪೂಜಾರಿ ಪಂಪ್‌ವೆಲ್ ಆಗ್ರಹಿಸಿದ್ದು, ಇದನ್ನು ಟೂಲ್ ಕಿಟ್" ಎಂದು ಹೇಳುವುದು ಸರಿಯಲ್ಲ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಬಂಟ್ವಾಳದ ಶರತ್ ಮಡಿವಾಳ ಹತ್ಯೆಗೆ 9 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿ ಎಲ್ಲರ ಗಮನ ಸೆಳೆದಿದ್ದ ಸಂದೀಪ್ ಪೂಜಾರಿ ಪಂಪ್‌ವೆಲ್, ತಮ್ಮ ಪೋಸ್ಟ್‌ನಲ್ಲಿ ತಾವು ಸಂಘಟನೆಯಲ್ಲಿದ್ದಾಗ ಎದುರಿಸಿದ ಸಂಕಷ್ಟದ ದಿನಗಳ ಬಗ್ಗೆ ಮೆಲುಕು ಹಾಕಿದ್ದರು. ಶರತ್ ಮಡಿವಾಳ ಅವರ ಪಾರ್ಥಿವ ಶರೀರದ ಮೆರವಣಿಗೆ ವೇಳೆ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿ ಮೂರು ಪ್ರಕರಣಗಳು ದಾಖಲಾಗಿ ಜೈಲು ವಾಸ ಅನುಭವಿಸಬೇಕಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಬಂದು ಬೌದ್ಧಿಕ, ಪ್ರವಚನ ಮಾಡುವುದಕ್ಕೂ ಅದನ್ನು ಅನುಭವಿಸುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಜಿಲ್ಲೆಯಲ್ಲಿನ ಕೊಲೆಗಳ ಹೆಸರಿನಲ್ಲಿ ಶಾಸಕರಾದವರು ಮಾತ್ರ ಕಳೆದ 9 ವರ್ಷಗಳಲ್ಲಿ ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಬೇಕಾಗುವಷ್ಟು ಜೋಳಿಗೆ ತುಂಬಿಸಿಕೊಂಡಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಮತ್ತೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಸಂದೀಪ್ ಪೂಜಾರಿ ಪಂಪ್‌ವೆಲ್, ಕಳೆದ ಎಂಟು ವರ್ಷಗಳಿಂದ ಸತ್ಯಜಿತ್ ಸುರತ್ಕಲ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂಬುದೇ ನಮ್ಮ ಪ್ರಮುಖ ಆಗ್ರಹವಾಗಿದೆ ಎಂದು ಹೇಳಿದ್ದಾರೆ.
ಸಂದೀಪ್ ಪೂಜಾರಿ ಪಂಪ್‌ವೆಲ್ ಪೋಸ್ಟ್‌ನಲ್ಲಿ ಏನಿದೆ?
ಮೊನ್ನೆಯ ಹೇಳಿಕೆಯನ್ನು ತಿರುಚಿ ನಿಮ್ಮ ನಿಮ್ಮ ಮೈಲೇಜ್ ತಕ್ಕಂತೆ ಸುದ್ದಿ ಮಾಡಿರುವ ಎಡ, ಬಲ ಪಂಥದ ಪ್ರತಿಯೊಬ್ಬರಿಗೂ ಇನ್ನೊಂದು ಅವಕಾಶ. ಇದನ್ನೂ ವೈರಲ್ ಮಾಡುವ ಜವಾಬ್ದಾರಿ ನಿಮ್ಮದು.
ಸತ್ಯಜಿತ್ ಸುರತ್ಕಲ್ ಅವರಿಗೆ ಪರಿವಾರ ಪಕ್ಷದಲ್ಲಿ "ಚುನಾವಣೆಗೆ" ಸ್ಪರ್ಧಿಸಲು ಅವಕಾಶ ಸಿಗಲಿ. ಕಳೆದ 8 ವರ್ಷಗಳಲ್ಲಿ ನಮ್ಮ ಆಗ್ರಹ ಇರುವುದು ಇದು ಒಂದೇ ಆಗಿದೆ. ನೀವು ಹೇಳುವ ಭದ್ರಕೋಟೆ, ಹಿಂದುತ್ವ ಎಲ್ಲವೂ ಇದರಲ್ಲೇ ಬರುತ್ತದೆ. ಯಾಕೆಂದರೆ, ರಾಜಕೀಯ ಬಿಟ್ಟು ಹಿಂದುತ್ವ ಇಲ್ಲ ಎನ್ನುವುದು ಸಂಘಟನೆಯ ಪ್ರಮುಖರು, ಕಾರ್ಯಕರ್ತರು ಕಳೆದ ನಾಲ್ಕೈದು ದಿನಗಳಿಂದ ತಿಳಿಸಿ ಕೊಟ್ಟಿದ್ದೀರಿ, ಹಾಗಾಗಿ ಹೇಳುತ್ತಾ ಇದ್ದೇವೆ, ಮುಂದಿನದು ಇತಿಹಾಸ ಆಗಲಿ. ಅನೇಕರ ಮೈಲೇಜ್ ಗಾಗಿ, ನಾನು ಹೇಳಿರುವ ಹೇಳಿಕೆಯನ್ನು ತಿರುಚಿ ನ್ಯೂಸ್ ಮಾಡುವವರು, ಪುಟಗಟ್ಟಲೇ ಬರೆಯುವವರು, ಇದರ ಬಗ್ಗೆನೂ ಪ್ರಚಾರ ಮಾಡಿ ಹಿಂದೂ ಪರ ಧ್ವನಿಗಾಗಿ ಕೈಜೋಡಿಸಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಬರೆದಿದ್ದಾರೆ.
ಬಿಲ್ಲವ ಸಮಾಜವನ್ನು ಟೂಲ್ ಕಿಟ್ ಎನ್ನುವವರಿಗೆ ಒಂದು ಕಿವಿಮಾತು, ಪ್ರತಿಯೊಂದು ಜಾತಿಯೂ ಹಿಂದುತ್ವ ಎನ್ನುವ ಆಲದ ಮರದ ಬೇರುಗಳು ಇದ್ದಂತೆ, ಇದನ್ನು ಗಟ್ಟಿಗೊಳಿಸುವ ಕಾರ್ಯವು ನಡೆಯಬೇಕು. ಹಾಗೂ ಅದು ಕಾಲದ ಬೇಡಿಕೆಯೂ ಹೌದು. ಅನಿವಾರ್ಯವೂ ಹೌದು.
ಬಿಲ್ಲವ ಸಮಾಜ ಸಂಘಟನೆ ಇರುವುದು ಸಮಾಜದ ಜಾಗೃತಿಗಾಗಿ, ಇದರ ಮೂಲಕ ಪಕ್ಷಾತೀತವಾಗಿ ಸಮಾಜದ ವ್ಯಕ್ತಿಗಳ ಪರವಾಗಿ ನಿಲ್ಲುವುದು ನಮ್ಮ SNGV ಸಂಘಟನೆಯ ಮೂಲ ಮಂತ್ರ ಮತ್ತು ಧ್ಯೇಯಯವಾಗಿದೆ.
ನಮ್ಮ ಸಮಾಜದ ಹಿತ ರಕ್ಷಣೆಯ ದೃಷ್ಟಿಯಿಂದ ಜಾಗೃತ ಸಮಾಜದ ನಿರ್ಮಾಣದ ಮೂಲಕ ಶಿಕ್ಷಣ, ಉದ್ಯೋಗ, ವ್ಯವಹಾರ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ, ರಾಜಕೀಯ ಕ್ಷೇತ್ರದಲ್ಲಿ ಬೆಳಗಬೇಕು ಎನ್ನುವುದು ನಮ್ಮ ಧ್ಯೇಯವಾಗಿದೆ.
ಇದನ್ನು ಟೂಲ್ ಕಿಟ್ ಎನ್ನುವುದು ಬಿಲ್ಲವ ಸಮಾಜಕ್ಕೆ ಮಾಡುವ ದೊಡ್ಡ ಅವಮಾನ ,ಇದನ್ನು ದಯವಿಟ್ಟು ಮಾಡಬೇಡಿ. ಯಾಕಂದ್ರೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ದೊಡ್ಡ ವರ್ಗವೇ ಸಾಮಾಜಿಕ ಜಾಲತಾಣದಲ್ಲಿದೆ ಎಂದು ಸಂದೀಪ್ ಪೂಜಾರಿ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಸಂದೀಪ್ ಪೂಜಾರಿ ಅವರ ಪೋಸ್ಟ್‌ಗೆ ಹಲವರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಸತ್ಯಜಿತ್ ಸುರತ್ಕಲ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಸುಧೀರ್ ಎಸ್ ಎಂಬವರು ಪ್ರತಿಕ್ರಿಯಿಸಿ, ಟೂಲ್ ಕಿಟ್ ಎಂದವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಹಿಂದೂ ಸಮಾಜದ ಶಕ್ತಿಯಾಗಿರುವ ಸತ್ಯಜಿತ್ ಸುರತ್ಕಲ್ ಅವರನ್ನು ಬಿಲ್ಲವ ಎನ್ನುವ ಕಾರಣಕ್ಕೆ ಸೀಮಿತ ಪಡಿಸುವ ಅಧಿಕಾರ ಅವರಿಗೆ ಕೊಟ್ಟವರು ಯಾರು? ಈ ಪ್ರಶ್ನೆಗೆ ಅವರಿಂದಲೇ ಉತ್ತರ ಸಿಗಬೇಕು. ಅಲ್ಲಿಯ ತನಕ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ರಾಮ್ ಪ್ರಸಾದ್ ಎಂಬವರು ಪ್ರತಿಕ್ರಿಯಿಸಿ, ನನಗೆ ಇಷ್ಟವಾದ ಮತ್ತು ಈಗಲೂ ಇಷ್ಟವಿರುವ ನೇರನಡೆನುಡಿಯ ಉತ್ತಮ ನಾಯಕರಲ್ಲಿ ಸತ್ಯಜಿತ್ ಸುರತ್ಕಲ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಅವರು ಎಂದೋ ಶಾಸಕರಾಗಬೇಕಿತ್ತು ಅಥವಾ ಸಂಸದರಾಗಬೇಕಿತ್ತು. ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನವನ್ನಾದರೂ ಭಾರತೀಯ ಜನತಾ ಪಕ್ಷ ಕೊಡಲೇಬೇಕಿತ್ತು. ಅಥವಾ ರಾಜ್ಯ ಬಿಜೆಪಿಯ ಅಧ್ಯಕ್ಷತೆ ಅಥವಾ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾಗಿಯಾದರೂ ಸಂಘಟನಾತ್ಮಕ ಹುದ್ದೆ ಕೊಟ್ಟು ಅವರ ಸಾರ್ವಜನಿಕ ಸೇವೆಗೆ ಮಾನ್ಯತೆ ನೀಡಬೇಕಿತ್ತು ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಲು ಬಹುಮಟ್ಟಿಗೆ ಸತ್ಯಜಿತ್ ಸುರತ್ಕಲ್ ಅವರನ್ನು ನಿರ್ಲಕ್ಷ್ಯ ಮಾಡಿದ್ದು, ಪುತ್ತೂರಿನಲ್ಲಿ ಶಕುಂತಳಾ ಶೆಟ್ಟರಿಗೆ ಟಿಕೆಟ್ ನಿರಾಕರಿಸಿ ಸ್ವಾಭಿಮಾನಿ ವೇದಿಕೆ ರೂಪುಗೊಂಡದ್ದು, ಅರುಣ್ ಕುಮಾರ್ ಪುತ್ತಿಲರನ್ನು ನಿರ್ಲಕ್ಷಿಸಿ ಪುತ್ತಿಲ ಪರಿವಾರ ಸಂಘಟನೆ ಹುಟ್ಟಲು ಅವಕಾಶ ಕೊಟ್ಟದ್ದಾಗಿದೆ. ಇದರಲ್ಲಿ ಮೊದಲ ಮತ್ತು ಮೂರನೆಯ ವಿಷಯಗಳನ್ನು ತ್ಯಾಗಮನೋಭಾವ ಇದ್ದರೆ ಹಟಮಾರಿತನ ಬಿಟ್ಟರೆ ಪರಿಹರಿಸಬಹುದು. ಪರಿಹರಿಸುವ ಮನಸು ಇರಬೇಕು, ಅಷ್ಟೆ ಎಂದು ಹೇಳಿದ್ದಾರೆ.
ಚೈತನ್ಯ ಭಟ್ ಎಂಬವರು ಪ್ರತಿಕ್ರಿಯಿಸಿ, ಹೌದು ನಮ್ಮ ಮೂಲ್ಕಿ ಮೂಡಬಿದರೆ ಕ್ಷೇತ್ರಕ್ಕೆ ಇವರು ಬೇಕು ಎಂದು ಹೇಳಿದ್ದಾರೆ.
ಎಸ್ ಕುಮಾರ್ ಎಂಬವರು ಪ್ರತಿಕ್ರಿಯಿಸಿ, ಯೋಗೀಶ್ ಭಟ್ರಿಗೆ ಸೋಲುವವರಿಗೆ ಟಿಕೆಟ್ ಕೊಡ್ತಾರೆ. ಆದರೆ ಒಬ್ಬ ಅಪ್ಪಟ ಹಿಂದುತ್ವವಾದಿಗೆ ಟಿಕೆಟ್ ಕೊಡಲ್ಲ ಎಂದು ಬರೆದುಕೊಂಡಿದ್ದಾರೆ.
ಆನಂದ್ ದೇಸಾಯಿ ಜೇರಟಗಿ ಎಂಬವರು ಪ್ರತಿಕ್ರಿಯಿಸಿ, ಹಿಂದುತ್ವ ರಾಜಕೀಯ ಅಂದರೆ, ಕೆಲ ಜಾತಿ ನಾಯಕರು ಹೋರಾಟ ಮಾಡಿದರೆ ಹಿಂದುತ್ವ, ಬೇರೆ ಜಾತಿಯವರು ಮಾಡಿದರೆ ಅದು ಡೊಂಗಿ ಹಿಂದುತ್ವ, ಅವರಿಗೆ ಯಾರು ಬಕೆಟ್ ಹಿಡಿಯುತ್ತಾರೆ ಅಂತಹಾ ಜನರು ಮಾತ್ರ ಹಿಂದುತ್ವವಾದಿಗಳು. ನಮ್ಮ ಬೆಂಬಲ ಸತ್ಯಜಿತ್ ಸುರತ್ಕಲ್ ಅವರಿಗೆ ಎಂದು ಬರೆದಿದ್ದಾರೆ.
ಶ್ರೀಧರ ಮಡಿವಾಳ ಎಂಬವರು ಪ್ರತಿಕ್ರಿಯಿಸಿ, ದಕ್ಷಿಣ ಕನ್ನಡದ ಎಲ್ಲಾ ಹಿಂದುತ್ವ ನಾಯಕರಿಗೆ ಹಿಂದುತ್ವ ಪಕ್ಷ ಎನಿಸಿಕೊಂಡವರು ಅವಕಾಶ ಕೊಡಲಿ. ಮಹೇಶ್ ಶೆಟ್ಟಿ ತಿಮರೋಡಿ, ಸತ್ಯಜಿತ್ ಸುರತ್ಕಲ್, ಪ್ರವೀಣ್ ವಾಲ್ಕೆ ಅವರಿಗೆ ಅವಕಾಶ ಕೊಡಲಿ ಎಂದು ಬರೆದುಕೊಂಡಿದ್ದಾರೆ.