ಮಡಂತ್ಯಾರು: ಜ್ಯುವೆಲ್ಲರಿಯಿಂದ 4.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಆಭರಣ ಖರೀದಿಸುವ ನೆಪದಲ್ಲಿ ಬಂದ ಇಬ್ಬರು ಅಪರಿಚಿತರಿಂದ ಕೃತ್ಯ
ಬೆಳ್ತಂಗಡಿ: ಮಡಂತ್ಯಾರಿನ ಜ್ಯುವೆಲ್ಲರಿ ಅಂಗಡಿಯೊಂದರಿಂದ ಸುಮಾರು ರೂ 4.40 ಲಕ್ಷ ಮೌಲ್ಯದ 35 ಗ್ರಾಂ ಚಿನ್ನಾಭರಣ ಕಳವು ಮಾಡಿರುವ ಘಟನೆ ನ.16ರಂದು ನಡೆದಿದ್ದು ಈಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಮಡಂತ್ಯಾರು ನಿವಾಸಿ ರಾಜೇಶ್ (43) ಎಂಬವರಿಗೆ ಸೇರಿದ ಜ್ಯುವೆಲ್ಲರಿ ಅಂಗಡಿಗೆ ಸಂಜೆ ವೇಳೆ ಆಭರಣ ಖರೀದಿಸುವ ನೆಪದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು, ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ಮಾಲೀಕರ ಗಮನಕ್ಕೆ ಬಾರದಂತೆ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮರುದಿನ ಬೆಳಿಗ್ಗೆ ಅಂಗಡಿಯಲ್ಲಿ ಆಭರಣಗಳನ್ನು ಜೋಡಿಸುವ ವೇಳೆ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.