ಮಂಗಳೂರು: ರೂಪಶ್ರೀಗೆ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರೀಯ ಪ್ರಶಸ್ತಿ
‘ಪ್ರಶಸ್ತಿ ಬರುವ ಕಲ್ಪನೆಯೂ ಇರಲಿಲ್ಲ’ ಎಂದ ನಟಿ ರೂಪಶ್ರೀ ವರ್ಕಾಡಿ
ಮಂಗಳೂರು, ಜು. 21: ‘ನನ್ನ ಅಭಿನಯಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಸಿಗುವ ಕಲ್ಪನೆಯೂ ನನಗಿರಲಿಲ್ಲ. ಹಾಗಾಗಿ ಈ ಪ್ರಶಸ್ತಿ ದೊರಕಿರುವುದು ಅತ್ಯಂತ ಖುಷಿ ನೀಡಿದೆ. ವೃತ್ತಿ ಜೀವನದಲ್ಲಿನ ಸಾಕಷ್ಟು ಏಳುಬೀಳುಗಳ ನಡುವೆ ಈ ಪ್ರಶಸ್ತಿ ಆನಂದವನ್ನು ತುಂಬಿದೆ’ ಎಂದು ನಟಿ, ಮಂಗಳೂರು ಮೂಲದ ರೂಪಶ್ರೀ ವರ್ಕಾಡಿ ಸಂತಸ ಹಂಚಿಕೊಂಡಿದ್ದಾರೆ.
ಮಿಥ್ಯ ಕನ್ನಡ ಚಿತ್ರದ ಅಭಿನಯಕ್ಕಾಗಿ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರೀಯ ಪ್ರಶಸ್ತಿ ದೊರಕಿರುವ ಬಗ್ಗೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಿರ್ದೇಶಕ ಸುಮಂತ್ ಭಟ್ ಹಾಗೂ ಇದೇ ಚಿತ್ರಕ್ಕಾಗಿ ಬಾಲನಟ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಅತೀಶ್ ಅವರ ಜತೆ ರೂಪಶ್ರೀಯವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಕಳೆದ ಎರಡೂವರೆ ದಶಕಗಳಿಗೂ ಹೆಚ್ಚಿನ ಕಾಲದ ಕಲಾ ಪಯಣದಲ್ಲಿ ಕನ್ನಡ, ತುಳು ಭಾಷೆಗಳ 700ಕ್ಕೂ ಅಧಿಕ ನಾಟಕಗಳಲ್ಲಿ 4000ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ ಸಾರ್ಥಕತೆ ನನ್ನದಾಗಿದೆ. ರಂಗ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಅವರ ‘ಸಂಸಾರದ ಸರ್ಕಸ್’ ನಾಟಕದ ಮೂಲಕ ವೃತ್ತಿಪರ ರಂಗಭೂಮಿಗೆ ಕಾಲಿಟ್ಟಿದ್ದು, ಹಲವು ತಂಡಗಳ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದೇನೆ. ಕ್ರಿಸ್ಟಿಫರ್ ನೀನಾಸಂ ಹಾಗೂ ವಿದ್ದು ಉಚ್ಚಿಲ್ ರಂಗಾಯಣ ಅವರಿಂದ ರಂಗ ತರಬೇತಿ ಪಡೆದಿರುವುದಾಗಿ ತಿಳಿಸಿದರು.
2017 ಮತ್ತು 2025ರಲ್ಲಿ ರೆಡ್ ಎಫ್‌ಎಂ ತುಳು ಫಿಲಂ ಅವಾರ್ಡ್‌ನಲ್ಲಿ ಉತ್ತಮ ಪೋಷಕ ನಟಿ, ಸ್ಯಾಂಡಿಸ್ ಕಂಪನಿ ಆಯೋಜಿಸಿರುವ ಸಿಎಫ್‌ಎನಲ್ಲಿ ಸತತ ಮೂರು ಬಾರಿ ಉತ್ತಮ ಪೋಷಕ ನಟಿ ಹಾಗೂ ವರ್ಸಟೈಲ್ ಆ್ಯಕ್ಟರ್ ಪ್ರಶಸ್ತಿ ಪಡೆದಿರುವ ರೂಪಶ್ರೀ ವರ್ಕಾಡಿ ಅಭಿನಯದ ಬಯಾರಿ ಸ್ವರ್ಣ ಕಮಲ ಪ್ರಶಸ್ತಿ ಪಡೆದಿದ್ದರೆ, ಜೀಟಿಗೆ ರಾಷ್ಟ್ರೀಯ ಪ್ರಶಸ್ತಿ ಹಾಗೂ ಟ್ರಿಪಲ್ ತಲಾಖ್ ಚಿತ್ರ ರಾಜ್ಯ ಪ್ರಶಸ್ತಿಯನ್ನು ಪಡೆದಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಗಾಡಿ ಗ್ರಾಮದ ಹರೀಶ್ ಹಾಗೂ ದಿ. ಹೇಮಾವತಿ ದಂಪತಿ ಪುತ್ರಿಯಾಗಿರುವ ರೂಪಶ್ರೀಯವರು ತುಳು, ಕನ್ನಡ, ಕೊಂಕಣಿ, ಬ್ಯಾರಿ, ಅರೆಭಾಷೆ ಸೇರಿದಂತೆ 85ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದ್ದಾರೆ.
ದೊಡ್ಡ ಕನಸು ನನಸಾಗಿದೆ
ಬಾಲ ನಟನಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆಯುವ ಅವಕಾಶ ಕಳೆದುಕೊಂಡಿದ್ದೇನೆ ಎಂದು ತೀರ್ಮಾನಿಸುವಷ್ಟರಲ್ಲಿಯೇ ಮಿಥ್ಯ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ದೊರಕುವ ಮೂಲಕ ಜೀವನದ ದೊಡ್ಡ ಕನಸು ನನಸಾಗಿದೆ ಎಂದು ಅತೀಶ್ ಸಂತಸ ಹಂಚಿಕೊಂಡರು.
ರಕ್ಷಿತ್ ಶೆಟ್ಟಿಯ ಪ್ರೋತ್ಸಾಹದಿಂದ ಚಿತ್ರ ನಿರ್ದೇಶಕನಾದೆ
‘2008-09ನೇ ಸಾಲಿನಲ್ಲಿ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ನಾನು ಹಾಗೂ ರಕ್ಷಿತ್ ಶೆಟ್ಟಿ ಜೊತೆಯಾಗಿ ಹಲವು ಡಾಕ್ಯುಮೆಂಟರಿಗಳನ್ನು ನಿರ್ಮಾಣ ಮಾಡಿದ್ದೆವು. ಬಳಿಕ ರಕ್ಷಿತ್ ಶೆಟ್ಟಿ ದೊಡ್ಡ ನಟರಾದರು. ಆದರೆ, ಆತ ನನ್ನನ್ನು ಸಿನೆಮಾ ಜಗತ್ತಿನಲ್ಲಿ ನಿನ್ನಂತಹ ಪ್ರತಿಭೆಗಳು ಸಿನೆಮಾ ಕ್ಷೇತ್ರಕ್ಕೆ ಅಗತ್ಯವಿದೆ ಎಂದು ಕರೆದಾಗ 2020-21ನೇ ಸಾಲಿಗೆ ಸಿನೆಮಾ ರಂಗ ಪ್ರವೇಶಿಸಿದೆ. ಆ ಸಂದರ್ಭದಲ್ಲಿ ನನ್ನ ತಲೆಗೆ ಬಂದ ಮಿಥ್ಯದ ಕಥೆಯೊಂದನ್ನು ಆತನ ಬಳಿ ತೆರೆದಿಟ್ಟಾಗ ಆತ ನಿರ್ಮಾಣದ ಹೊಣೆಯೊಂದಿಗೆ ಪ್ರೋತ್ಸಾಹಿಸಿದ. ರಿಟರ್ನ್ಸ್ ಬಗ್ಗೆ ನೋಡುವುದು ಬೇಡ, ನೀನು ಮುಂದುವರಿ ಎಂದು ಹೇಳಿದ್ದ. ಹಾಗೆ ತಯಾರಾದ ಚಿತ್ರಕ್ಕೆ ಮೂರು ರಾಷ್ಟ್ರೀಯ ಪ್ರಶಸ್ತಿ ದೊರಕುವ ಯಾವುದೇ ಆಲೋಚನೆ ಇರಲಿಲ್ಲ’ ಎಂದು ಮಿಥ್ಯ ಚಿತ್ರದ ನಿರ್ದೇಶಕ ಸುಮಂತ್ ಭಟ್ ಅನಿಸಿಕೆ ಹಂಚಿಕೊಂಡರು.