Mangaluru | ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
ತನ್ಸಿಫ್ | ರಾಝಿಕ್
ಮಂಗಳೂರು, ಜೂನ್ 9: ಸುಮಾರು ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ವಾರೆಂಟ್ ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನರಿಂಗಾನ ಗ್ರಾಮದ ತೌಡಗೋಳಿ ಕ್ರಾಸ್ ನಿವಾಸಿ ಅಬ್ದುಲ್ ಖಾದರ್ ತನ್ಸಿಪ್ ಯಾನೆ ತಂಜಿ ಹಾಗೂ ಅಡ್ಯಾರ್ ಕಣ್ಣೂರಿನ ಕುಂಡಾಲ ನಿವಾಸಿ ಮೊಹಮ್ಮದ್ ರಾಝಿಕ್ ಎಂದು ಗುರುತಿಸಲಾಗಿದೆ.
ಅಬ್ದುಲ್ ಖಾದರ್ ತನ್ಸಿಪ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ 2021ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಸುಮಾರು ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣ ನ್ಯಾಯಾಲಯವು ವಾರೆಂಟ್ ಜಾರಿಗೊಳಿಸಿತ್ತು. ಈತನ ವಿರುದ್ಧ ಕೊಣಾಜೆ ಹಾಗೂ ಮಂಜೇಶ್ವರ ಠಾಣೆಗಳಲ್ಲಿಯೂ ಪ್ರಕರಣಗಳು ದಾಖಲಾಗಿವೆ.
ಮೊಹಮ್ಮದ್ ರಾಝಿಕ್ ವಿರುದ್ಧವೂ ಬರ್ಕೆ ಪೊಲೀಸ್ ಠಾಣೆಯಲ್ಲಿ 2021ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣ ವಾರೆಂಟ್ ಹೊರಡಿಸಲಾಗಿತ್ತು. ಈತನ ವಿರುದ್ಧ ಕಂಕನಾಡಿ, ಬೆಳ್ತಂಗಡಿ, ಪುತ್ತೂರು ಹಾಗೂ ಕದ್ರಿ ಠಾಣೆಗಳಲ್ಲಿಯೂ ಪ್ರಕರಣಗಳು ದಾಖಲಾಗಿವೆ.
ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪತ್ತೆಹಚ್ಚಿ ಬಂಧಿಸಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.