ಮಂಗಳೂರು ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನದಲ್ಲಿ ಸಾರ್ವಜನಿಕರ ಸರತಿ ಸಾಲು!
ಸಂಧ್ಯಾ ಸುರಕ್ಷಾ, ಒಳಚರಂಡಿಗಳದ್ದೇ ಸಮಸ್ಯೆ
ಮಂಗಳೂರು, ಸೆ.26: ಮಂಗಳೂರು ತಾಲೂಕಿನ ಮಂಗಳೂರು ಎ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆ ನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದು, ಸಮಸ್ಯೆಗಳ ಅರ್ಜಿಗಳೊಂದಿಗೆ ನೂರಾರು ಸಾರ್ವಜನಿಕರು ಆಗಮಿಸಿದ್ದರು. ವಿವಿಧ ಸಮಸ್ಯೆಗಳ ಜತೆಗೆ ಬಹು ಮುಖ್ಯವಾಗಿ ಸಂಧ್ಯಾ ಸುರಕ್ಷಾ ಯೋಜನೆ ಸ್ಥಗಿತ, ಒಳಚರಂಡಿ ಸಮಸ್ಯೆಗಳ ಅಹವಾಲುಗಳೇ ಸಲ್ಲಿಕೆಯಾಗಿವೆ.
ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪಾಲಿಕೆ ಆಯುಕ್ತ ರಾಹುಲ್ ರತ್ನ ಪಾಂಡೆ, ಸಹಾಯಕ ಆಯುಕ್ತ ಮೀನಾಕ್ಷಿ ಆರ್ಯ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಬಜಾಲ್ನ ಮಹಿಳೆಯೊಬ್ಬರು ತನಗೆ ಆರು ತಿಂಗಳಿನಿಂದ ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಬಂದಿಲ್ಲ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಕಾಮತ್, ಈ ರಾಜ್ಯ ಸರಕಾರ ಬಂದ ಮೇಲೆ ಎಪಿಎಲ್ ನವರಿಗೆ ಈ ಪಿಂಚಣಿ ತಡೆ ಹಿಡಿದಿದೆ. ಇದರಲ್ಲಿ ಶಾಸಕನಾಗಿ ತಾನು ಏನೂ ಮಾಡುವ ಹಾಗಿಲ್ಲ. ಹಾಗಿದ್ದರೂ ಈ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ಹೇಳಿದರು.
ಕಸಬಾ ಬೆಂಗ್ರೆಯಲ್ಲಿ ಮಹಿಳಾ ಸಂಘದ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸುವ ಮನವಿಗೆ, ಶಾಸಕರ ನಿಧಿಯಿಂದ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಒಳಚರಂಡಿ ಕಲ್ಪಿಸುವಂತೆ ಹಾಗೂ ಡೋರ್ ನಂಬರ್ ಕುರಿತಂತೆ ವ್ಯಕ್ತವಾದ ಸಮಸ್ಯೆಗಳ ಬಗ್ಗೆ ಶಾಸಕ ವೇದವ್ಯಾಸ ಕಾಮತ್, ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚನೆ ನೀಡಿದರು.
ಪ್ರಜಾಸೇವೆ ಆಂದೋಲನ ಸಭೆಯ ಆರಂಭದಲ್ಲಿ ಮಾತನಾಡಿದ ಶಾಸಕ ಕಾಮತ್, ತೀರಾ ಕಷ್ಟದಲ್ಲಿರುವ ಬಡವರು ಸಮಸ್ಯೆಗಳೊಂದಿಗೆ ಪ್ರಜಾಸೇವೆಯಲ್ಲಿ ಭಾಗವಹಿಸುತ್ತಾರೆ. ಅವರಿಗೆ ಮಾನವೀಯತೆಯ ದೃಷ್ಟಿಯಿಂದ ತಮ್ಮ ಜವಾಬ್ಧಾರಿ ನಿರ್ವಹಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಭೂಪರಿವರ್ತನೆ- ಏಕ ನಿವೇಶನ ತೊಂದರೆ ನಿವಾರಿಸಲು ಮನವಿ
ಮಂಗಳೂರಿನಲ್ಲಿ ಭೂ ಪರಿವರ್ತನೆ ಮತ್ತು ಏಕ ನಿವೇಶನಕ್ಕೆ ತೊಂದರೆಯಾಗುತ್ತಿದ್ದು, ಸುಮಾರು ಮೂರು ತಿಂಗಳಿಗೂ ಅಧಿಕ ಕಾಲ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಹನುಮಂತ ಕಾಮತ್ ಆಕ್ಷೇಪಿಸಿದರು.
ಈ ಬಗ್ಗೆ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಹಿಂದೆ ಭೂ ಪರಿವರ್ತನೆ ಮಾಡಿಸಲು ದಾಖಲಾತಿಗಳ ಸಹಿತ ಸಾವಿರ ರೂ. ಅರ್ಜಿ ಶುಲ್ಕದೊಂದಿಗೆ ತಾಲೂಕು ಕಚೇರಿಯ ಭೂ ಪರಿವರ್ತನಾ ಕಚೇರಿಗೆ ಅರ್ಜಿ ಸಲ್ಲಿಸಿದ ನಂತರ ಸರ್ವೇಯರನ್ನು ನಾವು ನಮ್ಮ ಜಮೀನಿಗೆ ಕರೆದುಕೊಂಡು ಹೋಗಿ ಅಳತೆ ಮಾಡಿಸಿ ಭೂ ಪರಿವರ್ತನೆಗೆ ಅಪೇಕ್ಷಿತ ನಕ್ಷೆ ಎಂದು ಪಡೆದುಕೊಂಡು ಅರ್ಜಿ ಸಲ್ಲಿಸಿದರೆ ಭೂ ಪರಿವರ್ತನಾ ಆದೇಶ ಸಿಗುತ್ತಿತ್ತು. ಇದೇ ರೀತಿ ಏಕ ನಿವೇಶನಕ್ಕೆ ಅಪೇಕ್ಷಿತ ನಕ್ಷೆ ಎಂದು ಪಡಕೊಂಡು ದಾಖಲೆಗಳೊಂದಿಗೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಮುಡಾದ ಸರ್ವೆಯರನ್ನು ನಮ್ಮ ಜಮೀನಿಗೆ ಕರೆದುಕೊಂಡು ಹೋಗಿ ಅಳತೆ ಮಾಡಿಸಿ ಏಕ ನಿವೇಶನ ಪಡೆದುಕೊಳ್ಳಲು ಸಾಧ್ಯವಾಗುತ್ತಿತ್ತು. ಇದೀಗ ಕರ್ನಾಟಕ ಸರಕಾರವು ಪ್ರಾಪಟಿ ಕಾರ್ಡ್ ರದ್ದು ಪಡಿಸಿ ಪಡಿಸಿರುವುದರಿಂದ ಸಮಸ್ಯೆಯ ಜತೆಗೆ ವಿಳಂಬವಾಗುತ್ತಿದ್ದು, ಮೊದಲಿನಂತೆ ವ್ಯವಸ್ಥೆ ಮಾಡಬೇಕು. ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಕಂದಾಯ ಸಚಿವರನ್ನು ನಾನು ಈಗಾಗಲೇ ಅಧಿವೇಶನದಲ್ಲಿಯೂ ಹಲವು ಬಾರಿ ಮನವಿ ಮಾಡಿದ್ದು, ಇದೊಂದು ಗಂಭೀರ ಸಮಸ್ಯೆಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ನುಡಿದರು.