ಮೊಸರುಕುಡಿಕೆ ಹಿನ್ನೆಲೆ: ಸೆ.5ರಂದು ಮಂಗಳೂರಿನ ಹಲವೆಡೆ ಸಂಚಾರ ಬದಲಾವಣೆ
ಪರ್ಯಾಯ ಮಾರ್ಗ ಬಳಕೆಗೆ ಪೊಲೀಸ್ ಸೂಚನೆ
ಮಂಗಳೂರು, ಸೆ.4: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆ.5ರಂದು ಮಂಗಳೂರು ನಗರದ ವಿವಿಧೆಡೆ ಮೊಸರುಕುಡಿಕೆ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ವಾಹನ ಸಂಚಾರ ದಟ್ಟಣೆಯಾಗುವ ಸ್ಥಳಗಳು ಹಾಗೂ ಪರ್ಯಾಯ ಮಾರ್ಗಗಳ ವಿವರ:
1. ತೊಕ್ಕೊಟ್ಟು ಒಳಪೇಟೆ ಮೊಸರುಕುಡಿಕೆ:
ರಾಷ್ಟ್ರೀಯ ಹೆದ್ದಾರಿ-66ರಲ್ಲಿ ತೊಕ್ಕೊಟ್ಟು ಜಂಕ್ಷನ್ ನಿಂದ ಕೊಲ್ಯ ಜಂಕ್ಷನ್ ವರೆಗೆ ಹಾಗೂ ಉಳ್ಳಾಲ ಅಬ್ಬಕ್ಕ ವೃತ್ತ/ಒಳಪೇಟೆ ಕಡೆಗೆ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.
ಪರ್ಯಾಯ ಮಾರ್ಗ:
👉 ತೊಕ್ಕೊಟ್ಟು ಜಂಕ್ಷನ್ ಮೂಲಕ ತಲಪಾಡಿ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು ಜಂಕ್ಷನ್ ನಲ್ಲಿ ಸರ್ವಿಸ್ ರಸ್ತೆಗೆ ಎಡಕ್ಕೆ ತಿರುಗಿ, ದೇರಳಕಟ್ಟೆ ಜಂಕ್ಷನ್ ನಲ್ಲಿ ಬಲಕ್ಕೆ ತಿರುಗಿ, ಮಡ್ಯಾರ್–ಮಾಡೂರು–ಬೀರಿಕೋಟೆಕಾರ್ ಜಂಕ್ಷನ್ ಮೂಲಕ ಸಂಚರಿಸಬಹುದಾಗಿದೆ.
👉 ತೊಕ್ಕೊಟ್ಟು ಜಂಕ್ಷನ್ ನಿಂದ ಉಳ್ಳಾಲ ಅಬ್ಬಕ್ಕ ವೃತ್ತ ಹಾಗೂ ತೊಕ್ಕೊಟ್ಟು ಒಳಪೇಟೆ ಕಡೆಗೆ ಸಂಚರಿಸುವ ವಾಹನಗಳು ಬೀರಿಕೋಟೆಕಾರ್–ಸೋಮೇಶ್ವರ ಮಾರ್ಗವಾಗಿ ಸಂಚರಿಸಬಹುದಾಗಿದೆ.
2. ಕದ್ರಿ ಶ್ರೀ ಗೋಪಾಲಕೃಷ್ಣ ಮಠ, ಕದ್ರಿ ಕಂಬಳ ಮೊಸರುಕುಡಿಕೆ:
ಬಟ್ಟಗುಡ್ಡೆ ಜಂಕ್ಷನ್ ನಿಂದ ಕದ್ರಿ ಕಂಬಳ–ಭಾರತ್ ಬೀಡಿ ವರೆಗೆ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.
ಪರ್ಯಾಯ ಮಾರ್ಗ:
👉 ಬಟ್ಟಗುಡ್ಡೆ ಕಡೆಯಿಂದ ಕದ್ರಿ ಕಂಬಳ ಕಡೆಗೆ ಸಂಚರಿಸುವ ವಾಹನಗಳು ಬಿಜೈ ಜಂಕ್ಷನ್–ಪಿಂಟೋ ಬೇಕರಿ–ಕರಂಗಲಪಾಡಿ ಮಾರ್ಗವಾಗಿ ಸಂಚರಿಸಬಹುದಾಗಿದೆ.
👉 ಭಾರತ್ ಬೀಡಿ ಕಡೆಯಿಂದ ಬಟ್ಟಗುಡ್ಡೆ ಕಡೆಗೆ ಸಂಚರಿಸುವ ವಾಹನಗಳು ಮಲ್ಲಿಕಟ್ಟೆ–ನಂತೂರು ಮಾರ್ಗವಾಗಿ ಸಂಚರಿಸಬಹುದಾಗಿದೆ.
3. ಶ್ರೀ ಅರಸು ಮುಂಡತ್ತಾಯ ಮೈದಾನ, ಅತ್ತಾವರ ಮೊಸರುಕುಡಿಕೆ:
ಕೋಟಿಚೆನ್ನಯ ವೃತ್ತದಿಂದ ಬಾಬುಗುಡ್ಡೆ–ಅತ್ತಾವರ ಕೆ.ಎಂ.ಸಿ. ರಸ್ತೆ–ಆನಂದ ಶೆಟ್ಟಿ ವೃತ್ತದವರೆಗೆ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.
ಪರ್ಯಾಯ ಮಾರ್ಗ:
👉 ಕೋಟಿಚೆನ್ನಯ ವೃತ್ತದ ಕಡೆಯಿಂದ ಅತ್ತಾವರ ಕಡೆಗೆ ಸಂಚರಿಸುವ ವಾಹನಗಳು ವೆಲೆನ್ಸಿಯಾ ಮಾರ್ಗವಾಗಿ ಸಂಚರಿಸಬಹುದಾಗಿದೆ.
👉 ಅತ್ತಾವರ ಕಡೆಯಿಂದ ಕೋಟಿಚೆನ್ನಯ ವೃತ್ತದ ಕಡೆಗೆ ಸಂಚರಿಸುವ ವಾಹನಗಳು ಅತ್ತಾವರ ಆನಂದ ಶೆಟ್ಟಿ ವೃತ್ತದಲ್ಲಿ ಎಡಕ್ಕೆ ತಿರುಗಿ, ಎಸ್.ಎಲ್. ಮಥಾಯಸ್ ರಸ್ತೆ–ಹೈಲ್ಯಾಂಡ್ ಜಂಕ್ಷನ್ ಮೂಲಕ ಸಂಚರಿಸಬಹುದಾಗಿದೆ.
4. ಶ್ರೀ ಕೃಷ್ಣ ಜ್ಞಾನೋದಯ ಭಜನಾ ಮಂದಿರ, ಕೊಟ್ಟಾರ ಮೊಸರುಕುಡಿಕೆ:
ಕೊಟ್ಟಾರ ಚೌಕಿಯಿಂದ ಉರ್ವಸ್ಟೋರ್ ಜಂಕ್ಷನ್ ವರೆಗೆ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.
ಪರ್ಯಾಯ ಮಾರ್ಗ:
👉 ಲಾಲ್ ಬಾಗ್ /ನಾರಾಯಣಗುರು ವೃತ್ತದಿಂದ ಕೊಟ್ಟಾರ ಚೌಕಿ ಕಡೆಗೆ ಸಂಚರಿಸುವ ವಾಹನಗಳು ಕೆ.ಎಸ್.ಆರ್.ಟಿ.ಸಿ.–ಕುಂಟಿಕಾನ ಮಾರ್ಗವಾಗಿ ಸಂಚರಿಸಬಹುದಾಗಿದೆ.
👉 ಕೊಟ್ಟಾರ ಚೌಕಿ ಕಡೆಯಿಂದ ಲಾಲ್ ಬಾಗ್ ಕಡೆಗೆ ಸಂಚರಿಸುವ ಲಘು ವಾಹನಗಳು ಕುಂಟಿಕಾನ–ಬಿಜೈ–ಕೆ.ಎಸ್.ಆರ್.ಟಿ.ಸಿ. ಮಾರ್ಗವಾಗಿ ಸಂಚರಿಸಬಹುದಾಗಿದೆ.
👉 ಕೊಟ್ಟಾರ ಚೌಕಿ ಕಡೆಯಿಂದ ಲಾಲ್ ಬಾಗ್ ಕಡೆಗೆ ಸಂಚರಿಸುವ ಘನ ವಾಹನಗಳು ಕುಂಟಿಕಾನ–ಕೆ.ಪಿ.ಟಿ. ವೃತ್ತ ಮಾರ್ಗವಾಗಿ ಸಂಚರಿಸಬಹುದಾಗಿದೆ.
ಪೊಲೀಸರೊಂದಿಗೆ ಸಹಕರಿಸಲು ಮನವಿ
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯಲಿರುವ ಮೊಸರುಕುಡಿಕೆ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳಿಂದ ನಗರದ ವಿವಿಧ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸಬೇಕು. ಕಾರ್ಯಕ್ರಮದ ಸ್ಥಳಗಳಲ್ಲಿ ಹಾಗೂ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸದೆ, ಸಂಚಾರ ನಿಯಂತ್ರಣದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.