ʼವಾರ್ತಾಭಾರತಿʼಯ ವರದಿಗಾರ ಇಸ್ಮಾಯಿಲ್ ಕಂಡಕರೆಗೆ ಪ.ಗೋ. ಪ್ರಶಸ್ತಿ

Update: 2024-05-04 13:29 GMT

ಇಸ್ಮಾಯಿಲ್ ಕಂಡಕರೆ

ಮಂಗಳೂರು, ಮೇ 4: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ ಪ.ಗೋ. ಪ್ರಶಸ್ತಿಗೆ ʼವಾರ್ತಾಭಾರತಿʼ  ಕೊಡಗು ಜಿಲ್ಲೆಯ ವಿಶೇಷ ವರದಿಗಾರ ಕೆ.ಎಂ. ಇಸ್ಮಾಯಿಲ್ ಕಂಡಕರೆ ಆಯ್ಕೆಯಾಗಿದ್ದಾರೆ.

2023ರ ಎ.6ರಂದು ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಪ್ರಕಟವಾದ ‘ರಸ್ತೆ ಕೊಡಿ ಇಲ್ಲದಿದ್ದರೆ ಸಾವಿಗೆ ದಾರಿ ಮಾಡಿಕೊಡಿ’ ಎಂಬ ವರದಿಯು ಈ ಪ್ರಶಸ್ತಿಗೆ ಆಯ್ಕೆಯಾಗಿದೆ.

ಹಿರಿಯ ಪತ್ರಕರ್ತ ಕೇಶವ ಕುಂದರ್, ಪತ್ರಿಕೋದ್ಯಮ ಉಪನ್ಯಾಸಕ ಗುರುಪ್ರಸಾದ್ ಟಿ.ಎನ್. ಆಯ್ಕೆ ಸಮಿತಿಯಲ್ಲಿದ್ದರು. ಪ್ರಶಸ್ತಿಯು 10,001 ರೂ. ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿವೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಇನ್ ಜರ್ನಲಿಸಮ್‌ನಲ್ಲಿ ಸರ್ಟಿಫಿಕೆಟ್ ಕೋರ್ಸ್ ಪಡೆದಿರುವ ಇಸ್ಮಾಯಿಲ್ ಈ ಹಿಂದೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಮತ್ತು ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಯನ್ನೂ ಗಳಿಸಿದ್ದರು. 2021ರಲ್ಲಿ ಇಸ್ಮಾಯಿಲ್ ಅವರ ಚೊಚ್ಚಲ ಕೃತಿ ‘ಮರಿಯಮ್’ ಪ್ರಕಟಗೊಂಡಿತ್ತು.

ಫುಟ್ಬಾಲ್ ಕ್ರೀಡಾಪಟು ಮತ್ತು ತರಬೇತುದಾರರಾಗಿರುವ ಇವರು ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮೇ 9ರಂದು ಪೂ.11ಕ್ಕೆ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಲಿದೆ. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅತಿಥಿಯಾಗಿ ಭಾಗವಹಿಸುವರು. ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News