ಎಸ್‌ಇಪಿ ಸುತ್ತೋಲೆ ವಾಪಸ್‌ಗೆ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪೂರ್ ಆಗ್ರಹ

Update: 2024-05-10 15:43 GMT

ಮಂಗಳೂರು, ಮೇ 10: ರಾಜ್ಯದಲ್ಲಿ ಪದವಿ ಶಿಕ್ಷಣದ ಅವಧಿಯನ್ನು 4 ವರ್ಷ ಬದಲು 3 ವರ್ಷಕ್ಕೆ ಸೀಮಿತಗೊಳಿಸಿ ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ವಾಪಸ್ ಪಡೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪೂರ್ ಆಗ್ರಹಿಸಿದ್ದಾರೆ.

ಪೀಪಲ್ಸ್ ಫಾರಂ ಫಾರ್ ಕರ್ನಾಟಕ ಎಜುಕೇಶನ್ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಜಿಪಿ ಮಾಜಿ ಅಧ್ಯಕ್ಷ ಸುಖದೇವ್ ಥೋರಟ್ ಸಮಿತಿ ಎಸ್‌ಇಪಿ ಜಾರಿ ಕುರಿತಂತೆ ಕೇವಲ ಮಧ್ಯಂತರ ವರದಿಯನ್ನಷ್ಟೇ ರಾಜ್ಯ ಸರಕಾರಕ್ಕೆ ಸಲ್ಲಿಸಿದೆ. ಆ ವರದಿಯಲ್ಲಿ ಏನು ಶಿಫಾರಸು ಮಾಡಲಾಗಿದೆ ಎಂಬುದನ್ನು ಬಹಿರಂಗ ಪಡಿಸಿಲ್ಲ. ವರದಿಯಲ್ಲಿರುವ ವಿಚಾರಗಳ ಬಗ್ಗೆ ಚರ್ಚೆಯೂ ಆಗಿಲ್ಲ. ಮಧ್ಯಂತರ ವರದಿಯನ್ನು ಮುಂದಿಟ್ಟುಕೊಂಡು ಏಕಾಏಕಿ ಪದವಿ ಶಿಕ್ಷಣದ ಅವಧಿಯನ್ನು 4ರಿಂದ 3 ವರ್ಷಕ್ಕೆ ಇಳಿಸಲು ಮುಂದಾಗಿರುವುದು ಖಂಡನೀಯ ಎಂದರು.

ನಾಲ್ಕು ವರ್ಷ ಪದವಿ ಪೂರೈಸಿದವರು ನೇರ ನೀಟ್ ಪರೀಕ್ಷೆಗೆ ಬರೆಯಬಹುದು. ಉನ್ನತ ಪದವಿ ಪಡೆದವರು ನೇರವಾಗಿ ಪಿಎಚ್‌ಡಿ ಪ್ರವೇಶ ಮಾಡಬಹುದು ಎಂದು ಯುಜಿಸಿ ಆದೇಶಿಸಿದೆ. ಹಾಗಾಗಿ ಈಗ ಮೂರು ವರ್ಷದ ಪದವಿ ಮಾಡಿದರೆ ಮಕ್ಕಳಿಗೆ ಸಮಸ್ಯೆ ಆಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪೀಪಲ್ಸ್ ಫಾರಂ ಫಾರ್ ಕರ್ನಾಟಕ ಎಜುಕೇಶನ್ ಸಂಚಾಲಕ ಪ್ರೊ.ರಾಜಶೇಖರ್ ಹೆಬ್ಬಾರ್, ಕಾರ್ಯದರ್ಶಿ ರಮೇಶ್ ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News