ಮಂಗಳೂರು, ನ.20: ರಾಜ್ಯ ಸರಕಾರದ ಸೂಚನೆಯ ಮೇರೆಗೆ ನ.25 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಾನವೀಯತೆಯ ಒಂದು ಹನಿ, ರಕ್ತ ನೀಡಿ ಜೀವ ಉಳಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ ಎಂದರು.

ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ರಕ್ತದಾನದಿಂದ ನಾಲ್ಕು ಮಂದಿಯ ಜೀವ ಉಳಿಸಬಹುದು. 18 ರಿಂದ 60 ವರ್ಷದೊಳಗಿನ 47 ಕೆ.ಜಿ.ಗಿಂತ ಅಧಿಕ ತೂಕ ಹೊಂದಿದ ಆರೋಗ್ಯವಂತ ವ್ಯಕ್ತಿಗಳು ವೈದ್ಯಕೀಯ ಅರ್ಹತೆಗೆ ಅನುಗುಣವಾಗಿ ರಕ್ತದಾನ ಮಾಡಬಹುದು ಎಂದು ವಿವರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ರಕ್ತನಿಧಿ ಕೇಂದ್ರಗಳ ವ್ಯಾಪ್ತಿ ರಕ್ತದಾನ ನಡೆಯಲಿದೆ. ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದಲ್ಲಿಯೂ ಶಿಬಿರ ನಡೆಯಲಿದೆ. ಹೋಬಳಿ ಮಟ್ಟದಲ್ಲೂ ಆಯೋಜಿಸುವ ಯೋಜನೆ ರೂಪಿಸುತ್ತಿದ್ದೇವೆ. ಈ ಬಗ್ಗೆ ರಕ್ತನಿಧಿ ಪ್ರತಿನಿಧಿಗಳ ಸಭೆ ಕರೆದು ಸಮಾಲೋಚನೆ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಮಾಸಿಕ 5800 ಯೂನಿಟ್ ರಕ್ತದ ಬೇಡಿಕೆ ಇದ್ದು ನಿರಂತರವಾಗಿ ರಕ್ತದಾನ ಶಿಬಿರಗಳು ನಡೆಯುತ್ತಿದೆ ಎಂದು ವಿವರಿಸಿದರು.

ನ.25 ರಂದು ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ನಡೆಯುವ ರಕ್ತದಾನ ಶಿಬಿರದಲ್ಲಿ 2000 ಯೂನಿಟ್ ರಕ್ತ ಸಂಗ್ರಹದ ಗುರಿ ಇರಿಸಲಾಗಿದೆ. 2025-26ರಲ್ಲಿ ಜಿಲ್ಲೆಯಲ್ಲಿ 70,224 ಯೂನಿಟ್ ರಕ್ತ ಸಂಗ್ರಹದ ಗುರಿಯಲ್ಲಿ 724 ಕ್ಯಾಂಪ್ ಮೂಲಕ 72,873 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. 2026-27ರಲ್ಲಿ ಅಕ್ಟೋಬರ್‌ವರೆಗೆ 40,964 ಯೂನಿಟ್ ಗುರಿಯಲ್ಲಿ 447 ಕ್ಯಾಂಪ್ ಆಯೋಜಿಸುವ ಮೂಲಕ 46,819 ಯೂನಿಟ್ ರಕ್ತ ಸಂಗ್ರಹ ಮಾಡಲಾಗಿದೆ ಎಂದರು.

ಗೋಷ್ಠಿಯಲ್ಲಿ ವೆನ್‌ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಡಾ. ಶಿವಪ್ರಕಾಶ್, ಡಾ. ರಾಜೇಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor