ಶಾಂತಿ ಕದಡುವ ಪೋಸ್ಟ್ ಹಾಕುವುದರಿಂದ ಪ್ರಗತಿ ಅಸಾಧ್ಯ: ಶರಣ್ ಪಂಪ್‌ವೆಲ್ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ಸೆ.2: ಸಾಮಾಜಿಕ ಜಾಲತಾಣಗಳಲ್ಲಿ ಸೌಹಾರ್ದ ಕದಡುವ ಮತ್ತು ಅಶಾಂತಿ ಮೂಡಿಸುವಂತಹ ಪೋಸ್ಟ್ ಹಾಕುವುದರಿಂದ ಸಮಾಜದಲ್ಲಿ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ರಾಜ್ಯ ಹೈಕೋರ್ಟ್ ಶರಣ್ ಪಂಪ್‌ವೆಲ್ ಸಲ್ಲಿಸಿದ ಅರ್ಜಿ ತೀರ್ಪು ಕಾಯ್ದಿರಿಸಿದೆ.
ರಸ್ತೆಯಲ್ಲಿ ನಮಾಝ್ ಮಾಡಿದ ಘಟನೆಗೆ ಸಂಬಂಧಿಸಿದಂತೆ 24 ಗಂಟೆಯಲ್ಲೇ ಬಿ ರಿಪೋರ್ಟ್ ಹಾಕಿದ ಪೊಲೀಸರ ಕ್ರಮ ಪ್ರಶ್ನಿಸಿ ಹಿಂದುತ್ವ ಸಂಘಟನೆಯ ಶರಣ್ ಪಂಪ್‌ವೆಲ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿದ್ದ. ಆ ಹಿನ್ನಲೆಯಲ್ಲಿ ವಿವಿಧ ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸಿದ ಆರೋಪದಲ್ಲಿ ಮಂಗಳೂರು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನು ರದ್ದುಪಡಿಸಬೇಕು ಎಂದು ಶರಣ್ ಪಂಪ್‌ವೆಲ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀರ್ಪು ಕಾಯ್ದಿರಿಸಿದೆ.
ಶರಣ್ ಪಂಪ್‌ವೆಲ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ ರಸ್ತೆಯಲ್ಲಿ ನಮಾಝ್ ಮಾಡಿದ ಘಟನೆ ಬಗ್ಗೆ ಎಫ್‌ಐಆರ್ ದಾಖಲಿಸಿದ ಪೊಲೀಸರು ಆ ಪ್ರಕರಣ ಕುರಿತಂತೆ 24 ಗಂಟೆಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಅದನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ (ಫೇಸ್‌ಬಕ್) ಕಾಮೆಂಟ್ ಮಾಡಿ ಪೋಸ್ಟ್ ಹಾಕಿರುವುದಕ್ಕೆ ಶರಣ್ ಪಂಪ್‌ವೆಲ್ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿದ್ದರು. ದೂರಿನಲ್ಲಿ ಹೇಳಲಾಗಿರುವ ಅಪರಾಧದ ಅಂಶಗಳು ಶರಣ್ ಪಂಪ್‌ವೆಲ್‌ಗೆ ಅನ್ವಯಿಸುವುದಿಲ್ಲ ಎಂದರು.
ಇದಕ್ಕೆ ಪ್ರತಿವಾದ ಸಲ್ಲಿಸಿದ ರಾಜ್ಯ ಸರಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಅರ್ಜಿದಾರರು ಸಾಮಾಜಿಕ ಅಶಾಂತಿ ಮೂಡಿಸುವ ರೀತಿಯಲ್ಲಿ ಪೋಸ್ಟ್ ಹಾಕಿದ್ದಾರೆ. ಇದರಿಂದ ಕೋಮು ಸೌಹಾರ್ದ ಹಾಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದರು.
ಶರಣ್ ಪಂಪ್‌ವೆಲ್ ಪರ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ಇದೆಲ್ಲ ಏಕೆ ಮಾಡುತ್ತಾರೆ? ಸೌಹಾರ್ದತೆಯನ್ನು ಯಾಕೆ ಕದುಡುವುದು? ಅವರ ಮೇಲೆ; ಇವರ ಮೇಲೆ ಯಾಕೆ ಕಾಮೆಂಟ್ ಮಾಡಬೇಕು? ಇದರಿಂದ ಯಾವ ಪ್ರಗತಿ ಸಾಧ್ಯವಾಗುತ್ತದೆ? ಪಟ್ಟಭದ್ರ ಹಿತಾಸಕ್ತಿಯಿಂದ ಅಥವಾ ಮತ್ತೊಂದು ಗಳಿಸಲು ಹೀಗೆ ಮಾಡಲಾಗುತ್ತದೆ ಅಷ್ಟೇ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಯಾವುದೇ ಸಮುದಾಯವನ್ನು ಉದ್ದೇಶಿಸಿ ಹೇಳುತ್ತಿಲ್ಲ. ಅನಾದಿ ಕಾಲದಿಂದ ಜನರು ತಮ್ಮದೇ ಆದ ಹಬ್ಬ-ಸಂಪ್ರದಾಯ ಆಚರಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಯಾಕೆ ಈಗ ಒಂದು ಸಮುದಾಯದ ಆಚರಣೆಯ ಬಗ್ಗೆ ಬೊಟ್ಟು ಮಾಡಿ ಹೇಳುವುದು? ಅರ್ಜಿದಾರರ ವಿರುದ್ಧ 20 ಕೇಸುಗಳು ದಾಖಲಾಗಿವೆ. ಯಾಕೆ ಇಷ್ಟು ಕೇಸ್‌ಗಳು ದಾಖಲಾಗಿವೆ ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದರಲ್ಲದೆ, ಅರ್ಜಿದಾರರ ವಿರುದ್ಧದ ತನಿಖೆಗೆ ತಡೆ ನೀಡಿ ಹೊರಡಿಸಲಾಗಿರುವ ಮಧ್ಯಂತರ ತಡೆಯಾಜ್ಞೆಯನ್ನು ತೀರ್ಪು ಪ್ರಕಟಿಸುವವರೆಗೆ ಮುಂದುವರಿಸಿದರು.