ರಾಶಿದ್ ನೂರಾನಿ ಕೆ.ಸಿ.ರೋಡ್ ಅವರಿಗೆ ಡಾಕ್ಟರೇಟ್ ಪದವಿ

Update: 2026-08-21 12:14 IST

ಮಂಗಳೂರು: ಕೇರಳದ ಪೂನೂರ್ ಜಾಮಿಅ ಮದೀನತುನ್ನೂರ್‌ನ ಹಳೆ ವಿದ್ಯಾರ್ಥಿ ಅಹ್ಮದ್ ರಾಶಿದ್ ನೂರಾನಿ ಅವರಿಗೆ ಸೈಕಾಲಜಿಯಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.

ಮಧ್ಯಪ್ರದೇಶದ ಅಮರ್‌ಕಂಟಕ್‌ನ ಇಂದಿರಾ ಗಾಂಧಿ ನ್ಯಾಷನಲ್ ಟ್ರೈಬಲ್ ಯೂನಿವರ್ಸಿಟಿ (IGNTU)ಯಲ್ಲಿ ‘ಎಪಿಸ್ಟೆಮಿಕ್ ಕಾಗ್ನಿಷನ್ ಇಂಟರ್ವೆನ್ಶನ್‌ನ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಸಾಮರ್ಥ್ಯದ ಮೇಲಿನ ಅದರ ಪರಿಣಾಮ’ ಎಂಬ ವಿಷಯದಲ್ಲಿ ಅವರು ಸಂಶೋಧನೆ ನಡೆಸಿದ್ದರು. ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಲಲಿತ್ ಕುಮಾರ್ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ನಡೆಸಿದ ಈ ಸಂಶೋಧನೆಗೆ ‘ಡಾಕ್ಟರ್ ಆಫ್ ಫಿಲಾಸಫಿ’ (Ph.D.) ಪದವಿ ಪ್ರದಾನ ಮಾಡಲಾಗಿದೆ.

ಜಾಮಿಅ ಮದೀನತುನ್ನೂರ್‌ನಲ್ಲಿ ಏಳು ವರ್ಷಗಳ ಇಸ್ಲಾಮಿಕ್ ಶಿಕ್ಷಣ ಪೂರ್ಣಗೊಳಿಸಿ ‘ನೂರಾನಿ’ ಪದವಿ ಪಡೆದ ಬಳಿಕ ಅಹ್ಮದ್ ರಾಶಿದ್ ನೂರಾನಿ ಅವರು ಇದೇ ವಿಶ್ವವಿದ್ಯಾನಿಲಯದಲ್ಲಿ ‘ಅಪ್ಲೈಡ್ ಸೈಕಾಲಜಿ’ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಕಾಸರಗೋಡಿನ ಕುಣಿಯ ಕಾಲೇಜಿನಲ್ಲಿ ಸೈಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು, ಪ್ರಸ್ತುತ ತಮಿಳುನಾಡಿನ ಚೆನ್ನೈನ ಕ್ರೆಸೆಂಟ್ ಯೂನಿವರ್ಸಿಟಿಯ ಮನಃಶಾಸ್ತ್ರ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

UGC-NET ಹಾಗೂ ಮೌಲಾನಾ ಆಝಾದ್ ನ್ಯಾಷನಲ್ ಫೆಲೋಶಿಪ್ ಪಡೆದಿರುವ ಅವರು GATE ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 198ನೇ ರ‍್ಯಾಂಕ್ ಗಳಿಸಿದ್ದಾರೆ. ಹತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಡಾ. ರಾಶಿದ್ ನೂರಾನಿ, ವಿವಿಧ ಸಂಶೋಧನಾ ನಿಯತಕಾಲಿಕೆಗಳಲ್ಲಿ ಎಂಟು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

2022ರಲ್ಲಿ ಅಲಿಗಢ್ ಮುಸ್ಲಿಂ ವಿಶ್ವವಿದ್ಯಾನಿಲಯದ ಸೈಕಾಲಜಿ ವಿಭಾಗ ಆಯೋಜಿಸಿದ್ದ ‘ಮಾನಸಿಕ ಆರೋಗ್ಯ ಮತ್ತು ಕೋವಿಡ್-19’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ ಲಭಿಸಿತ್ತು.

ಕಾಸರಗೋಡು ವಿದ್ಯಾನಗರ ಸಮೀಪದ ಪಯೋಟ ನಿವಾಸಿ ಸಯ್ಯಿದ್ ಮುಹಮ್ಮದ್ (ಪಯೋಟ ತಂಙಳ್) ಹಾಗೂ ಆಯಿಷಾಬಿ ದಂಪತಿಯ ಕಿರಿಯ ಪುತ್ರನಾಗಿ 1996ರ ಜುಲೈನಲ್ಲಿ ಜನಿಸಿದ ರಾಶಿದ್ ನೂರಾನಿ, ಪ್ರಸ್ತುತ ಉಳ್ಳಾಲ ತಾಲೂಕಿನ ತಲಪಾಡಿ-ಕೆ.ಸಿ.ರೋಡ್‌ನಲ್ಲಿ ವಾಸಿಸುತ್ತಿದ್ದಾರೆ. ಕುಬನೂರು ಅಬ್ದುಸ್ಸಲಾಮ್ ದಾರಿಮಿಯ ಪುತ್ರಿ ಉಮ್ಮು ಹಬೀಬಾ ಅವರ ಪತ್ನಿಯಾಗಿದ್ದು, ಮುಹಮ್ಮದ್ ಶಂವೀಲ್ ಪುತ್ರನಾಗಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಅಹ್ಮದ್ ರಾಶಿದ್ ನೂರಾನಿ ಅವರನ್ನು ಜಾಮಿಅ ಮದೀನತುನ್ನೂರ್‌ನ ಸ್ಥಾಪಕ ಡಾ. ಅಬ್ದುಲ್ ಹಕೀಮ್ ಅಝ್‌ಹರಿ ಹಾಗೂ ಎಕ್ಸಿಕ್ಯೂಟಿವ್ ಕೌನ್ಸಿಲ್ ಅಭಿನಂದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News