‘ವೈಷ್ಣವ ಜನ ತೋ’ಗೆ ರಾಷ್ಟ್ರೀಯ ಪ್ರಾರ್ಥನೆಯ ಮಾನ್ಯತೆ ನೀಡಿ : ಸಂಜಯ್ ಹೆಗ್ಡೆ ಮನವಿ
ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮ
ಮಂಗಳೂರು : ಗಾಂಧೀ ಜಯಂತಿಯ ಈ ಸುಸಂದರ್ಭದಲ್ಲಿ ನಮ್ಮಲ್ಲಿ ಕಾನೂನಿನಿಂದ ರಕ್ಷಿಸಲ್ಪಟ್ಟ ರಾಷ್ಟ್ರಗೀತೆ ‘ಜನಗಣಮನ’ ಹಾಗೂ ಬಳಕೆಯಿಂದ ಗೌರವಿಸಲ್ಪಟ್ಟ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆ ಜತೆಗೆ ಭಾರತ ಸರಕಾರವು ‘ವೈಷ್ಣವ ಜನ ತೊ’ವನ್ನು ನಮ್ಮ ರಾಷ್ಟ್ರೀಯ ಪ್ರಾರ್ಥನೆಯಾಗಿ ಮಾನ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಸಂಜಯ್ ಹೆಗ್ಡೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಹೊಸತು ಪತ್ರಿಕೆ, ಎಂ.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ, ಮಂಗಳೂರು ಸಮದರ್ಶಿ ವೇದಿಕೆ ಹಾಗೂ ಮಂಗಳೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಹಂಪನಕಟ್ಟೆಯ ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಆಯೋಜಿಸಲಾದ ಬಿ.ವಿ. ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು.
‘ವಂದೇ ಮಾತರಂ- ವೈಷ್ಣವ ಜನತೋ’ ರಾಷ್ಟ್ರೀಯವಾದದ ಎರಡು ಯಾನ, ಎರಡು ಗಾನ ಎಂಬ ವಿಷಯದಲ್ಲಿ ಮಾತನಾಡುತ್ತಾ ವಕೀಲನ ಜವಾಬ್ಧಾರಿಯೊಂದಿಗೆ ಈ ಮೇಲಿನ ಪ್ರಸ್ತಾವ ಮುಂದಿಡುವುದಾಗಿ ಅವರು ಹೇಳಿದರು.
1950ರಲ್ಲಿ ವಂದೇ ಮಾತರಂಗೆ ಬಳಸಿದ ಸೌಮ್ಯ ವಿಧಾನವನ್ನು ಈ ರಾಷ್ಟ್ರ ಪ್ರಾರ್ಥನೆ ಹಾಡುವುದಕ್ಕಾಗಿ ಅನುಸರಿಸಬೇಕು. ಇದಕ್ಕಾಗಿ ಯಾವುದೇ ಆದೇಶ, ಡಂಡ, ಕಡ್ಡಾಯವಾಗಿ ಎದ್ದು ನಿಲ್ಲುವಂತದ್ದು ಬೇಡ. ಕೇವಲ ಮಾನ್ಯತೆ ದೊರಕಲಿ. ರಾಷ್ಟ್ರಗೀತೆ ಹಾಡುವಲ್ಲಿ ಈ ಹಾಡನ್ನು ಇಚ್ಚಿಸುವವರು ಹಾಡುವಂತಾಗಲಿ. ಶಾಲಾ ಮಕ್ಕಳು ಅದರ ಅರ್ಥವನ್ನು ಪ್ರತಿ ಭಾಷೆಯಲ್ಲಿ ಕಲಿಯಲಿ ಎಂಗು ಸಂಜಯ್ ಹೆಗ್ಡೆ ವೈಷ್ಣವ ಜನತೋ ಬಗ್ಗೆ ಪ್ರಸ್ತಾವವೊಂದನ್ನು ತೆರೆದಿಟ್ಟರು.
ವೈಷ್ಣವೋ ಜನ ತೋ ಹಾಡಿನ ಸಾಲುಗಳನ್ನು ಸಂವಿಧಾನದ ವಿಧಿಗಳೊಂದಿಗೆ ಹೋಲಿಕೆ ಮಾಡಿಕೊಂಡು ವಿಶ್ಲೇಷಿಸಿದ ಅವರು, ನಮ್ಮ ಸಂವಿಧಾನ ಭರವಸೆ ನೀಡುವ ಭಾತೃತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಎಲ್ಲರನ್ನೂ ಸಮಾನವಾಗಿ ಕಾಣುವುದು, ಜಾತ್ಯತೀತತೆ, ಮಹಿಳೆಯರ ಗೌರವ, ವೈಜ್ಞಾನಿಕ ಮನೋಭಾವ, ಮಾನವೀಯತೆ, ಪ್ರಶ್ನಿಸುವ ಅಧಿಕಾರವನ್ನು ನೀಡುವುದನ್ನು ಸಂವಿಧಾನ ರಚನೆಗೆ ಮೊದಲೇ ಈ ಹಾಡಿನಲ್ಲಿ ಉಲ್ಲೇಖಿಸಲಾಗಿದೆ ಎಂದವರು ವಿವರಿಸಿದರು.
ಬಲವಂತದ ಹಾಡು ಎಂಬುದೇ ಒಂದು ವಿರೋಧಾಭಾಸ, ಬಲವಂತದ ಪ್ರಾರ್ಥನೆ ಎಂದರೆ ಧರ್ಮ ನಿಂದನೆ ಎಂದು ಹೇಳಿದ ಅವರು, ಯಾರಾದರೂ ಇದು ವೈಷ್ಣವ ಗೀತೆ, ಇದರಲ್ಲಿ ರಾಮನ ಉಲ್ಲೇಖವಿದೆ ಎಂದು ಆಕ್ಷೇಪಿಸಿದರೆ ಆ ಮಾತನ್ನು ಒಪ್ಪಿಕೊಳ್ಳೋಣ. ನಮ್ಮ ಭಾರತದ ಇತಿಹಾಸದಲ್ಲಿ ಕ್ರೈಸ್ತರು, ಸಿಖ್ಖರು, ಮುಸ್ಲಿಮರು ಮತ್ತು ಧಾರ್ಮಿಕ ನಂಬಿಕೆಗಳ ಬಗ್ಗೆ ಅನುಮಾನ ಹೊಂದಿರುವವರೂ ಕೂಡಾ ಶತಮಾನಕ್ಕೂ ಹೆಚ್ಚು ಕಾಲ ಯಾವುದೇ ಆಕ್ಷೇಪವಿಲ್ಲದೆ ಹಾಡಿದ ಏಕೈಕ ದೇಶಭಕ್ತಿ ಗೀತೆ ಇದು ಎಂದು ಅವರು ಹೇಳಿದರು.
‘ಬಂಕಿಮರಿಗಿಂತ ಐದು ಶತಮಾನಗಳ ಹಿಂದೆ, ಜುನಾಗಢದ ನರಸಿಂಹ ಮೆಹ್ತಾ ಅವರು ವೈಷ್ಣವ ಜನ ತೋ ತೇನೆ ಕಹಿಯೇ, ಜೇ ಪೀಡ್ ಪರಾಯಿ ಜಾಣೇ ರೇ_ (ಪರರ ನೋವನ್ನು ತನ್ನ ನೋವೆಂದು ತಿಳಿಯುವವನನ್ನೇ ದೇವರ ಮನುಷ್ಯನೆಂದು ಕರೆಯಿರಿ) ಎಂದು ಹಾಡಿದ್ದಕ್ಕಾಗಿ ತಮ್ಮದೇ ಜಾತಿಯಿಂದ ಬಹಿಷ್ಕರಿಸಲ್ಪಟ್ಟರು. ಮಹಾತ್ಮ ಗಾಂಧೀಜಿ ಅದನ್ನು ಸಬರಮತಿಯಿಂದ ತಮ್ಮ ಕೊನೆಯ ಪ್ರಾರ್ಥನಾ ಸಭೆಯವರೆಗೆ, ಕುರಾನ್ ಮತ್ತು ಕ್ರೈಸ್ತರ ಸ್ತೋತ್ರಗಳ ಜೊತೆಗೆ ಕೊಂಡೊಯ್ದರು. ವಂದೇ ಮಾತರಂ ಒಂದು ಮಣ್ಣನ್ನು ಪೂಜಿಸುತ್ತದೆ ಮತ್ತು ನಾಗರಿಕನನ್ನು ಬಾಗಲು ಹೇಳುತ್ತದೆ. ಇನ್ನೊಂದು ಆತ್ಮವನ್ನು ನಾಗರಿಕಗೊಳಿಸುತ್ತದೆ ಮತ್ತು ನಾಗರಿಕರು ಯೋಗ್ಯರಾಗಿರಲು ಹೇಳುತ್ತದೆ ಎಂದು ಸಂಜಯ್ ಹೆಗ್ಡೆ ವಂದೇ ಮಾತರಂ ಮತ್ತು ವೈಷ್ಣವೋ ಜನ ತೋ ಬಗ್ಗೆ ವಿಶ್ಲೇಷಣಾತ್ಮಕವಾಗಿ ವಿವರಿಸಿದರು.
ಬಂಕಿ ಚಂದ್ರ ಚಟರ್ಜಿಯವರ ವಂದೇ ಮಾತರಂ ಹಾಡಿನ ಆರಂಭ ಹಾಗೂ ಬೆಳೆದು ಬಂದ ಬಗೆ ಹಾಗೂ ಬಳಿಕ ರಾಷ್ಟ್ರೀಯ ಸಮಾರಂಭಗಳಿಗೆ ಹಾಡಿನ ಎರಡು ಚರಣಗಳನ್ನು ಮಾತ್ರ ಅಳವಡಿಸಿಕೊಂಡ ಸಂದರ್ಭವನ್ನು ವಿವರವಾಗಿ ತಿಳಿಸಿದ ಅವರು, ಕವಿತೆ ಎಷ್ಟೇ ಅದ್ಭುತವಾಗಿದ್ದರೂ, ಅದರ ಇತಿಹಾಸ ಎಷ್ಟೇ ಪವಿತ್ರವಾಗಿದ್ದರೂ ಪ್ರಜಾಪ್ರಭುತ್ವ ರಾಷ್ಟ್ರದಡಿ ಕೆಲ ನಾಗರಿಕರು ತಮ್ಮ ಧರ್ಮದ ದೇವತೆಗೆ ನಮಸ್ಕರಿಸದೆ ಹಾಡಲು ಸಾದ್ಯವಾಗದ ಹಾಡು ರಾಷ್ಟ್ರಗೀತೆಯ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದಿಲ್ಲ. ಆದರೆ ‘ಜನಗಣ ಮನ’ ಈ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದೆ. ಯಾಕೆಂದರೆ ಅದು ಪಂಜಾಬ್ ನಿಂದ ಸಿಂಧುವರೆಗೆ, ದ್ರಾವಿಡದಿಂದ ಉತ್ಕಳದವರೆಗೆ ಭೂಭಾಗವನ್ನು ಉಲ್ಲೇಖಿಸಿದೆ ಮತ್ತು ಅದರ ಅಂತಿಮ ಆಶಯ ಭಾರತದ ಎಲ್ಲ ಜನರ ಭವಿಷ್ಯವನ್ನು ಒಳಗೊಂಡಿದೆ ಎಂದರು.
1950ರ ಜನವರಿ 24 ರಂದು, ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಜನ ಗಣ ಮನ ರಾಷ್ಟ್ರಗೀತೆಯಾಗಲಿದೆ ಮತ್ತು ವಂದೇ ಮಾತರಂ ಅನ್ನು ಸಮಾನವಾಗಿ ಗೌರವಿಸಲಾಗುವುದು ಎಂದು ಘೋಷಿಸಿದರು. ಅಂದೇ ವಂದೇ ಮಾತರಂ ಅನ್ನು ರಾಷ್ಟ್ರಗೀತೆಯಾಗಿ ಮಾಡಬಹುದಿತ್ತು. ಆದರೆ ಅವರೆಲ್ಲ ಜನರ ಭವಿಷ್ಯವನ್ನು ಪ್ರತಿಬಿಂಬಿಸುವ ಹಾಡನ್ನು ಆಯ್ಕೆ ಮಾಡಿಕೊಂಡರು. ಯಾವುದೇ ರೀತಿ ಕಡ್ಡಾಯವಿಲ್ಲದೆ ವಂದೇ ಮಾತರಂಗೂ ಸಮಾನ ಗೌರವ ನೀಡಿದರು. ರಾಜಿ ಪರಿಹಾರವಾಗಿದ್ದ ಆ ವಿಚಾರವನ್ನು ಮತ್ತೆ ಮತ್ತೆ ತೆರೆಯುವುದು ಶಕ್ತಿಯ ಸಂಕೇತವಲ್ಲ. ಬದಲಾಗಿ ಅದು ನಮ್ಮ ಪೂರ್ವಜರು ಮತ್ತು ಇನ್ನೂ ಹುಟ್ಟಬೇಕಿರುವವರಿಗೆ ಮಾಡುವ ನಂಬಿಕೆ ದ್ರೋಹ. ಹಾಗಾಗಿ ಎರಡು ಚರಣಗಳ ವಂದೇ ಮಾತರಂ ಪರಿಹಾರವು ಬಂಕಿಮರಿಗೆ ಮಾಡಿದ ಅವಮಾನವಾಗುವುದಿಲ್ಲ. ಮಹಾಭಾರತದ ಒಂದು ಲಕ್ಷ ಶ್ಲೋಕಗಳಿಂದ ಭಗವದ್ಗೀತೆಯ ಏಳುನೂರು ಶ್ಲೋಕಗಳನ್ನು ಆಯ್ದುಕೊಳ್ಳಲಾಗಿದೆ. ನಮ್ಮ ರಾಷ್ಟ್ರಗೀತೆ ಕೂಡಾ ಟಾಗೋರರ ಐದು ಚರಣಗಳಲ್ಲಿ ಮೊದಲನೆಯದು. ಒಂದು ಕೃತಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಹೊಂದಿಸುವುದು ಗೌರವವೇ ಹೊರತು ಅವಮಾನವಲ್ಲ ಎಂದವರು ಹೇಳಿದರು.
ದೇಶವೆಂದರೆ ಅದು ತನ್ನ ಇನ್ನೂ ಬಗೆಹರಿಯದ ಶಿಕ್ಷಣ, ಆರೋಗ್ಯ, ಉದ್ಯೋಗ ಮೊದಲಾದ ನೂರಾರು ಪ್ರಶ್ನೆಗಳ ಬಗ್ಗೆ ಚಿಂತಿಸಬೇಕಿದೆ ಎಂದವರು ಹೇಳಿದರು.
ಡಾ. ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿ, ಸ್ವಾತಂತ್ರ್ಯ ಬಂದ ಕಾಲದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರಿದಿದ್ದ ಮಂಗಳೂರು ಇಂದು ಹಿಂದೆ ಬಿದ್ದಿದೆ ಎನ್ನುವ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರ ಮಾತನ್ನು ಒಪ್ಪಿಕೊಳ್ಳುತ್ತಾ ಹಿಂದಿನ ಹಿರಿಮೆಯನ್ನು ಮತ್ತೆ ಮಂಗಳೂರಿಗೆ ತರಲು ಪ್ರಯತ್ನ ಪಡುವುದಾಗಿ ಹೇಳಿದರು.
ಬೆಂಗಳೂರು ಹೊಸತು ಪತ್ರಿಕೆಯ ಡಾ.ಸಿದ್ಧನಗೌಡ ಪಾಟೀಲ್, ಮಂಗಳೂರು ವಿವಿ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಜಯರಾಜ್ ಅಮೀನ್, ಡಾ. ಬಾಲಸರಸ್ವತಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
‘ಬಂಕಿಮ್ ಚಂದ್ರರ ವಂದೇ ಮಾತರಂ ಹಾಡಿನ ಮೂರನೆ ಚರಣವು ಸಪ್ತ ಕೋಟಿ ಕಂಠ ಎಂಬುದು ಅವಿಭಜಿತ ಬಂಗಾಳದ ತಮ್ಮ ಮಾತೃಭೂಮಿಯ ಏಳು ಕೋಟಿ ಜನರ ಧ್ವನಿ ಎಂಬುದಾಗಿದೆ. 1905ರಲ್ಲಿ, ಸರಳಾ ದೇವಿ ಅದನ್ನು ಮೂವತ್ತು ಕೋಟಿ ಎಂದು ಹಾಡಿದರು ಮತ್ತು ಮಾತೃಭೂಮಿ ಭಾರತವಾಯಿತು. ಇಂದು ನಾವು 140 ಕೋಟಿಯಾಗಿದ್ದು, ಎಲ್ಲರೂ ಹಾಡುವಂತೆ ಲಾಠಿ ಪ್ರಯೋಗ ಸಾಧ್ಯವಿಲ್ಲ. ಗಾಯಕರ ಇಚ್ಛೆ, ಹಾಡು ಎಲ್ಲರಿಗೂ ಸೇರಿದ್ದು ಎಂಬಹ ಭಾವನೆ ಮೂಡಿಸಬೇಕಾಗುತ್ತದೆ. ಸಂವಿಧಾನವು ನಾವೆಲ್ಲರೂ ಒಂದೇ ರೀತಿಯಲ್ಲಿ ಪೂಜಿಸಬೇಕೆಂದು ಒತ್ತಾಯಿಸುವುದಿಲ್ಲ. ನಾವೆಲ್ಲ 140 ಕೋಟಿ ಜನರು, ಸಮಾನ ನಾಗರಿಕರಾಗಿ ಉಳಿಯಬೇಕೆಂದು ಒತ್ತಾಯಿಸುತ್ತದೆ ಎಂದು ಸಂಜಯ್ ಹೆಗ್ಡೆ ಹೇಳಿದರು.
‘ಸಂವಿಧಾನವು ನಾವೆಲ್ಲರೂ ಒಂದೇ ರೀತಿಯಲ್ಲಿ ಪೂಜಿಸಬೇಕೆಂದು ಒತ್ತಾಯಿಸುವುದಿಲ್ಲ. ಭಾರತದ 140 ಕೋಟಿ ಜನರು ಸಮಾನ ನಾಗರಿಕರಾಗಿ ಉಳಿಯಬೇಕೆಂದು ಅದರ ಆಶಯ. ಹಾಗಾಗಿ ಸಂವಿಧಾನದಡಿ ರಾಷ್ಟ್ರಗೀತೆಯನ್ನು ಲಾಠಿ ಪ್ರಯೋಗಿಸಿ ಹಾಡಿಸಲಾಗದು. ಸಂವಿಧಾನದಡಿ ನಮ್ಮ ಹಾಡನ್ನು ಎಲ್ಲರೂ ಹಾಡಬೇಕೆಂದು ಒತ್ತಾಯಿಸದಿರುವುದು, ಎಲ್ಲಾ ನಾಗರಿಕರು ವೈಷ್ಣವ ಜನರಾಗಲೆಂದು ಪ್ರಾರ್ಥಿಸುವುದು ನಮಗೆ ಒಳಿತು. ಭಾರತದ ಗಣರಾಜ್ಯವು ಶಾಸನ ರೂಪಿಸಿದ ಹಾಡು ವಂದೇ ಮಾತರಂ. ಜನವರಿ 2026 ರಲ್ಲಿ, ಕೇಂದ್ರ ಗೃಹ ಸಚಿವಾಲಯವು ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಯ ಎಲ್ಲಾ ಆರು ಚರಣಗಳನ್ನು ಹಾಡಬೇಕು ಮತ್ತು ಎಲ್ಲರೂ ಎದ್ದು ನಿಲ್ಲುವಂತೆ ನಿರ್ದೇಶಿಸಿದೆ. ಕಳೆದ ಜುಲೈನಲ್ಲಿ, ಎರಡನೇ ಆದೇಶವು ಆರು ಚರಣಗಳನ್ನು ಅಧಿಕೃತ ಆವೃತ್ತಿಯನ್ನಾಗಿ ಮಾಡಿ 1971ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಗೆ ಸಂಸತ್ತು ತಿದ್ದುಪಡಿ ತಂದು ರಾಷ್ಟ್ರ ಗೀತೆಯನ್ನು ಕ್ರಿಮಿನಲ್ ಕಾನೂನಿನ ವ್ಯಾಪ್ತಿಗೆ ತಂದಿದೆ. ಆದರೆ 2026 ಸೆ.22ರಂದು ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಎರಡು ಚರಣ ಅಥವಾ ಆರು ಚರಣ ಹಾಡುವುದನ್ನು ರಾಜ್ಯ ನಿರ್ಧರಿಸಬಹುದು ಹಾಗೂ ಹಾಡು ಹಾಡಲು ಬಯಸಿದವರು ಯಾವುದೇ ಕ್ರಿಮಿನಲ್ ಪರಿಣಾಮ ಎದುರಿಸುವಂತಿಲ್ಲ ಎಂದು ಹೇಳುವ ಮೂಲಕ ಧಾರ್ಮಿಕ ಸ್ವಾತಂತ್ರ್ಯ, ಸಾಂವಿಧಾನಿಕ ಸಹಿಷ್ಣುತೆ ಮತ್ತು ಮೌನ ಆಕ್ಷೇಪಣೆಯ ಹಕ್ಕನ್ನು ಎತ್ತಿ ಹಿಡಿದಿದೆ.’
-ಸಂಜಯ್ ಹೆಗ್ಡೆ, ಹಿರಿಯ ವಕೀಲರು, ಸುಪ್ರೀಂ ಕೋರ್ಟ್.
ಉಡುಪಿ ಮೂಲದ ಸಂಜಯ್ ಹೆಗ್ಡೆಯವರು ಕರಾವಳಿ ಜತೆಗಿನ ತಮ್ಮ ನಂಟನ್ನು ಬಿಚ್ಚಿಡುತ್ತಾ, ಪಶ್ಚಿಮ ಘಟ್ಟಗಳು ಮತ್ತು ಸಮುದ್ರದ ನಡುವೆ ಇರುವ, ಮಳೆಯಿಂದ ತೋಯ್ದ ಈ ಸಣ್ಣ ಜಿಲ್ಲೆ ಭಾರತವಷ್ಟೇ ಅಲ್ಲ ಜಗತ್ತನ್ನೇ ಅಪ್ಪಿಕೊಂಡ ವಿಶಾಲ ಮನಸ್ಸಿನ ಪುರುಷರು ಮತ್ತು ಮಹಿಳೆಯರನ್ನು ರೂಪಿಸಿದೆ. ಕುಡ್ಲ, ಕೊಡಿಯಾಲ್, ಮೈಕಾಲ, ಮಂಗಳಾಪುರ, ಮಂಗಳೂರು ಎಂದು ಕರೆಯಲ್ಲಡುವ ಈ ಕರಾವಳಿ ಬಿ.ಎನ್. ರಾವ್, ಕಮಲಾದೇವಿ ಚಟ್ಟೋಪಾಧ್ಯಾಯ, ಶಿವರಾಮ ಕಾರಂತ, ಬಿ.ವಿ. ಕಕ್ಕಿಲ್ಲಾಯರಂತಹ ಮಹಾನ್ ನಾಯಕರನ್ನು ಕಂಡಿದೆ. ಆದರೆ 1980 ಮತ್ತು 1985ರ ನಡುವೆ ನಾನು ಕಂಡ ಕರಾವಳಿ ಈಗ ಅಸ್ತಿತ್ವದಲ್ಲಿಲ್ಲ ಎಂದು ವಿಷಾದಿಸಿದ ಅವರು, ಕರಾವಳಿಯೀಗ ಬ್ಯಾನರ್ ವಿಚಾರ, ಅಂತರ್ ಧರ್ಮೀಯ ಜೋಡಿಗಳು ಜತೆಯಾಗಿ ಪ್ರಯಾಣಿಸುವುದು, ಪಬ್ ಗಲಾಟೆ, ಚರ್ಚ್ ದಾಳಿ, ಜಾನುವಾರು ಸಾಗಾಟದ ವಿಚಾರದಲ್ಲಿ ಹಿಂಸೆಗೆ ಗುರಿಯಾಗಿದೆ. ನಾಲ್ಕು ಬ್ಯಾಂಕ್ಗಳ ಉಗಮ ಸ್ಥಾನವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಉತ್ತುಂಗದಲ್ಲಿದ್ದ ಕರಾವಳಿಯಲ್ಲಿ ಹಿಂದೆ ನೀವು ಏನು ಮಾರುತ್ತೀರಿ ಎಂದು ಕೇಳುತ್ತಿದ್ದ ಸಮಾಜದಲ್ಲಿ ಈಗ ನೀವು ಯಾರನ್ನು ಆರಾಧಿಸುತ್ತೀರಿ ಎಂದು ಕೇಳುವ ಪರಿಸ್ಥಿತಿ ಇರುವುದು ವಿಷಾದನೀಯ ಎಂದು ಸಂಜಯ್ ಹೆಗ್ಡೆ ಬೇಸರಿಸಿದರು.