ಮಂಗಳೂರಿನಲ್ಲಿ ಅಂಗಡಿ, ಹೋಟೆಲ್, ರೆಸ್ಟೊರೆಂಟ್ ಇನ್ನು ರಾತ್ರಿ 11:45ಕ್ಕೆ ಬಂದ್: ನಗರ ಪೊಲೀಸ್ ಆಯುಕ್ತರ ಹೊಸ ಆದೇಶ
ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು, ನ. 23: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ವ್ಯಾಪರಿಕ ಸಂಸ್ಥೆಗಳು , ಅಂಗಡಿಗಳು, ಹೋಟೆಲ್, ರೆಸ್ಟೊರೆಂಟ್ , ಟೀ ಸ್ಟಾಲ್ಗಳು, ಪಾನ್ ಅಂಗಡಿಗಳು ಹಾಗೂ ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳು ಪ್ರತಿದಿನ ರಾತ್ರಿ 11:45 ರಿಂದ ಮಾರನೇ ದಿನ ಬೆಳಗ್ಗೆ 5: 30ರ ವರೆಗೆ ಮಾತ್ರ ವ್ಯಾಪಾರ ವಹಿವಾಟು ನಿರ್ಬಂಧ ವಿಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ಸೋಮವಾರ ಆದೇಶ ನೀಡಿದ್ದಾರೆ.
ಈ ಆದೇಶ ಸಿಎಲ್-4, ಸಿಎಲ್-6(ಎ), ಸಿಎಲ್-7 ಲೈಸೆನ್ಸ್ ಹೊಂದಿದವರಿಗೆ ಅನ್ವಯಿಸುವುದಿಲ್ಲ ಅವರು ಲೈಸೆನ್ಸ್ನಲ್ಲಿ ನಿಗದಿಪಡಿಸಲಾದ ನಿಯಮವನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಆಸ್ಪತ್ರೆಗಳು, ಔಷಧ ಅಂಗಡಿಗಳು, ತುರ್ತು ಸೇವೆಗಳು, ಅಗತ್ಯ ಸಾರ್ವಜನಿಕ ಉಪಯೋಗದ ಸೇವೆಗಳು ಹಾಗೂ ಸರಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ವಿಶೇಷ ಅನುಮತಿ ನಡೆದ ಸಂಸ್ಥೆಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕಾರಣ: ಮಂಗಳೂರು ನಗರವು ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ಶೈಕ್ಷಣಿಕ ಹಾಗೂ ಬಂದರು ನಗರ ವಾಗಿದ್ದು ವಿವಿಧ ಧರ್ಮ, ಜಾತಿ ಮತ್ತು ಸಮುದಾಯಗಳ ಜನರು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುವ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಲವಾರು ಪ್ರದೇಶಗಳಲ್ಲಿ ತಡರಾತ್ರಿಯವರೆಗೂ ಹಾಗೂ ಕೆಲವೊಂದು ಕಡೆಗಳಲ್ಲಿ ಬೆಳಗಿನ ಜಾವದವರೆಗೂ ವ್ಯಾಪಾರ ವಹಿವಾಟು, ಹೋಟೆಲ್, ರೆಸ್ಟೋರೆಂಟ್, ಟೀ ಸ್ಟಾಲ್, ಪಾನ್ ಅಂಗಡಿ ಹಾಗೂ ಇತರೆ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅಗತ್ಯತೆ, ಮಾದಕ ವ್ಯಸನ ಹಾಗೂ ಅಪರಾಧ ಚಟುವಟಿಕೆಗಳ ನಿಯಂತ್ರಣ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಆಯುಕ್ತರು ತಿಳಿಸಿದ್ದಾರೆ.
ಮಂಗಳೂರು ನಗರವು ಕೋಮು ಸೂಕ್ಷ್ಮಪ್ರದೇಶವಾಗಿದ್ದು, ರಾತ್ರಿ ವೇಳೆಯಲ್ಲಿ ಜನರ ಅನಗತ್ಯ ಗುಂಪುಗೂಡುವಿಕೆ, ಅನಗತ್ಯ ಓಡಾಟ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹರಡುವ ವದಂತಿಗಳ ಪರಿಣಾಮವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿರುತ್ತವೆ. ವ್ಯಾಪಾರ ವಹಿವಾಟುಗಳು ರಾತ್ರಿ ಪೂರ್ತಿ ನಡೆಯುವುದರಿಂದ ಜನಸಂದಣಿ ಹೆಚ್ಚಾಗಿ, ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ.
ರಾತ್ರಿ ವೇಳೆ ತೆರೆದಿರುವ ಅಂಗಡಿ, ಹೋಟೆಲ್ ಮತ್ತು ಇತರೆ ವ್ಯಾಪಾರ ಕೇಂದ್ರಗಳ ಸುತ್ತಮುತ್ತ ಮಾದಕ ವ್ಯಸನಿಗಳು, ಸಮಾಜಘಾತಕ ವ್ಯಕ್ತಿಗಳು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಅನಗತ್ಯವಾಗಿ ಓಡಾಡುತ್ತಾ ಕಾಲಕರಣ ಮಾಡುವುದು ಕಂಡುಬರುತ್ತಿದೆ. ಇದರಿಂದ ಅಪರಾಧ ಚಟುವಟಿಕೆಗಳಿಗೆ ಅವಕಾಶ ದೊರೆಯುತ್ತದೆ.
ರಾತ್ರಿ ವೇಳೆಯಲ್ಲಿ ವ್ಯಾಪಾರ ಕೇಂದ್ರಗಳ ಬಳಿ ವಾಹನಗಳ ನಿಲುಗಡೆ, ಜೋರಾದ ಶಬ್ದ ಗದ್ದಲ, ರಸ್ತೆಗಳಲ್ಲಿ ಅನಗತ್ಯ ಜನರ ಗುಂಪುಗೂಡುವಿಕೆ ಮುಂತಾದವುಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ವಿಶೇಷವಾಗಿ ಆಸ್ಪತ್ರೆ ರೋಗಿಗಳಿಗೆ, ವಸತಿ ಪ್ರದೇಶಗಳಲ್ಲಿರುವ ಸಾರ್ವಜನಿಕರ ನೆಮ್ಮದಿ ಮತ್ತು ಶಾಂತಿಗೆ ಭಂಗ ಉಂಟಾ ಗುತ್ತದೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ವ್ಯಾಪಾರ ವಹಿವಾಟಿನ ಮೇಲಿನ ನಿರ್ಬಂಧವನ್ನು ರಾತ್ರಿ 11:45 ಗಂಟೆಯಿಂದ ಮಾರನೇ ದಿನ ಬೆಳಗ್ಗೆ 5:30 ಗಂಟೆಯವರೆಗೆ ಸಮಯವನ್ನು ನಿಗದಿಪಡಿಸುವುದು ಅವಶ್ಯವೆಂದು ಮನಗಂಡು ಈ ಆದೇಶ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.