ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಇಡೀ ರಾಜ್ಯದಲ್ಲಿ ಲಕ್ಷಾಂತರ ಬಾಂಗ್ಲಾದೇಶಿಗರು, ಪಾಕಿಸ್ತಾನಿಗಳು ಅಕ್ರಮವಾಗಿ ನುಸುಳಿದ್ದಾರೆ ಎಂದು ಬಿಜೆಪಿ ನಾಯಕರು ಕಟ್ಟುಕಥೆ ಕಟ್ಟಿ, ದ್ವೇಷ ಬಿತ್ತಿ ಭೀತಿ ಹುಟ್ಟಿಸಿದ್ದರು. ಆದರೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಂತಿಮ ವರದಿಯಲ್ಲಿ ಪತ್ತೆಯಾಗಿದ್ದು ಕೇವಲ ಇಬ್ಬರು ಮಹಿಳೆಯರು... ಲಕ್ಷಾಂತರ ನುಸುಳುಕೋರರು ಇದ್ದಾರೆ ಎಂದವರು ಈಗ ಎಲ್ಲಿದ್ದಾರೆ ಎಂದು ಹಿರಿಯ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್‌ರಾಜ್ ಬಹಿರಂಗ ಸವಾಲು ಹಾಕಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡದ ಪ್ರತಿಯೊಬ್ಬ ಬಿಜೆಪಿ ನಾಯಕರೂ ಸೇರಿದಂತೆ, ಲಕ್ಷಾಂತರ ಅಕ್ರಮ ನುಸುಳುಕೋರರು ಕರ್ನಾಟಕಕ್ಕೆ ಬಂದಿದ್ದಾರೆ, ಅದಕ್ಕಾಗಿಯೇ ಎಸ್‌ಐಆರ್‌ ಅಗತ್ಯ ಎಂದು ಭಾಷಣ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ನುಸುಳುಕೋರರ ಪಟ್ಟಿ ಕೇಳಿದಾಗ, ಆಯೋಗ ನೀಡಿದ ಪಟ್ಟಿಯಲ್ಲಿ ಬರೀ ಇಬ್ಬರೇ ಇಬ್ಬರು ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹೆಣ್ಣುಮಕ್ಕಳಿದ್ದಾರೆ. ಅವರೂ ಕೂಡ ಮದುವೆಯಾಗಿ ಇಲ್ಲಿಗೆ ಬಂದವರು. ಇನ್ನುಳಿದವರು ಸೆಕ್ಯುರಿಟಿ ಗಾರ್ಡ್, ರೆಸ್ಟೋರೆಂಟ್ ಕೆಲಸಕ್ಕೆ ಬಂದ ನೇಪಾಳಿಗಳು ಮತ್ತು ಪಾಠ ಮಾಡಲು ಬಂದ ಜರ್ಮನ್ / ಅಮೆರಿಕನ್‌ ಪ್ರಜೆಗಳು ಎಂದು ಲೇವಡಿ ಮಾಡಿದರು.

ಐದುವರೆ ಕೋಟಿ ಜನಸಂಖ್ಯೆ ಇರುವ ರಾಜ್ಯದಲ್ಲಿ, ಲಕ್ಷಾಂತರ ನುಸುಳುಕೋರರಿದ್ದಾರೆ ಎಂದು ಬ್ರೈನ್‌ವಾಶ್ ಮಾಡಿ, ಕೋಟ್ಯಂತರ ರೂ. ಸಾರ್ವಜನಿಕ ಹಣ ಪೋಲು ಮಾಡಿ, ಕೋಟಿಗೂ ಅಧಿಕ ಜನರ ಹೆಸರನ್ನು ಮತದಾರರ ಪಟ್ಟಿ ಯಿಂದ ತೆಗೆದುಹಾಕಿ ಸಾಧಿಸಿದ್ದೇನು ಎಂಬುದಕ್ಕೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರ ಉತ್ತರಿಸಬೇಕಿದೆ.

ಕರ್ನಾಟಕದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯ ಅಕ್ರಮಗಳನ್ನು ತೀವ್ರವಾಗಿ ಖಂಡಿಸಿದ ಅವರು, ದೇಶದ ಇತಿಹಾಸ ದಲ್ಲೇ ಅತ್ಯಂತ ಹೆಚ್ಚು ಸುಮಾರು 98 ಲಕ್ಷದಿಂದ 1 ಕೋಟಿ ಮತದಾರರ ಹೆಸರುಗಳನ್ನು ಮ್ಯಾಪಿಂಗ್ ಇಲ್ಲ ಎಂಬ ನೆಪದಲ್ಲಿ ತೆಗೆದುಹಾಕಿದೆ. ಸತ್ತವರು ಹಾಗೂ ಡಬಲ್ ಎಂಟ್ರಿಗಳನ್ನು ಹೊರತುಪಡಿಸಿದರೂ, ಇಂದಿಗೂ 70 ಲಕ್ಷಕ್ಕೂ ಅಧಿಕ ಜೀವಂತ ಮತದಾರರು ‘ಆಬ್ಸೆಂಟ್, ಶಿಫ್ಟೆಡ್, ಲಾಜಿಕಲ್ ಡಿಸ್ಕ್ರಿಪೆನ್ಸಿ’ ಹೆಸರಿನಲ್ಲಿ ಹಕ್ಕು ಕಳೆದು ಕೊಂಡಿದ್ದಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಶೇ. 50ರಷ್ಟು ಮತದಾರರನ್ನೇ ಪಟ್ಟಿಯಿಂದ ಹೊರಹಾಕ ಲಾಗಿದೆ. ಆಯೋಗದ ಲೆಕ್ಕಾಚಾರದಂತೆ ಬರೀ 53 ಲಕ್ಷ ಮತದಾರರಿದ್ದರೆ. ಹಾಗಿದ್ದರೆ ಸರಕಾರ ಬೆಂಗಳೂರಿನಲ್ಲಿ ಹೊಸ ರೋಡ್‌ಗಳನ್ನು, ಹೆಚ್ಚುವರಿ ಬಸ್‌ಗಳನ್ನು ಯಾಕೆ ತರಬೇಕು? ಇದೆಂತಹ ಹಾಸ್ಯಾಸ್ಪದ ಸಂಗತಿ ಎಂದವರು ಪ್ರಶ್ನಿಸಿದರು.

ಪ್ರತಿ ವರ್ಷ ಮಾತ್ರವಲ್ಲ, ನಾಲ್ಕು ತಿಂಗಳಿಗೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಕರ್ನಾಟಕದ ಅಂಕಿ ಅಂಶಗಳ ಪ್ರಕಾರ ವರ್ಷಕ್ಕೆ ನಾಲ್ಕು ಲಕ್ಷಕ್ಕಿಂತ ಹೆಚ್ಚು ಸಾವಿಲ್ಲ. ಹಾಗಿದ್ದರೆ 20 ಲಕ್ಷ ಸಾವು ಹೇಗಾಯಿತು. ಹಾಗಾದರೆ ಚುನಾವಣಾ ಆಯೋಗ ಐದು ವರ್ಷಗಳಿಂದ ಕೆಲಸವೇ ಮಾಡಿಲ್ಲವೇ? ಸತ್ತಿದ್ದಾರೆಂದು ಹೇಳಿದವರೂ ಜೀವಂತವಾಗಿರುವ ಉದಾಹರಣೆಗಳು ಇರುವಾಗ ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ನಮಗೆ ಅನುಮಾನವಿದೆ. ಚುನಾವಣಾ ಆಯೋಗವು 2025ರ ಫೆಬ್ರವರಿಯಲ್ಲಿ ಅಪ್‌ಡೇಟೆಡ್ ಮತದಾರರ ಪಟ್ಟಿ ಪ್ರಕಟಿಸಿದ್ದು ಯಾಕೆ ಎಂದು ಪ್ರಶ್ನಿಸಿದ ಪ್ರಕಾಶ್‌ರಾಜ್, ಅದಾಗಿ ಆರು ತಿಂಗಳಲ್ಲಿ ಎಸ್‌ಐಆರ್ ಮಾಡುವ ಅವರವೇನಿತ್ತು ಎನ್ನುವುದು ನಮ್ಮ ಪ್ರಶ್ನೆ. ಬೆಂಗಳೂರಿನಲ್ಲಿ 53 ಲಕ್ಷ ಜನ ಮಾತ್ರ ಮತದಾರರಿದ್ದಾರೆಂದರೆ ಉಳಿದವರು ಎಲ್ಲಿ ಹೋದರು. ಹೊರಗಡೆಯಿಂದ ಬರುವವರು ಜಾಸ್ತಿಯಾಗುತ್ತಿದ್ದಾರೆ. ಮತದಾರರು ಕಡಿಮೆಯಾಗುವುದು ಹೇಗೆ ಎಂಬುದಕ್ಕೆ ಉತ್ತರಿಸಲಿ. ನನ್ನನ್ನು ಶಿಫ್ಟೆಡ್ ಅಂತ ಮಾಡಿ ಮತ್ತೆ ಹೊಸತಾಗಿ ಫಾರಂ 6ನಲ್ಲಿ ಅರ್ಜಿ ಸಲ್ಲಿಸಿ ಎಂದರೆ ಇದಕ್ಕೆ ಅರ್ಥವಿದೆ ಎಂದು ಕೇಳಿದರು.

ದ.ಕ. ಜಿಲ್ಲೆಯ ಜನರನ್ನು ಬಿಜೆಪಿ, ಆರೆಸ್ಸೆಸ್‌ನವರು ಮಂಗಗಳನ್ನಾಗಿ ಮಾಡಿದ್ದಾರೆಂಬ ತನ್ನ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಮಂಗಳೂರಿನಲ್ಲಿ ಶೀಘ್ರವೇ ಎಸ್‌ಐಆರ್ ಬಗ್ಗೆ ನೀಡಿರುವ ಅಂಕಿ ಅಂಶದಂತೆ ದ.ಕ. ಜಿಲ್ಲೆಯ ಆರೋಗ್ಯ, ಯುವಕರ ಉದ್ಯೋಗಾವಕಾಶಗಳು ಕಡಿಮೆಯಾಗಿರುವ ಹಾಗೂ ಸೌಹಾರ್ದತೆ ಕೆಟ್ಟಿರುವ ಅಂಕಿ ಅಂಶಗಳನ್ನು ನೀಡುತ್ತೇನೆ. ಇದಕ್ಕೆಲ್ಲಾ ಕಾರಣವಾದ ರಾಜಕೀಯ ಪಕ್ಷದಿಂದ, ಅದರ ಆಲೋಚನೆಗಳಿಂದ ಹೊರಗೆ ಬನ್ನಿ ಎಂದು ಹೇಳುತ್ತೇನೆ. ಇದು ನನ್ನ ನೋವು ಎಂದರು.

ದೇಶವನ್ನು ಕಟ್ಟುವ ಕೆಲಸದಲ್ಲಿದ್ದು, ರಾಜಕೀಯ ಪಕ್ಷ ಕಟ್ಟುವುದಲ್ಲ. ದೇಶದಲ್ಲಿ ಸಾಕಷ್ಟು ರಾಜಕೀಯ ಪಕ್ಷಗಳಿವೆ. ಜನರಿಗೆ ಜಾಗೃತಿ ಮೂಡಿಸುವ ಜನಪರವಾಗಿ ಮಾತನಾಡುವ ಧ್ವನಿಗಳ ಅಗತ್ಯವಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಂಡಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ನನ್ನ ಬಗ್ಗೆಯೂ ಸುಳ್ಳು ಹಬ್ಬಿಸಲಾಗಿತ್ತು. ನಾಲ್ಕು ಕಡೆ ನನ್ನ ಹೆಸರಿದೆ ಎಂದು ಸುಳ್ಳು ಹೇಳಿದವರ ಬಗ್ಗೆ ಪ್ರಕರಣ ದಾಖಲಾಗಿದೆ. ಹೈಕೋರ್ಟ್ ಆತನನ್ನು ಹುಡುಕುತ್ತಿದೆ. ಆತನನ್ನು ಆ ನಾಲ್ಕು ಓಟರ್ ಐಡಿ ಯಾವುದು ಎಂದು ಕೇಳಬೇಕು. ಆತ ಉತ್ತರಿಸಬೇಕು. ಅದರ ಎಪಿಕ್ ನಂಬರ್, ಯಾವ ವಿಳಾಸದಲ್ಲಿದೆ, 2018ರಿಂದ ಆ ವಿಳಾಸದಲ್ಲಿ ಪ್ರಕಾಶ್ ರೈ ಮತ ಚಲಾಯಿಸಿ ದ್ದಾರೆಯೇ ಎಂಬುದನ್ನು ಆತ ಹೇಳಬೇಕು. ಕೆಸರು ಎರಚುವುದು ತುಂಬಾ ಸುಲಭ. ಯಾವ ಚಾನೆಲ್‌ನಲ್ಲಿ ಒಬ್ಬ ವಕೀಲರನ್ನು ಕೂರಿಸಿ ಪ್ರಶ್ನಿಸಿದ್ದರಲ್ಲ, ಇದೀಗ ಅದೇ ಚಾನೆಲ್‌ನವರಿಗೆ ದಮ್ಮಿದ್ದಲ್ಲಿ ಆತನನ್ನು ಕರೆಸಿ ಕಾರ್ಯಕ್ರಮ ಮಾಡಲಿ. ಹೈಕೋರ್ಟ್ ಹುಡುಕುತ್ತಿರುವವ ಇಲ್ಲೇ ಇದ್ದಾರೆ ಎಂದು ತೋರಿಸಲಿ. ನಾಲ್ಕು ಕಡೆ ಮತದಾನದ ಹಕ್ಕಿರುವುದನ್ನು ಸಾಬೀತುಪಡಿಸಲಿ. ಶಿಫ್ಟೆಡ್ ಅನ್ನುವ ಕಾರಣಕ್ಕೆ ನನ್ನ ಮತದಾನದ ಹಕ್ಕನ್ನೇ ಕಸಿಯಲಾಗಿದೆ. ಫಾರಂ ನಂ. 6 ಯಾಕೆ ನಾನು ಮತ್ತೆ ತುಂಬಬೇಕು. ಫಾರಂ ನಂ. 8 ಕೊಡಿ ಎಂದರೆ ಕೊಟ್ಟಿಲ್ಲ. ಫಾರಂ ನಂ. 6 ಪ್ರಕಾರ ನಾನು ಹೊಸ ಮತದಾರ ಎಂದು ನೊಂದಾಯಿಸಿಕೊಳ್ಳಬೇಕು ಮತ್ತು ಎಲ್ಲಾ ವಿಷಯಗಳು ಸತ್ಯ, ನಾನು ಇದಕ್ಕಿಂತ ಮೊದಲು ಎಲ್ಲೂ ಮತದಾನ ಮಾಡಿಲ್ಲ ಎಂದು ಸಹಿ ಹಾಕಬೇಕು. ಸುಳ್ಳು ಮಾಹಿತಿ ನೀಡಿದರೆ ಒಂದು ವರ್ಷ ಜೈಲು ಅಂತ ಫಾರಂನಲ್ಲಿಯೇ ಇದೆ. ಹಾಗಿರುವಾಗ ನಾನು ಫಾರಂ ನಂ. 6 ಹೇಗೆ ಭರ್ತಿ ಮಾಡಬೇಕು. ಮನೆಯಲ್ಲಿ ಬಂದಾಗ ನಾನಿಲ್ಲ ಎಂದಾಕ್ಷಣ ನನ್ನ ಮತದಾನದ ಹಕ್ಕನ್ನು ತೆಗೆದುಹಾಕಲು ಯಾರಿಗೆ ಹಕ್ಕು ನೀಡಲಾಗಿದೆ ಎಂದವರು ಎಸ್‌ಐಆರ್ ಅದ್ವಾನಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

‘ಅನಂತ್ ಕುಮಾರ್ ಇಡೀ ಮುಸ್ಲಿಂ ಸಮುದಾಯವನ್ನು ನಾಶ ಮಾಡಬೇಕು ಎಂದು ಹೇಳಿದಾಗ ಆ ಬಗ್ಗೆ ಯಾರೂ ಮಾತನಾಡಿಲ್ಲ. ಆದರೆ ನೇಹಾ ಬೋರಾ ಅವರು ಪತ್ರಿಕಾಗೋಷ್ಟಿಯಲ್ಲಿ ಆವೇಶದಲ್ಲಿ ಹೇಳಿದ ವಾಕ್ಯವೊಂದನ್ನು ಹಿಡಿದು ಪ್ರಶ್ನಿಸಲಾಗುತ್ತಿದೆ. ಆವೇಶದಲ್ಲಿ ಅವರು ಹೇಳಿರುವ ಬಗ್ಗೆ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಮತ್ತೆ ಮತ್ತೆ ಆ ಬಗ್ಗೆ ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ನಾವು ಈಗಾಗಲೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಾಂಧಿ ದಾರಿಯಲ್ಲೇ ಹೋರಾಟ ಮಾಡುತ್ತೇವೆ. ಎಲ್ಲಾ ಪ್ರಶ್ನೆಗಳಿಗೂ ಇದೇ ಉತ್ತರ ಎಂದು ಪ್ರಕಾಶ್ ರಾಜ್ ಹೇಳಿದರು.

ಗೋಷ್ಟಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಲ್ಳ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮನೋಜ್ ವಾಮಂಜೂರು ಉಪಸ್ಥಿತರಿದ್ದರು.

ಮತದಾರರ ಹಕ್ಕು- ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಈ ಹೋರಾಟ

‘ಯುವ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿ ಪೀಸ್ ಬಾಂಡ್’ ಸಹಿ ಮಾಡಿಸಲಾಗುತ್ತಿದೆ. ಸಂವಿಧಾನ ಬದ್ಧವಾಗಿ ಪ್ರತಿಭಟನೆ ನಡೆಸುವ ಯುವಕರ ಮೇಲೆ ಬುಲೆಟ್, ಸೈನ್ಯ, ಪೊಲೀಸರನ್ನು ಪ್ರಯೋಗಿಸಿ ದಮನ ಮಾಡಲಾಗುತ್ತಿದೆ. ಇನ್‌ಸ್ಟಾ ಗ್ರಾಂ ಖಾತೆಗಳನ್ನು ಹತ್ತಿಕ್ಕಲಾಗುತ್ತದೆ. ಭಾರತದ ತ್ರಿವರ್ಣ ಧ್ವಜ ಹಿಡಿದು ಹೋರಾಡಿದ ಯುವಕರನ್ನು ಜೈಲಿಗೆ ತಳ್ಳಿ, ಅತ್ಯಾಚಾರಿಗಳನ್ನು ಮತ್ತು ಕೊಲೆಗಾರರನ್ನು ಎಲೆಕ್ಷನ್‌ನಲ್ಲಿ ಸ್ಪರ್ಧಿಸಲು ಬಿಡುಗಡೆ ಮಾಡುತ್ತಿರುವುದು ಈ ಸರ್ಕಾರದ ಕ್ರೂರತನ.

ಇಂತಹ ಪರಿಸ್ಥಿತಿಯಲ್ಲಿ ನಾವು ರಾಜಕೀಯ ಪಕ್ಷಗಳ ಬೆಂಬಲವಾಗಿರದೆ, ಮತದಾರರ ಹಕ್ಕು ರಕ್ಷಿಸಬೇಕಾಗಿದೆ. ಇಲ್ಲವಾದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಹೋರಾಟದ ಮೂಲಕ ಜನರ ಪ್ರತಿರೋಧವನ್ನು ವ್ಯಕ್ತಪಡಿಸುತ್ತಾ, ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಎಸ್‌ಐಆರ್ ಅನ್ಯಾಯದ ಬಗ್ಗೆ ವಿದೇಶದಲ್ಲಿಯೂ ಮಾತನಾಡುತ್ತಿದ್ದು, ಒಕ್ಕೊರಳಾಗಿ ಚುನಾವಣಾ ಪ್ರಕ್ರಿಯೆಗಿಂತಲೂ ಮುಖ್ಯವಾಗಿ ಮತದಾನದ ಹಕ್ಕನ್ನು ಕಾಪಾಡುವ ಕಾರ್ಯವಾಗ ಬೇಕು. ಹಾಗಾಗಿ ಇಗು ನಿಲ್ಲುವ ನಡಿಗೆ ಅಲ್ಲ ಎಂದು ಪ್ರಕಾಶ್ ರಾಜ್ ಹೇಳಿದರು.

ದೇಶದ ಪ್ರಜೆಗಳನ್ನು ಪ್ರಧಾನಿ ದಿಮಾಕಿ ನಕ್ಸಲರೆನ್ನಬಹುದೇ ?

‘ನಾನೊಬ್ಬ ದೇಶದ ಪ್ರಜೆ. ಪ್ರಜೆಗಳನ್ನು ದೇಶದ ಪ್ರಧಾನಿ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯ ಭಾಷಣದಲ್ಲಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ‘ದಿಮಾಗಿ ನಕ್ಸಲರು’ ಎಂದು ಕರೆಯಬಹುದೇ, ಅವರನ್ನು ಕಳ್ಳ ಎಂದು ಕರೆಯುವುದರಲ್ಲಿ ತಪ್ಪೇನು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್‌ರಾಜ್, ಅವರು ಅಧಿಕಾರದಲ್ಲಿರುವುದು ಕೇವಲ ಶೇ. 33ನಲ್ಲಿ. ನರೇಂದ್ರ ಮೋದಿಯವರು ಸಂಪೂರ್ಣ ಬಹುಮತದಲ್ಲಿ ಎಂಬುದನ್ನು ಅರಿಯಲಿ. ಒಂದೆಡೆ ನಿತೀಶ್ ಕುಮಾರ್, ಮತ್ತೊಂದೆಡೆ ಚಂದ್ರಬಾಬು ನಾಯ್ಡು ಅವರ ಪವರ್ ಕಾರ್ಡ್ ಇಲ್ಲ ಎಂದರೆ ನಡುಗಬೇಕು. 10 ವರ್ಷ ಆಳ್ವಿಕೆ ನಡೆಸಿ, ವಿಶ್ವಗುರು ಅನ್ನಿಸಿಕೊಂಡು 400ಕ್ಕೆ ಹೋಗಿಲ್ಲ, 240ಕ್ಕೆ ಬಂದಿದ್ದೀರಿ. ತೆರಿಗೆ ಹಾಕುವುದು, ಮಕ್ಕಳನ್ನು ಹೊಡೆಯುವುದು, ಪೊಲೀಸರನ್ನು ಬಳಕೆ ಮಾಡುವುದು, ಇಡಿ ಕೇಸ್ ಹಾಕುವುದು, ಜೈಲಿಗೆ ಹಾಕುವುದು, ಮಾಧ್ಯಮದವರನ್ನು ಹೊಡೆಯುವುದನ್ನು, ಕಳ್ಳ ಕಾರರು, ಭ್ರಷ್ಟರು ಬಿಜೆಪಿ ಪಕ್ಷಕ್ಕೆ ಬಂದಾಕ್ಷಣ ಕ್ಲೀನ್ ಆಗುತ್ತಿದ್ದಾರೆ. ಇನ್ನು ಯಾವ ಕಾರಣಕ್ಕೆ ಮೋದಿಯವರನ್ನು ನಾನು ಗೌರವಿಸಬೇಕು. ದೇಶದ ಪ್ರಧಾನಿಯಾ ದವರು ದೇಶದಲ್ಲಿ ನಡೆಯುತ್ತಿರುವ ವಿದ್ಯಾಮಾನದ ಬಗ್ಗೆ ತುಟಿ ಬಿಚ್ಚದ, ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕರೆದು ದೇಶದ ಜನರಿಗೆ ಉತ್ತರಿಸು ಎಂದು ಹೇಳಲಾಗದ ಪ್ರಧಾನಿ. ಅವರ ಮನೆಯ ಪಕ್ಕದಲ್ಲೇ ಮಕ್ಕಳಿಗೆ ಹೊಡೆಯಲಾಗುತ್ತಿದೆ. ಅದನ್ನು ನಿಲ್ಲಿಸಲು ಸಾಧ್ಯವಾಗದೆ ದಿಮಾಗಿ ನಕ್ಸಲರು ಎನ್ನುವವರನ್ನು ನಾನು ಗೌರವಿಸಬೇಕೆಂದು ನೀವು ಹೇಳುತ್ತೀರಾ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor