Kasaragod | NEET ಅಕ್ರಮದ ಬೆನ್ನಲ್ಲೇ ತಂಗಿ ಆತ್ಮಹತ್ಯೆ; ಆಘಾತಗೊಂಡಿದ್ದ ಸಹೋದರ ಮಂಗಳೂರಿನ ಹೋಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2026-08-11 10:00 IST

Photo ( ಅರ್ಜುನ್‌ / ಐಜಾ) |keralakaumudi

ಕಾಸರಗೋಡು : ನೀಟ್ (NEET) ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ಮನನೊಂದು ಜೂನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೇರಳದ ಕಾಸರಗೋಡು ಮೂಲದ ವಿದ್ಯಾರ್ಥಿನಿ ಐಜಾ ಆರ್. ಮಹೇಶ್ ಅವರ ಸಹೋದರ ಅರ್ಜುನ್ ಮಹೇಶ್ (24) ಸೋಮವಾರ ಮಂಗಳೂರಿನ ಹೋಟೆಲ್ ಕೊಠಡಿಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ತಂಗಿಯ ಸಾವಿನ ಆಘಾತದಿಂದ ಹೊರಬರಲಾಗದೆ ಅರ್ಜುನ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕೊಠಡಿಯಲ್ಲಿ ‘ಅಮ್ಮ, ಐ ಆಮ್ ಸಾರಿ’ ಎಂದು ಬರೆದಿರುವ ಸಣ್ಣ ಡೆತ್ ನೋಟ್ ಪತ್ತೆಯಾಗಿದೆ.

ದುಬೈನಲ್ಲಿ ಆಟೊಮೊಬೈಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅರ್ಜುನ್, ಜೂನ್ ಮೊದಲ ವಾರದಲ್ಲಿ ತಂಗಿ ಐಜಾ ಮೃತಪಟ್ಟಾಗ ಕಾಸರಗೋಡಿಗೆ ಬಂದಿದ್ದರು. ತಂಗಿಯ ಅಂತ್ಯಕ್ರಿಯೆ ಮುಗಿಸಿ 25 ದಿನಗಳ ಹಿಂದೆಯಷ್ಟೇ ದುಬೈಗೆ ಮರಳಿದ್ದರು. ಅವರು ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ರವಿವಾರ ದುಬೈನಿಂದ ಹೊರಟ ಅರ್ಜುನ್, ಕುಟುಂಬದ ಯಾರಿಗೂ ಮಾಹಿತಿ ನೀಡದೆ ಶಾರ್ಜಾ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮಧ್ಯಾಹ್ನ ತಾಯಿಗೆ ದೂರವಾಣಿ ಕರೆ ಮಾಡಿದ್ದರೂ ತಾವು ಊರಿಗೆ ಬಂದಿರುವ ವಿಷಯವನ್ನು ತಿಳಿಸಿರಲಿಲ್ಲ.

ಬಳಿಕ ಮಂಗಳೂರು ವಿಮಾನ ನಿಲ್ದಾಣದ ಸಮೀಪದ ಮರವೂರಿನ ಹೋಟೆಲ್‌ ನಲ್ಲಿ ಕೊಠಡಿ ಕಾಯ್ದಿರಿಸಿದ್ದರು. ಕೊಠಡಿ ಕಾಯ್ದಿರಿಸುವಾಗ ತಮ್ಮ ಹೆಸರಿನ ಬದಲು ತಾಯಿಯ ಹೆಸರನ್ನು ಬಳಸಿ ‘ಅರ್ಜುನ್ ರಾಧಿಕಾ’ ಎಂದು ನಮೂದಿಸಿದ್ದರು.

ರವಿವಾರ ಮಧ್ಯಾಹ್ನದ ಬಳಿಕ ಅರ್ಜುನ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ದುಬೈನಲ್ಲಿದ್ದ ಅವರ ಸ್ನೇಹಿತರು ಕುಟುಂಬದವರಿಗೆ ಮಾಹಿತಿ ನೀಡಿದ್ದರು. ಸಂಬಂಧಿಕರು ಕಾಸರಗೋಡಿನ ಬೇಕಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸೈಬರ್ ಸೆಲ್ ನೆರವಿನಿಂದ ಮೊಬೈಲ್‌ನ ಕೊನೆಯ ಲೊಕೇಶನ್ ಪರಿಶೀಲಿಸಿದಾಗ ಅದು ಮಂಗಳೂರು ಎಂದು ತಿಳಿದುಬಂದಿತ್ತು.

ಸೋಮವಾರ ಬೆಳಗ್ಗೆ ಹೋಟೆಲ್ ಸಿಬ್ಬಂದಿ ಹಲವು ಬಾರಿ ಕರೆದರೂ ಅರ್ಜುನ್ ಕೊಠಡಿಯ ಬಾಗಿಲು ತೆರೆಯಲಿಲ್ಲ. ಈ ಕುರಿತು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಸ್ಥಳಕ್ಕೆ ತೆರಳಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ಅರ್ಜುನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕೊಠಡಿಯಲ್ಲಿ ಪೊಲೀಸರಿಗೆ ದೊರೆತ ಸಣ್ಣ ಡೆತ್ ನೋಟ್‌ನಲ್ಲಿ ‘ಅಮ್ಮ, ಐ ಆಮ್ ಸಾರಿ’ ಎಂದು ಬರೆಯಲಾಗಿತ್ತು. ಅದರೊಂದಿಗೆ ತಮ್ಮ ಸಾವಿನ ಸುದ್ದಿಯನ್ನು ತಿಳಿಸಬೇಕಾದ ಕೆಲವು ಆಪ್ತ ಸ್ನೇಹಿತರ ಹೆಸರುಗಳು ಮತ್ತು ಅವರ ಮೊಬೈಲ್ ಸಂಖ್ಯೆಗಳನ್ನು ಅರ್ಜುನ್ ಉಲ್ಲೇಖಿಸಿದ್ದರು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News