ಮಂಗಳೂರು, ಮೂಲ್ಕಿ, ಮೂಡುಬಿದಿರೆ, ಉಳ್ಳಾಲ ತಾಲೂಕಿನ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಮರುಪರಿಶೀಲನೆ ತರಬೇತಿ ಕಾರ್ಯಕ್ರಮ
ಮಂಗಳೂರು, ನ.18: ಮಂಗಳೂರು, ಮೂಲ್ಕಿ, ಮೂಡುಬಿದಿರೆ, ಉಳ್ಳಾಲ ತಾಲೂಕಿನ ಪಂಚ ಗ್ಯಾರಂಟಿ ಯೋಜನೆಯಡಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಮರುಪರಿಶೀಲನೆ ಮಾಡುವ ತರಬೇತಿ ಕಾರ್ಯಕ್ರಮ ನಡೆಯಿತು.
ಉರ್ವದಲ್ಲಿರುವ ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.
ಮಂಗಳೂರು, ಮೂಲ್ಕಿ, ಮೂಡುಬಿದಿರೆ ಹಾಗೂ ಉಳ್ಳಾಲ ತಾಲ್ಲೂಕುಗಳ ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳೂರು ಹಾಗೂ ಮೂಡುಬಿದಿರೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಅವರು ಉದ್ಘಾಟಿಸಿದರು.
ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ. ಕಾರಿಗಿ ಅವರು ಮಾತನಾಡಿ, ತರಬೇತಿಗೆ ಬಂದ ಎಲ್ಲಾ ಸದಸ್ಯರಿಗೆ ಕಾರ್ಯಕ್ರಮದ ಉದ್ದೇಶ ಹಾಗೂ ವಿಧಾನಗಳ ಕುರಿತು ಮಾಹಿತಿ ನೀಡಿದರು. ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಮನೆ ಮನೆಗೆ ಭೇಟಿ ನೀಡಿ, ಬಯೋಮೆಟ್ರಿಕ್ ಹಾಗೂ ಫೇಶಿಯಲ್ ದೃಢೀಕರಣದ ಮೂಲಕ ಮರುದಾಖಲಾತಿ ಮಾಡುವ ಕ್ರಮ ಹಾಗೂ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲಿಯೂ ಪರಿಶೀಲನೆ ಮಾಡುವ ವಿಧಾನ ಕುರಿತಂತೆ ವಿವರವಾದ ತರಬೇತಿಯನ್ನು ಅವರು ನೀಡಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಸುರೇಖಾ, ಮಂಗಳೂರು ತಾಲ್ಲೂಕಿನ ಗ್ಯಾರಂಟಿ ಸಮಿತಿ ಅಧ್ಯಕ್ಷ ಸುರೇಶ್ ಕಂಬಳಿ, ಮೂಡುಬಿದಿರೆ ತಾಲೂಕಿನ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಮೂಲ್ಕಿ ಅಧ್ಯಕ್ಷ ಆಲ್ವಿನ್ ಪಿಂಟೋ, ಉಳ್ಳಾಲ ತಾಲೂಕಿನ ಅಧ್ಯಕ್ಷ ರಫೀಕ್, ಉಳ್ಳಾಲ ತಾಲೂಕು ಕಾರ್ಯನಿರ್ವಹಣಾಧಿಕಾರಿ ಗುರುದತ್ ಹಾಗೂ ಸಮಿತಿಯ ಇತರೆ ಸದಸ್ಯರು ಹಾಜರಿದ್ದರು.
ಗೃಹಲಕ್ಷ್ಮಿ ಫಲಾನುಭವಿಗಳ ಮರುಪರಿಶೀಲನೆಗೆ ಎಂಟು ಅಂಶಗಳ ಮಾಹಿತಿ ಸಂಗ್ರಹ
ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ ಮರುಪರಿಶೀಲನಾ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದ್ದು, ಈ ಜವಾಬ್ದಾರಿಯನ್ನು ನಿಯೋಜಿತ ಗಣತಿದಾರರಿಗೆ ವಹಿಸಲಾಗಿದೆ. ಮನೆಮನೆಗೆ ಭೇಟಿ ನೀಡಿ ಫಲಾನುಭವಿಗಳ ವಿವಿಧ ದಾಖಲೆ ಹಾಗೂ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಿ ದಾಖಲಿಸಲಾಗುತ್ತದೆ.
ಫಲಾನುಭವಿಯ ಆಧಾರ್ ಸಂಬಂಧಿತ ದೃಢೀಕರಣ ಹಾಗೂ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಸೇರಿದಂತೆ ಸಂಪೂರ್ಣ ವಿವರ, ಪಡಿತರ ಚೀಟಿಯ ವಿವರಗಳು ಹಾಗೂ ಅದರ ವರ್ಗ, ಆದಾಯ ತೆರಿಗೆ ಪಾವತಿದಾರರ ಸ್ಥಿತಿ, ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವವರ ಸ್ಥಿತಿ, ಸರಕಾರಿ ನೌಕರರಾಗಿರುವ ಬಗ್ಗೆ ಮಾಹಿತಿ, ಪಿಂಚಣಿದಾರರ ಸ್ಥಿತಿ, ಫಲಾನುಭವಿಯ ಜಾತಿ ವರ್ಗ, ವೈವಾಹಿಕ ಸ್ಥಿತಿ, ಪತಿಯ ವಿವರಗಳು ಹಾಗೂ ಪತಿಯ ಆಧಾರ್ ಮಾಹಿತಿ ಪಡೆದುಕೊಳ್ಳಲು ಇರುತ್ತದೆ ಎಂದು ಶೈಲಾ ಕೆ.ಕಾರಿಗಿ ತಿಳಿಸಿದ್ದಾರೆ.