ನಾವು ಜನರ ಬದುಕಿನ ಮೇಲೆ ರಾಜಕೀಯ ಮಾಡುವವರು, ಭಾವನೆಗಳ ಮೇಲಲ್ಲ: ಸಿಎಂ ಡಿ.ಕೆ.ಶಿವಕುಮಾರ್
ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ
ಮಂಗಳೂರು, ಸೆ.18: ''ಯಾರೂ ಗಾಬರಿಯಾಗಬೇಕಿಲ್ಲ. ನಮಗೆ ರಾಜಕೀಯ ಮುಖ್ಯವಲ್ಲ, ಜನರ ಬದುಕು ಮುಖ್ಯ. ನಾವು ಜನರ ಬದುಕಿನ ಮೇಲೆ ರಾಜಕೀಯ ಮಾಡುವವರು. ಭಾವನೆಗಳ ಮೇಲೆ ರಾಜಕೀಯ ಮಾಡುವವರಲ್ಲ. ಯಾರೂ ಗಾಬರಿ ಪಡಬೇಕಿಲ್ಲ, ಎಲ್ಲರ ಚಿಂತನೆಯನ್ನು ಒಳಗೊಂಡು ನಮ್ಮ ಸರಕಾರ ಕೆಲಸ ಮಾಡಲಿದೆ'' ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳೂರಿನ ಸರಕಾರಿ ಅತಿಥಿ ಗೃಹದಲ್ಲಿ ಶುಕ್ರವಾರ ಬೆಳಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ''ಮಹಾತ್ಮ ಗಾಂಧಿ ಅವರು ಉಳಿದಿದ್ದ ಮನೆಗೆ ಹೋಗಿದ್ದೆ ಅಲ್ಲಿ ಉಪಾಹಾರ ಮಾಡಿದೆ. ''ಮಂಗಳೂರು ಬನ್ಸ್, ದೋಸೆ ಎಲ್ಲಾ ಸವಿದೆ. ಇಲ್ಲಿಗೆ ಬಂದಿರುವುದು ಬಹಳ ಸಂತೋಷ ಆಗಿದೆ. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲೆಲ್ಲಿ ಕರೆದುಕೊಂಡು ಹೋಗುತ್ತಾರೋ ಅಲ್ಲಿ ಹೋಗುತ್ತೇನೆ'' ಎಂದು ಹೇಳಿದರು.
ಇದೇ ಮೊದಲ ಬಾರಿ ಕರಾವಳಿಯಲ್ಲಿ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಮುಖ್ಯಮಂತ್ರಿ ಶುಕ್ರವಾರ ಬೆಳಗ್ಗೆ ಮಹಾತ್ಮ ಗಾಂಧಿ ಉಳಿದಿದ್ದ ಮನೆಗೆ ಭೇಟಿ ನೀಡಿದರು.