Photo Credit: PTI

ಹೊಸದಿಲ್ಲಿ: ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸರು ತಾಳ್ಮೆ ಮತ್ತು ವೃತ್ತಿಪರತೆಯಿಂದ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ಸಂದೇಶ ಸಾರಲು ದಿಲ್ಲಿ ಪೊಲೀಸರು ಹಂಚಿಕೊಂಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ವಿದ್ಯಾರ್ಥಿ ಹೋರಾಟಗಾರರ ಮೇಲೆ ದಿಲ್ಲಿ ಪೊಲೀಸರು ನಡೆಸುತ್ತಿರುವ ಹಲ್ಲೆ, ದೌರ್ಜನ್ಯದ ವೀಡಿಯೊಗಳನ್ನು ಹಂಚಿಕೊಂಡು, ‘ಈ ಸಂದರ್ಭದಲ್ಲಿ ನಿಮ್ಮ ತಾಳ್ಮೆ ಎಲ್ಲಿ ಹೋಗಿತ್ತು?’ ಎಂದು ಪ್ರಶ್ನಿಸಿದ್ದಾರೆ.

ದಿಲ್ಲಿ ಪೊಲೀಸರ ಅಧಿಕೃತ ಎಕ್ಸ್ ಖಾತೆ (@DelhiPolice) ಅಕ್ಟೋಬರ್ 16ರಂದು, ‘ತಾಳ್ಮೆ ಕೇವಲ ಒಂದು ಸದ್ಗುಣವಲ್ಲ; ಅದು ನಿರಂತರ ಪರಿಶ್ರಮ’ ಎಂಬ ಅರ್ಥದ ಸಂದೇಶದೊಂದಿಗೆ ಸುಮಾರು 46 ಸೆಕೆಂಡುಗಳ ವೀಡಿಯೊ ಹಂಚಿಕೊಂಡಿದೆ. ಈ ಪೋಸ್ಟ್ ನಲ್ಲಿ, ಪ್ರತಿಭಟನೆಗಳ ವೇಳೆ ಪೊಲೀಸರ ಮೇಲೆ ಒತ್ತಡ ಉಂಟಾದ ಸಂದರ್ಭಗಳ ದೃಶ್ಯಗಳಿವೆ. ಜನರನ್ನು ನಿಯಂತ್ರಿಸುವುದು, ಪ್ರತಿಭಟನಾಕಾರರ ಆಕ್ರೋಶವನ್ನು ಎದುರಿಸುವುದು, ನೀರು ಕುಡಿಯುವುದು, ಚಹಾ ಸೇವಿಸುವುದು ಹಾಗೂ ನಗುತ್ತಾ ಥಂಬ್ಸ್-ಅಪ್ ತೋರಿಸುವ ದೃಶ್ಯಗಳ ಮೂಲಕ ಪೊಲೀಸರ ತಾಳ್ಮೆಯನ್ನು ಬಿಂಬಿಸಲು ಪ್ರಯತ್ನಿಸಲಾಗಿದೆ.

ವೀಡಿಯೊಗೆ ಪ್ರತಿಕ್ರಿಯಿಸಿರುವ ಜನರು ಅದರ ಉದ್ದೇಶವನ್ನೇ ಪ್ರಶ್ನಿಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ನಡೆಸಿದ ದೌರ್ಜನ್ಯವನ್ನು ಮುಚ್ಚಿಹಾಕಲು ನಡೆಸಿದ ಭಾವನಾತ್ಮಕ ಆಟ ಇದು ಎಂದು ಟೀಕಿಸಿದ್ದಾರೆ. ದಿಲ್ಲಿ ಪೊಲೀಸರು ದೌರ್ಜನ್ಯ ನಡೆಸಿ, ಇದೀಗ ಅವರೇ ‘ವಿಕ್ಟಿಮ್ ಕಾರ್ಡ್’ (ಸಂತ್ರಸ್ತರಂತೆ ನಟಿಸುವುದು) ಬಳಸುತ್ತಿದ್ದಾರೆ ಹಾಗೂ ‘ಭಾವನಾತ್ಮಕ ಬ್ಲ್ಯಾಕ್ಮೇಲಿಂಗ್’ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಪೊಲೀಸರ ಪೋಸ್ಟ್ ಗೆ ಪ್ರತಿಕ್ರಿಯೆಯಾಗಿ ಕೆಲವರು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಹಾಗೂ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರ ಮೇಲೆ ನಡೆದಿರುವ ಹಲ್ಲೆಗಳ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಇಂತಹ ಸಂದರ್ಭಗಳಲ್ಲಿ ಪೊಲೀಸರ ತಾಳ್ಮೆ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ.

ಕೆಲವು ಪ್ರತಿಭಟನೆಗಳಲ್ಲಿ ಪೊಲೀಸರ ವರ್ತನೆ ತಾಳ್ಮೆಯ ಮಿತಿಯನ್ನು ಮೀರಿದೆ ಎಂಬ ಆರೋಪಗಳನ್ನೂ ನೆಟ್ಟಿಗರು ಮುಂದಿಟ್ಟಿದ್ದಾರೆ. ಪ್ರತಿಭಟನೆಗಳ ಸಂದರ್ಭದಲ್ಲಿ ಎಲ್ಲರೊಂದಿಗೂ ಒಂದೇ ರೀತಿಯ ಸಂಯಮದಿಂದ ವರ್ತಿಸಲಾಗುತ್ತದೆಯೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪಗಳ ಕುರಿತು ಕೆಲವರು ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಜನರು ಹಂಚಿಕೊಂಡ ವೀಡಿಯೊಗಳಲ್ಲಿ, ಮಹಿಳಾ ಹೋರಾಟಗಾರ್ತಿಯೊಬ್ಬರನ್ನು ದಿಲ್ಲಿ ಪೊಲೀಸರು ಬಸ್ಸಿನಲ್ಲಿ ಕೆಡವಿ ಹಾಕಿ, ಕತ್ತು ಹಿಸುಕುತ್ತಿರುವುದು, ಹೋರಾಟಗಾರ್ತಿಯರನ್ನು ಎಳೆದಾಡುತ್ತಿರುವುದು ಹಾಗೂ ಪ್ರತಿಭಟನಾಕಾರರ ಮುಖಕ್ಕೆ ಬಾರಿಸುತ್ತಿರುವುದು ಸೇರಿದಂತೆ ಹಲವು ದೃಶ್ಯಗಳು ಸೆರೆಯಾಗಿವೆ. ಇವುಗಳನ್ನು ಹಂಚಿಕೊಂಡ ಬಳಕೆದಾರರು, ‘ನಿಮ್ಮ ತಾಳ್ಮೆ ಎಲ್ಲಿ ಹೋಗಿತ್ತು?’ ಎಂದು ಕುಟುಕಿದ್ದಾರೆ.

ಇನ್ನು ಕೆಲವರು ಈ ವೀಡಿಯೊವನ್ನು ಪೊಲೀಸರ ಪ್ರಚಾರದ ಪ್ರಯತ್ನವೆಂದು ಬಣ್ಣಿಸಿದ್ದಾರೆ. ವಿದೇಶಗಳಲ್ಲಿನ ಪೊಲೀಸ್ ಕಾರ್ಯವೈಖರಿಯೊಂದಿಗೆ ಹೋಲಿಕೆ ಮಾಡಿ ಟೀಕಿಸಿದವರೂ ಇದ್ದಾರೆ.

ಲಭ್ಯವಿರುವ ಪೋಸ್ಟ್ ವಿವರಗಳ ಪ್ರಕಾರ, ವೀಡಿಯೊ ಪ್ರಕಟವಾದ ಸುಮಾರು 24 ಗಂಟೆಗಳಲ್ಲಿ 33 ಸಾವಿರಕ್ಕೂ ಅಧಿಕ ಲೈಕ್ಗಳು, 8 ಸಾವಿರಕ್ಕೂ ಹೆಚ್ಚು ರಿಪೋಸ್ಟ್ ಗಳು ಹಾಗೂ ಸುಮಾರು 1,830 ಪ್ರತಿಕ್ರಿಯೆಗಳು ದಾಖಲಾಗಿದ್ದು, ವೀಕ್ಷಣೆಗಳ ಸಂಖ್ಯೆ 8.95 ಲಕ್ಷದಷ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor