×
Ad

Hubballi | ಕೃಷಿ ಜಮೀನಿಗೆ ಬೋರ್‌ವೆಲ್ ಕೊರೆಸಲು ಆಸರೆಯಾದ ʼಗೃಹಲಕ್ಷ್ಮಿʼ ಯೋಜನೆ

Update: 2026-05-13 00:33 IST

ಹುಬ್ಬಳ್ಳಿ, ಮೇ 12 : ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂರಶೆಟ್ಟಿ ಕೊಪ್ಪದ ಈರವ್ವ ಎಂಬವರು ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ 'ಗೃಹಲಕ್ಷ್ಮಿ'ಯಿಂದ ಬಂದ ಹಣವನ್ನು ಕೃಷಿ ಮಾಡಲು ಮುಂದಾಗಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ.

ಈರವ್ವ ಅವರು ಗೃಹಲಕ್ಷ್ಮಿ ಯೋಜನೆ ಫಲಾನುಭವಿಯಾಗಿದ್ದು, ಅದರಲ್ಲಿ ಬಂದ 50,000 ರೂ.ವನ್ನು ಬೋರ್‌ವೆಲ್ ಕೊರೆಸಲು ಮನೆಯವರಿಗೆ ನೀಡಿ ಕೃಷಿಗೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ.

ಪತಿ ಭರಮ್ಮಣ್ಣ ಅಂಗಡಿ ತಮಗಿದ್ದ 2.5 ಎಕರೆ ಜಮೀನಿನಲ್ಲಿ ಬೋ‌ರ್ ವೆಲ್ ಕೊರೆಸಿದ್ದು, 5 ಇಂಚು ನೀರು ಸಹ ದೊರೆತಿದೆ.  ಈರವ್ವ ಹಾಗೂ ಪತಿ ಭರಮಣ್ಣ ಅಂಗಡಿಗೆ ಇಬ್ಬರು ಮಕ್ಕಳಿದ್ದಾರೆ. ಗೃಹಲಕ್ಷ್ಮಿಯಿಂದ ಬರುತ್ತಿದ್ದ ಹಣವನ್ನು ಮೊದಲ ಒಂದೆರಡು ಕಂತು ಮನೆಯ ಖರ್ಚಿಗೆ ಬಳಸಿಕೊಂಡಿದ್ದು, ನಂತರದ ಕಂತುಗಳ ಕೂಡಿಟ್ಟ ಹಣದಲ್ಲಿ ಬೋರ್‌ವೆಲ್ ಕೊರೆಸಿದ್ದಾರೆ

ಬೇರೆಯವರ ಹೊಲಕ್ಕೆ ಬೋರ್‌ವೆಲ್ ಕೊರೆಯಲು ಬಂದಿದ್ದ ಲಾರಿಯನ್ನು ಕಂಡು ಧೈರ್ಯ ಮಾಡಿ ತಮ್ಮ ಹೊಲಕ್ಕೆ ಬೋರ್ ವೆಲ್ ಕೊರೆಸಲು ತನ್ನ ಹತ್ತಿರವಿದ್ದ ದುಡ್ಡನ್ನು ಮಗನ ಕೈಯಲ್ಲಿ ಕೊಟ್ಟು ಬೋರ್‌ವೆಲ್‌ ಕೊರೆಸಲು ಈರವ್ವ ಮುಂದಾಗಿದ್ದು, 90 ಅಡಿಗೆ 5 ಇಂಚು ನೀರು ಬಂದಿದೆ. ಮುಂದೆ ನೀರು ಇರುವುದು ಖಚಿತಗೊಂಡ ನಂತರ 90 ಅಡಿಗೆ ಕೆಸಿಂಗ್ ಹಾಕಿಸಿ ಮತ್ತೆ 220 ಅಡಿ ಕೊರೆಸಿ ಒಟ್ಟು 5 ಇಂಚು ನೀರು ಹೊರ ಬಂದಿದೆ. ಬೋರ್ ವೆಲ್ ಕೊರೆಸಲು ಅಂದಾಜು 1 ಲಕ್ಷ 60 ಸಾವಿರ ರೂ. ಖರ್ಚು ಆಗಿದ್ದು, ಬಾಕಿ ಹಣವನ್ನು ಈರವ್ವನ ಮಗ ಒಟ್ಟುಗೂಡಿಸಿ ಬೋರ್‌ಗೆ ಮೋಟರ್ ಅನ್ನು ಅಳವಡಿಸಿ ನೀರನ್ನು ಹೊಲಕ್ಕೆ ಹಾಕಿಸಿದ್ದಾರೆ.

ಬೋರ್‌ವೆಲ್ ಹಾಕಿಸುವುದು ನನ್ನ ತಾಯಿಯ ಕನಸಾಗಿತ್ತು, ನಮ್ಮ ತಾಯಿ ಕೃಷಿ ಚಟುವಟಿಕೆಯನ್ನು ಅವಲಂಬಿಸಿ ಜೀವನ ನಡೆಸಿದವರು. ಮಳೆ ಆಶ್ರಿತ ಜಮೀನಿನಲ್ಲಿ ಆದಾಯ ಕಡಿಮೆ ಇತ್ತು.ಒಂದೊಂದು ವರ್ಷ ಸರಿಯಾದ ಸಮಯಕ್ಕೆ ಮಳೆ ಆಗದೆ ಭರಗಾಲ ಬಿದ್ದಾಗ ಬಹಳ ಕಷ್ಟದ ದಿನಗಳನ್ನು ನೋಡಿದ್ದೇವೆ. ನಮ್ಮ ತಾಯಿಯ ಕನಸು ಇಂದು ನನಸಾಗಿದ್ದು, ಈ ಯೋಜನೆ ಕೊಟ್ಟ ರಾಜ್ಯ ಸರಕಾರಕ್ಕೆ ನಮ್ಮ ಕುಟುಂಬದ ಕಡೆಯಿಂದ ಧನ್ಯವಾದ.

ರಮೇಶ್ ಅಂಗಡಿ, ಈರವ್ವ ಪುತ್ರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News