ಹುಬ್ಬಳ್ಳಿ | ಮುಸ್ಲಿಮ್ ಸಮುದಾಯದ ಐವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಧರಣಿ
ಹುಬ್ಬಳ್ಳಿ : ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಮುಸ್ಲಿಮ್ ಸಮುದಾಯದ 5 ಜನ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಹು-ಧಾ ಅಂಜುಮನ್ ಸಂಸ್ಥೆ ನೇತೃತ್ವದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಹುಬ್ಬಳ್ಳಿಯಲ್ಲಿ ಧರಣಿ ನಡೆಸಿದ್ದಾರೆ.
ನಗರದ ಇಂಡಿಪಂಪ ಸರ್ಕಲ್‌ನ ಸೈಯದ್ ಫತೇಶಾವಲಿ ದರ್ಗಾದ ಎದುರು ನಡೆದ ಧರಣಿಯಲ್ಲಿ ನೂರಾರು ಮಂದಿ ಭಾಗವಹಿಸಿ, ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಸಮರ್ಪಕ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
ಝಮೀರ್ ಅಹ್ಮದ್ ಅವರು ಪಕ್ಷದ ಸಂಘಟನೆ ಹಾಗೂ ಸರಕಾರದ ಕಾರ್ಯಚಟುವಟಿಕೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಅವರಿಗೆ ಡಿಸಿಎಂ ಅಥವಾ ಸಚಿವ ಸ್ಥಾನ ನೀಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಶೇ.90 ರಷ್ಟು ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಂದಿವೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ಕಡೆಗಣಿಸಬಾರದು. ಝಮೀರ್ ಅಹ್ಮದ್ ಅವರು ಮೂರು ವರ್ಷಗಳ ಸಚಿವ ಸ್ಥಾನವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಬಡವರ ಧ್ವನಿಯಾಗಿ ಅವರು ಕೆಲಸ ಮಾಡಿದ್ದಾರೆ. ಅವರನ್ನು ಮೊದಲು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು, ನಂತರದ ಉಳಿದ ಮೂರು ಸ್ಥಾನಗಳನ್ನು ನಮ್ಮ ಸಮಾಜದ ಸಮರ್ಥ ನಾಯಕರಿಗೆ ಕೊಡಬೇಕು.
ಎ. ಎಮ್. ಹಿಂಡಸಗೇರಿ, ಮಾಜಿ ಸಚಿವ, ಹಾಲಿ ಅಂಜುಮನ್ ಅಧ್ಯಕ್ಷ ಹುಬ್ಬಳ್ಳಿ
ಹೊಸ ಸರಕಾರದ ಮೊದಲ ಹಂತದ ಸಚಿವ ಸಂಪುಟದಲ್ಲಿ ಝಮೀರ್ ಅಹ್ಮದ್ ಖಾನ್ ಅವರ ಹೆಸರನ್ನು ಬಿಟ್ಟಿದ್ದು ಅಲ್ಪಸಂಖ್ಯಾತರ ಮನಸ್ಸಿಗೆ ತುಂಬಾ ನೋವು ಆಗಿದೆ. ಕಾಂಗ್ರೆಸ್ ಹೈ ಕಮಾಂಡ್ ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ಕೊಡಬೇಕು. ಒಂದು ವೇಳೆ ಕೊಡದೆ ಇದ್ದರೆ ನಮ್ಮ ಸಮುದಾಯ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅದಕ್ಕೆ ನಾವೂ ಬದ್ಧರಾಗಿ ಸಮುದಾಯದ ಪರವಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ.
ಅಲ್ತಾಫ ಹಳ್ಳೂರ, ಹು-ಧಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ