ಹುಬ್ಬಳ್ಳಿ: ಸಭಾಪತಿ ಸ್ಥಾನ ಅಧಿಕಾರವಲ್ಲ, ಅದೊಂದು ಪವಿತ್ರ ಜವಾಬ್ದಾರಿ. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರಿಗೆ ಸಮಾನ ಅವಕಾಶ ನೀಡಿ, ಸದನದ ಘನತೆ ಕಾಪಾಡುವುದು ನನ್ನ ಕರ್ತವ್ಯ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ವಿಪ ಸಭಾಪತಿ ಸಲೀಂ ಅಹ್ಮದ್ ಭರವಸೆ ನೀಡಿದರು.

ಅವರು ರವಿವಾರ ಸಂಜೆ ಇಲ್ಲಿನ ಗೋಕುಲ ರಸ್ತೆಯ ನಾನಕಿ ಕನ್ವೆನ್ಷನ್ ಆವರಣದಲ್ಲಿ ಧಾರವಾಡ ಜಿಲ್ಲಾ ನಾಗರಿಕ ವೇದಿಕೆಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಈ ಭಾಗದ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ಸಭಾಪತಿಯಾಗಿ ಆಯ್ಕೆಯಾದ ಬಳಿಕ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಸಂವಿಧಾನಾತ್ಮಕವಾಗಿ ಅನಿವಾರ್ಯವಿಲ್ಲದಿದ್ದರೂ, ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕೆಂಬ ಆತ್ಮಸಾಕ್ಷಿಯಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ವೈಯಕ್ತಿಕ ರಾಜಕೀಯ ಭಾವನೆಗಳಿಗಿಂತ ಸದನದ ಘನತೆ ಮತ್ತು ಸದಸ್ಯರ ಹಕ್ಕುಗಳ ರಕ್ಷಣೆಯೇ ಮುಖ್ಯ ಎಂದರು.

ವಿಧಾನ ಪರಿಷತ್ತಿಗೆ 120 ವರ್ಷಗಳ ಇತಿಹಾಸವಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಸಹಜ. ಆದರೆ, ಜನರ ಸಮಸ್ಯೆಗಳ ಕುರಿತು ಸದನದಲ್ಲಿ ಚರ್ಚೆಯಾಗಬೇಕು. ವಿರೋಧ ಪಕ್ಷಕ್ಕೆ ಮಾತನಾಡುವ ಅವಕಾಶ ನೀಡುವ ಜತೆಗೆ, ಸರ್ಕಾರದ ಉತ್ತಮ ಕಾರ್ಯಗಳನ್ನು ಮೆಚ್ಚುವ ಮನೋಭಾವವೂ ಇರಬೇಕು. ಚರ್ಚೆಯ ಮೂಲಕ ಪರಿಹಾರ ಕಂಡುಕೊಳ್ಳುವುದೇ ಪ್ರಜಾಪ್ರಭುತ್ವದ ಆಶಯ. ಸದನದ ಕಲಾಪಕ್ಕೆ ಸಚಿವರು, ಸದಸ್ಯರು ಹಾಗೂ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ನನ್ನ ಸೌಮ್ಯ ಸ್ವಭಾವವನ್ನು ದೌರ್ಬಲ್ಯವೆಂದು ಭಾವಿಸಬಾರದು. ಅಗತ್ಯವಿದ್ದರೆ ಕಠಿಣ ನಿರ್ಧಾರ ಕೈಗೊಳ್ಳಲೂ ಹಿಂಜರಿಯುವುದಿಲ್ಲ ಎಂದು ಹೇಳಿದರು.

ಮೂವರು ಪ್ರಧಾನಮಂತ್ರಿಗಳೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ದೊರೆತಿದೆ. ಹಿಂದೆ ರಾಜಕೀಯದಲ್ಲಿ ಬ್ಯಾಟರ್ ಆಗಿದ್ದ ನಾನು ಈಗ ಅಂಪೈರ್ ಸ್ಥಾನದಲ್ಲಿದ್ದೇನೆ. ಹೀಗಾಗಿ ಎಲ್ಲರಿಗೂ ನ್ಯಾಯ ಒದಗಿಸುವುದು ನನ್ನ ಜವಾಬ್ದಾರಿ ಎಂದರು.

ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಫಕೀರ ಸಿದ್ಧರಾಮ ಶ್ರೀಗಳು ಮಾತನಾಡಿ, ಸೌಹಾರ್ದ, ಸಮನ್ವಯ ಹಾಗೂ ಸಾತ್ವಿಕ ರಾಜಕಾರಣದ ಗುಣ ಹೊಂದಿರುವ ಸಲೀಂ ಅಹ್ಮದ್ ಅವರು ಎಲ್ಲರನ್ನೂ ಪ್ರೀತಿಯಿಂದ ಕಾಣುವ ವ್ಯಕ್ತಿತ್ವದವರು. ಫಕೀರೇಶ್ವರ ಶ್ರೀಗಳ ಸಂದೇಶವಾದ "ದ್ವೇಷ ಬಿಡು, ಪ್ರೀತಿ ಮಾಡು" ಎಂಬ ತತ್ವವನ್ನು ಮೈಗೂಡಿಸಿಕೊಂಡಿದ್ದಾರೆ. ಅವರಿಂದ ಇನ್ನಷ್ಟು ಜನಪರ ಕಾರ್ಯಗಳು ನಡೆಯಲಿ, ಉನ್ನತ ಹುದ್ದೆಗಳು ಲಭಿಸಲಿ ಎಂದು ಆಶೀರ್ವದಿಸಿದರು.

ಸವಣೂರಿನ ದೊಡ್ಡ ಹುಣಸೆ ಕಲ್ಮಠದ ಚನ್ನಬಸವ ಶ್ರೀಗಳು, ಸಿಖ್ ಸಮುದಾಯದ ಧರ್ಮಗುರು ಜ್ಞಾನಿ ಜಸ್ವೀರಸಿಂಗ್ ಮಾತನಾಡಿದರು.

ವಿಪ ಸದಸ್ಯ ಎಫ್‌.ಎಚ್‌. ಜಕ್ಕಪ್ಪನವರ ಮಾತನಾಡಿ, ನೂತನ ಸಭಾಪತಿಗಳು ಕಲ್ಯಾಣ ಕರ್ನಾಟಕದ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚಿಸಬೇಕು. ಈ ಕುರಿತು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್‌.ಎಚ್‌. ಕೋನರಡ್ಡಿ ಮಾತನಾಡಿದರು.

ಮುಸ್ಲಿಂ ಧರ್ಮಗುರು ತಾಜುದ್ದೀನ್ ಪೀರಾ, ಕ್ರೈಸ್ತ ಧರ್ಮಗುರು ಬಿಷಪ್‌ ಮಾರ್ಟಿನ್‌ ಹೋರಗಾವಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಧಾರವಾಡ ಜಿಲ್ಲಾ ನಾಗರಿಕ ವೇದಿಕೆ ಅಧ್ಯಕ್ಷ ವಿಶ್ವನಾಥ ಕುಲಕರ್ಣಿ, ಸಂಚಾಲಕ ಶಿವಾನಂದ ಮುತ್ತಣ್ಣವರ, ಧಾರವಾಡ ಮಹಾನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸದಾನಂದ ಡಂಗನವರ, ಗ್ರಾಮೀಣ ಘಟಕದ ಅಧ್ಯಕ್ಷ ಚಂದ್ರಶೇಖರ ಜುಟ್ಟಲ್ ಕೆಪಿಸಿಸಿ ಕಾರ್ಯದರ್ಶಿ ಶಣ್ಮುಖ ಶಿವಳ್ಳಿ ಸೇರಿದಂತೆ ಹಲವರಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಹಮ್ಮದ ರಫೀಕ್ ಬೀಳಗಿ/ವಾರ್ತಾಭಾರತಿ

contributor

ಮಹಮ್ಮದ್ ರಫೀಕ್ ಬೀಳಗಿ ಅವರು ಕಳೆದ ಎರಡು ದಶಕಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳೆರಡರಲ್ಲೂ ಕಾರ್ಯನಿರ್ವಹಿಸಿದ್ದಾರೆ. ಸುದ್ದಿ ಸಂಪಾದನೆ, ವರದಿಗಾರಿಕೆ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಆಯಾಮಗಳಲ್ಲಿ ತಮ್ಮದೇ ಆದ ವೃತ್ತಿಪರ ಅನುಭವ ಹೊಂದಿರುವ ಅವರು, ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಧಾರವಾಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.