×
Ad

ಶಾರ್ಜಾ| ಮಾನಸಿಕ ಆರೋಗ್ಯ - ಪುನರ್ವಸತಿ ಆಸ್ಪತ್ರೆ ನಿರ್ಮಾಣಕ್ಕೆ ತುಂಬೆ ಗ್ರೂಪ್ ಚಾಲನೆ

Update: 2026-05-13 18:38 IST

ಶಾರ್ಜಾ: ಯುಎಇಯ ಶಾರ್ಜಾ ಹೆಲ್ತ್‌ಕೇರ್ ಸಿಟಿಯಲ್ಲಿ ಮೊದಲ ಖಾಸಗಿ ಸಮಗ್ರ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ಆಸ್ಪತ್ರೆ ನಿರ್ಮಾಣಕ್ಕೆ ತುಂಬೆ ಗ್ರೂಪ್ ಚಾಲನೆ ನೀಡಿದೆ.

“ತುಂಬೆ ಸೈಕಿಯಾಟ್ರಿಕ್ ಅಂಡ್ ರಿಹ್ಯಾಬಿಲಿಟೇಶನ್ ಹಾಸ್ಪಿಟಲ್” ಹೆಸರಿನ ಈ ಮಹತ್ವಾಕಾಂಕ್ಷಿ ಯೋಜನೆ 1,10,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದ್ದು, 120 ಹಾಸಿಗೆಗಳ ಸೌಲಭ್ಯವನ್ನು ಹೊಂದಿರಲಿದೆ.

ಶಾರ್ಜಾ ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು ಹಾಗೂ ಶಾರ್ಜಾ ಹೆಲ್ತ್ ಅಥಾರಿಟಿ ಮತ್ತು ಶಾರ್ಜಾ ಹೆಲ್ತ್‍ಕೇರ್ ಸಿಟಿ ಅಧ್ಯಕ್ಷರಾದ ಎಚ್.ಇ. ಡಾ. ಅಬ್ದುಲ್ ಅಝೀಝ್ ಸಯೀದ್ ಅಲ್ ಮೆಹೈರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ‌ದಲ್ಲಿ ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷರಾದ ಡಾ. ತುಂಬೆ ಮೊಯ್ದೀನ್ ಉಪಸ್ಥಿತರಿದ್ದರು.

ಯುಎಇ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ಸೇವೆಗಳ ಅಗತ್ಯ ವನ್ನು ಗಮನದಲ್ಲಿಟ್ಟುಕೊಂಡು ಈ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಇದುವರೆಗೆ ವಿಶೇಷ ಚಿಕಿತ್ಸೆಗಾಗಿ ವಿದೇಶಗಳಿಗೆ ತೆರಳಬೇಕಾಗಿದ್ದ ಅನೇಕ ರೋಗಿಗಳಿಗೆ ಈಗ ಸ್ಥಳೀಯ ಮಟ್ಟದಲ್ಲೇ ಅತ್ಯಾಧುನಿಕ ಸೇವೆಗಳು ದೊರೆಯಲಿವೆ.

ಆಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆ, ನ್ಯೂರೋ-ರಿಹ್ಯಾಬಿಲಿಟೇಶನ್, ವ್ಯಸನಮುಕ್ತ ಚಿಕಿತ್ಸೆ, ಮಕ್ಕಳ ಮತ್ತು ಕಿಶೋರರ ಮಾನಸಿಕ ಆರೋಗ್ಯ ಸೇವೆಗಳು, ಮನೋಭಾವ ಮತ್ತು ಆತಂಕ ಸಂಬಂಧಿತ ಚಿಕಿತ್ಸಾ ವಿಭಾಗಗಳು ಕಾರ್ಯನಿರ್ವಹಿಸಲಿವೆ. ದೀರ್ಘಕಾಲೀನ ಚಿಕಿತ್ಸೆ ಮತ್ತು ಗೌಪ್ಯತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ವಿಐಪಿ ಇನ್‌ಪೇಷೆಂಟ್ ವಿಲ್ಲಾಗಳನ್ನೂ ನಿರ್ಮಿಸಲಾಗುತ್ತಿದೆ. ಸಾರ್ವಜನಿಕರ ಉಪಯೋಗಕ್ಕಾಗಿ “ತುಂಬೆ ಮಸೀದಿ”ಯನ್ನೂ ನಿರ್ಮಿಸಲಾಗುತ್ತಿದೆ.

ಆಸ್ಪತ್ರೆ ಜಾಗತಿಕ ಪುನರ್ವಸತಿ ಮಾನದಂಡವಾದ CARF ಮಾನ್ಯತೆ ಪಡೆಯುವ ಗುರಿ ಹೊಂದಿದೆ. ಜೂನ್ 2026ರಲ್ಲಿ ಕಾಮಗಾರಿ ಆರಂಭಗೊಳ್ಳಲಿದ್ದು, 2027ರ ಮಧ್ಯಭಾಗದಲ್ಲಿ ಆಸ್ಪತ್ರೆ ಸೇವೆಗೆ ಸಿದ್ಧವಾಗುವ ನಿರೀಕ್ಷೆಯಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಇ. ಡಾ. ಅಬ್ದುಲ್ ಅಝೀಝ್ ಸಯೀದ್ ಅಲ್ ಮೆಹೈರಿ ಅವರು, “ಮಾನವ ಕಲ್ಯಾಣದ ಪ್ರತಿಯೊಂದು ಆಯಾಮಕ್ಕೂ ಸ್ಪಂದಿಸುವ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸುವ ಶಾರ್ಜಾದ ಬದ್ಧತೆಯ ಪ್ರತಿಫಲವೇ ಈ ಯೋಜನೆ” ಎಂದು ಹೇಳಿದರು.

ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷರಾದ ಡಾ. ತುಂಬೆ ಮೊಯ್ದೀನ್ ಅವರು ಮಾತನಾಡಿ, “ಮೂರು ದಶಕಗಳಿಗೂ ಹೆಚ್ಚು ಕಾಲ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ನಾವು, ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಿದ್ದೇವೆ. ಈ ಆಸ್ಪತ್ರೆ ಹಲವು ಕುಟುಂಬಗಳಿಗೆ ವಿಶ್ವಾಸಾರ್ಹ ಮತ್ತು ಗೌರವಯುತ ಚಿಕಿತ್ಸಾ ಸೇವೆಗಳನ್ನು ಒದಗಿಸಲಿದೆ” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News