'ದಿನಕ್ಕೆ 60 ಸಾವಿರ ಖರ್ಚಾ? ನಾನೇನು ಫೈವ್ ಸ್ಟಾರ್ ಹೋಟೆಲ್ನಲ್ಲಿದ್ದೀನಾ?': ವಾಟ್ಸಾಪ್ ಚಾಟ್ ಲಂಚ ಆರೋಪಕ್ಕೆ ಹಾಸನ ಡಿಸಿ ಲತಾಕುಮಾರಿ ತೀವ್ರ ಆಕ್ರೋಶ
ಹಾಸನ : ಜಿಲ್ಲಾಡಳಿತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವೈರಲ್ ಆಗಿರುವ ವಾಟ್ಸಾಪ್ ಚಾಟ್ಗಳ ಸತ್ಯಾಸತ್ಯತೆ ಪರಿಶೀಲನೆಯಾಗುವ ಮೊದಲೇ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಆರೋಪಗಳನ್ನು ತಳ್ಳಿಹಾಕಿರುವ ಅವರು, ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿ ಬರುವವರೆಗೆ ಸುಳ್ಳು ಶೀರ್ಷಿಕೆಗಳ ಮೂಲಕ ಅಪಪ್ರಚಾರ ನಡೆಸುವುದನ್ನು ನಿಲ್ಲಿಸುವಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಡತಗಳ ವಿಲೇವಾರಿಗೆ ಲಕ್ಷಾಂತರ ರೂಪಾಯಿ ಲಂಚ ಪಡೆಯಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನವೆಂಬರ್ 8ರಂದು ಗಂಭೀರ ಆರೋಪ ಮಾಡಿದ್ದರು. ಜಿಲ್ಲಾಧಿಕಾರಿಯ ಆಪ್ತ ಸಹಾಯಕ ಶಶಿಕಿರಣ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ 15 ಪುಟಗಳ ವಾಟ್ಸಾಪ್ ಸಂಭಾಷಣೆಯ ಪ್ರತಿಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದರು. ಮೂರು ಕಲ್ಲು ಕ್ರಷರ್ಗಳಿಗೆ ಅನುಮತಿ ನೀಡಲು ₹60 ಲಕ್ಷ ಲಂಚ ಕೇಳಲಾಗಿದೆ ಹಾಗೂ ಲತಾಕುಮಾರಿ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡರಿಗೆ ₹75 ಲಕ್ಷ ನೀಡಲಾಗಿದೆ ಎಂಬ ಆರೋಪಗಳನ್ನು ಅವರು ಮಾಡಿದ್ದರು. ಈ ಆರೋಪಗಳನ್ನು ಜಿಲ್ಲಾಧಿಕಾರಿ ಮತ್ತು ಸಚಿವ ಶಿವಲಿಂಗೇಗೌಡ ನಿರಾಕರಿಸಿದ್ದಾರೆ.
ಈ ವಿವಾದದ ಬೆನ್ನಲ್ಲೇ ಜಿಲ್ಲಾಧಿಕಾರಿಯ ಆಪ್ತ ಸಹಾಯಕ ಶಶಿಕಿರಣ್ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡು ನಕಲಿ ವಾಟ್ಸಾಪ್ ಸಂಭಾಷಣೆಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಚಾಟ್ಗಳ ಮೂಲ ಹಾಗೂ ನೈಜತೆಯ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಬೆಳವಣಿಗೆಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮೂಲಕ ಪ್ರತಿಕ್ರಿಯಿಸಿರುವ ಲತಾಕುಮಾರಿ, ಇಬ್ಬರು ವ್ಯಕ್ತಿಗಳ ನಡುವಿನ ವಾಟ್ಸಾಪ್ ಸಂಭಾಷಣೆಯ ಪ್ರಿಂಟೌಟ್ ಬಿಡುಗಡೆ ಮಾಡಿದ ಮಾತ್ರಕ್ಕೆ ಅದರಲ್ಲಿರುವ ಎಲ್ಲ ಮಾಹಿತಿಯೂ ಸತ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಯಾರಾದರೂ ಮತ್ತೊಬ್ಬರ ಬಗ್ಗೆ ಅಸಂಬದ್ಧವಾಗಿ ಮಾತನಾಡಿ ಅದನ್ನು ವಾಟ್ಸಾಪ್ ಚಾಟ್ ರೂಪದಲ್ಲಿ ಬಿಡುಗಡೆ ಮಾಡಿದರೆ, ಅದರ ಸತ್ಯಾಸತ್ಯತೆ ಪರಿಶೀಲಿಸದೆ ಒಪ್ಪಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಯಾರ ವಿರುದ್ಧವೇ ಆರೋಪ ಕೇಳಿಬಂದರೂ ಮೊದಲು ಅದರ ನೈಜತೆಯನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಉನ್ನತ ಸ್ಥಾನದಲ್ಲಿರುವ ಅಥವಾ ಪ್ರಭಾವಶಾಲಿಯಾಗಿರುವ ವ್ಯಕ್ತಿಯೊಬ್ಬರು ಸುದ್ದಿಗೋಷ್ಠಿ ನಡೆಸಿ ಆರೋಪಗಳನ್ನು ಮಾಡಿದ ಮಾತ್ರಕ್ಕೆ ಅವುಗಳನ್ನು ಸತ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ತಪ್ಪು ಮಾಹಿತಿ ಹರಡಿದಾಗ ಅದನ್ನು ಪ್ರಶ್ನಿಸುವ ಮತ್ತು ಪ್ರತಿರೋಧಿಸುವ ಹಕ್ಕು ಆರೋಪಕ್ಕೆ ಒಳಗಾದವರಿಗೂ ಇದೆ. ನಿರಪರಾಧಿಗಳನ್ನು ಶಿಕ್ಷಿಸುವ ಅಧಿಕಾರ ಯಾರಿಗೂ ಇಲ್ಲ. ತಾವು ಮಾಡಿರುವುದೂ ಅದೇ ಕೆಲಸ ಎಂದು ಲತಾಕುಮಾರಿ ತಮ್ಮ ಪ್ರತಿಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಆರೋಪಗಳಿಂದ ತಮ್ಮ ಕಚೇರಿಯ ಸಿಬ್ಬಂದಿ ಹಾಗೂ ಅವರ ಕುಟುಂಬಗಳು ಅನುಭವಿಸುತ್ತಿರುವ ಮಾನಸಿಕ ಸಂಕಷ್ಟವನ್ನೂ ಅವರು ವಿವರಿಸಿದ್ದಾರೆ. ತಮ್ಮ ಸಿಬ್ಬಂದಿಯೊಬ್ಬರ ತಾಯಿ ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದಿದ್ದಾರೆ. ಆ ಕುಟುಂಬ ಆರ್ಥಿಕ ಸಂಕಷ್ಟಗಳ ನಡುವೆಯೇ ಜೀವನ ನಡೆಸುತ್ತಿದ್ದು, ಮಾಂಗಲ್ಯವನ್ನು ಒತ್ತೆಯಿಟ್ಟು ಬದುಕುವ ಪರಿಸ್ಥಿತಿಯಲ್ಲಿದೆ. ಇಂತಹ ಕುಟುಂಬದ ಸದಸ್ಯರ ವಿರುದ್ಧ ಆಧಾರರಹಿತ ಆರೋಪಗಳು ಕೇಳಿಬಂದಾಗ ಅದರ ಪರಿಣಾಮ ಎಷ್ಟು ಗಂಭೀರವಾಗಿರಬಹುದು ಎಂಬುದನ್ನು ಯೋಚಿಸಬೇಕು ಎಂದು ಹೇಳಿದ್ದಾರೆ.
ವಿಶೇಷವಾಗಿ ಕೆಲವು ಯೂಟ್ಯೂಬ್ ಚಾನೆಲ್ಗಳು ಹಾಗೂ ಇತರ ಮಾಧ್ಯಮಗಳ ವರ್ತನೆಯನ್ನು ಲತಾಕುಮಾರಿ ಟೀಕಿಸಿದ್ದಾರೆ. ವಾಟ್ಸಾಪ್ ಚಾಟ್ನಲ್ಲಿರುವ ವಿಷಯಗಳನ್ನು ದಿನಗಟ್ಟಲೆ, ವಾರಗಟ್ಟಲೆ ಪ್ರಸಾರ ಮಾಡಲಾಗುತ್ತಿದೆ. ಕೆಲವು ಮಾಧ್ಯಮಗಳು ಚಾಟ್ನಲ್ಲಿರುವ ಸಾಲುಗಳನ್ನು ಓದಿ, ಅವುಗಳನ್ನು ಮತ್ತಷ್ಟು ಉತ್ಪ್ರೇಕ್ಷಿಸಿ ಪ್ರಸ್ತುತಪಡಿಸುತ್ತಿವೆ. ತನಿಖೆ ಪೂರ್ಣಗೊಳ್ಳುವ ಮೊದಲೇ ಆರೋಪಿಗಳನ್ನು ಗುರುತಿಸಿದಂತೆ ವರದಿ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಯ ಒಂದು ದಿನದ ಖರ್ಚು ₹60 ಸಾವಿರ ಎಂಬ ಆರೋಪವನ್ನು ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ.
"ನಾನೇನು ಫೈವ್ ಸ್ಟಾರ್ ಹೋಟೆಲ್ನಲ್ಲಿ ಜೀವನ ಮಾಡ್ತಾ ಇದ್ದೀನಾ?" ಎಂದು ಪ್ರಶ್ನಿಸಿರುವ ಅವರು, ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಚೇರಿಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ದಿನಕ್ಕೆ ₹50 ಸಾವಿರ ಖರ್ಚಾಗುತ್ತದೆ ಎಂದು ಹೇಳುವುದು ವಾಸ್ತವಕ್ಕೆ ದೂರವಾಗಿದೆ ಎಂದು ತಿಳಿಸಿದ್ದಾರೆ. ಒಂದು ಕಡತಕ್ಕೆ ₹50 ಲಕ್ಷ ಎಂಬಂತಹ ದೊಡ್ಡ ಮೊತ್ತಗಳನ್ನು ಯಾವುದೇ ಆಧಾರವಿಲ್ಲದೆ ಪ್ರಸ್ತಾಪಿಸಲಾಗುತ್ತಿದೆ. ಆರೋಪ ಮಾಡುವವರು ತಾವು ಹೇಳುತ್ತಿರುವ ಹಣದ ಪ್ರಮಾಣ ಮತ್ತು ಅದರ ಗಂಭೀರತೆಯ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದಾರೆ.
ಯಾರೋ ಇಬ್ಬರು ವ್ಯಕ್ತಿಗಳು ಮಾತನಾಡಿರುವುದನ್ನು ವಾಟ್ಸಾಪ್ ಚಾಟ್ ಎಂದು ಪ್ರಸ್ತುತಪಡಿಸಿ, ಅದರ ಆಧಾರದಲ್ಲಿ ಮತ್ತೊಬ್ಬರನ್ನು ಮಾನಸಿಕವಾಗಿ ಹಿಂಸಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.
ಆರೋಪಕ್ಕೆ ಸಂಬಂಧಿಸಿದ ಚಾಟ್ಗಳ ಪ್ರತಿಗಳನ್ನು ತನಿಖೆಗೆ ಒಪ್ಪಿಸಲಾಗಿದೆ. ಅವುಗಳ ನೈಜತೆಯ ಕುರಿತು ವರದಿ ಬರಬೇಕಿದೆ. ಅಲ್ಲಿಯವರೆಗೆ ಮಾಧ್ಯಮಗಳು ಸಂಯಮದಿಂದ ವರ್ತಿಸಬಹುದಿತ್ತು. ಆದರೆ ಕೆಲವು ಮಾಧ್ಯಮಗಳು ತನಿಖಾ ವರದಿಗೂ ಮುನ್ನವೇ ತಮ್ಮದೇ ತೀರ್ಪು ನೀಡುತ್ತಿವೆ. ಅವಹೇಳನಕಾರಿ ಶೀರ್ಷಿಕೆಗಳ ಮೂಲಕ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತಪ್ಪಿತಸ್ಥರೆಂದು ಬಿಂಬಿಸುತ್ತಿವೆ ಎಂದು ಅವರು ಆಕ್ಷೇಪಿಸಿದ್ದಾರೆ.
ಕೆಲವು ಮಾಧ್ಯಮಗಳು ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯ ಹೆಸರು ಮತ್ತು ಗುರುತನ್ನು ಬಹಿರಂಗಪಡಿಸುತ್ತಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಪ ಸಾಬೀತಾಗದ ವ್ಯಕ್ತಿಗಳ ಹೆಸರುಗಳನ್ನು ಪದೇಪದೇ ಪ್ರಸಾರ ಮಾಡುವುದರಿಂದ ಅವರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಸಿಬ್ಬಂದಿಗೂ ವೈಯಕ್ತಿಕ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳಿವೆ. ಅವರ ಕುಟುಂಬಗಳ ಬದುಕನ್ನು ಹಾಳುಮಾಡುವ ರೀತಿಯಲ್ಲಿ ವರದಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಈ ರೀತಿಯ ನಿರಂತರ ಆರೋಪಗಳು ಮತ್ತು ಸಾರ್ವಜನಿಕ ಅವಮಾನಗಳಿಂದ ಸಿಬ್ಬಂದಿ ಮಾನಸಿಕವಾಗಿ ಕುಗ್ಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿರುವ ಲತಾಕುಮಾರಿ, "ಅವರು ಸೂಸೈಡ್ ಮಾಡ್ಕೊಂಡು ಸಾಯಲಿ ಅಂತ ಕಾಯ್ತಾ ಇದ್ದೀರಾ ಮಾಡದೆ ಇರೋ ತಪ್ಪಿಗೆ?" ಎಂದು ಪ್ರಶ್ನಿಸಿದ್ದಾರೆ.
ಆರೋಪಗಳಿಂದ ಆತಂಕಗೊಂಡಿರುವ ಸಿಬ್ಬಂದಿಗೆ ಧೈರ್ಯದಿಂದ ಇರುವಂತೆ ತಾವು ತಿಳಿಸಿರುವುದಾಗಿ ಅವರು ಹೇಳಿದ್ದಾರೆ. ತಪ್ಪು ಮಾಡದವರು ಭಯಪಡುವ ಅಗತ್ಯವಿಲ್ಲ. ಅದೇ ವೇಳೆ, ಯಾರಾದರೂ ತಪ್ಪು ಮಾಡಿರುವುದು ತನಿಖೆಯಲ್ಲಿ ಸಾಬೀತಾದರೆ ಅವರಿಗೆ ಶಿಕ್ಷೆಯಾಗಲೇಬೇಕು ಎಂಬ ನಿಲುವನ್ನೂ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದ ಹಿಂದೆ ತಮ್ಮನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ರೂಪಿಸಿರುವ ಜಾಲವಿರಬಹುದು ಎಂಬ ಅನುಮಾನವನ್ನೂ ಜಿಲ್ಲಾಧಿಕಾರಿ ವ್ಯಕ್ತಪಡಿಸಿದ್ದಾರೆ.
ತಮ್ಮ ಕಚೇರಿಯ ಆಪ್ತ ಸಹಾಯಕ ವಿಭಾಗವಾಗಲಿ ಅಥವಾ ಇತರ ಯಾವುದೇ ವಿಭಾಗದ ಸಿಬ್ಬಂದಿಯಾಗಲಿ, ಯಾರಾದರೂ ತಪ್ಪು ಮಾಡಿರುವುದು ಸಾಬೀತಾದರೆ ಅವರು ಕಾನೂನು ಪ್ರಕಾರ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಮಾಧ್ಯಮಗಳು, ವಿಶೇಷವಾಗಿ ಯೂಟ್ಯೂಬ್ ಚಾನೆಲ್ಗಳು, ವಾಟ್ಸಾಪ್ ಗುಂಪುಗಳು ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ವಿಷಯಗಳನ್ನು ಹಂಚಿಕೊಳ್ಳುವವರು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಲತಾಕುಮಾರಿ ಮನವಿ ಮಾಡಿದ್ದಾರೆ. ಆರೋಪಕ್ಕೆ ಒಳಗಾದವರ ಪ್ರತಿಕ್ರಿಯೆಯನ್ನು ತಕ್ಷಣ ನೀಡಿದರೆ ಅದನ್ನೂ ತಪ್ಪಾಗಿ ಅರ್ಥೈಸಲಾಗುತ್ತದೆ. ಆದರೆ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಮಾಧ್ಯಮಗಳು ತಾವೇ ನ್ಯಾಯಾಧೀಶರಂತೆ ವರ್ತಿಸಿ ತೀರ್ಪು ನೀಡುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ.
ಇತ್ತ, ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಕೂಡ ಕುಮಾರಸ್ವಾಮಿ ಅವರ ಆರೋಪಗಳನ್ನು ನಿರಾಕರಿಸಿದ್ದು, ಭ್ರಷ್ಟಾಚಾರ ನಡೆದಿರುವುದಕ್ಕೆ ಸಾಕ್ಷ್ಯವಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವಂತೆ ಸವಾಲು ಹಾಕಿದ್ದಾರೆ.